ಕೊಪ್ಪ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಆಪ್ತರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸರಕಾರಿ ವೇತನ ಕೊಡಿಸಿದ್ದಾರೆಂದು ಎಂದು ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದ್ದು, ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಇತ್ತೀಚಿಗೆ ಕೊಪ್ಪ ಪಟ್ಟಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಹಾಗೂ ಹಾಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ತಮ್ಮ ಸರಕಾರಿ ಕಚೇರಿಯನ್ನು ದುರುಪಯೋಪಡಿಸಿಕೊಂಡಿದ್ದು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಂಬಳ ಕೊಡಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದಾರೆ ಎಂದು ಆರೋಪಿಸಿ ವಿಜಯಾನಂದ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಈ ವ್ಯಕ್ತಿ ಶಾಸಕ ಜೀವರಾಜ್ ಅವರ ಕಾರು ಚಾಲಕನಾಗಿದ್ದು, ಜೀವರಾಜ್ ಅವರ ಕಚೇರಿ ಸಿಬ್ಬಂದಿಯಾಗಿ ಸರಕಾರಿ ಸಂಬಳವನ್ನೂ ತೆಗೆದುಕೊಳ್ಳುತ್ತಿದ್ದಾರೆ ಎಂದ ಅವರು, ಶಾಸಕ ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಜೀವರಾಜ್ ಅವರು ತಮ್ಮ ಕಾರು ಚಾಲಕನನ್ನು ಬಳಸಿಕೊಂಡಿದ್ದಾರೆ. ಶಾಸಕ ರಾಜೇಗೌಡ ಅವರು ವಿಜಯಾನಂದರಿಗೆ ಆಮಿಷವೊಡ್ಡಿ ದೂರು ಕೊಡಿಸಿದ್ದಾರೆ. ಜೀವರಾಜ್ ಅವರ ಮಗ ಬೆಂಗಳೂರಿನಲ್ಲೇ ಇದ್ದು ಆತನ ಬಳಿಯಿಂದಲೇ ದೂರು ಕೊಡಿಸುವ ಧೈರ್ಯ ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದರು.
ವಿಜಯಾನಂದ ಅವರು ಜೀವರಾಜ್ ಕಚೇರಿ ಸಿಬ್ಬಂದಿ ಮಾತ್ರವಲ್ಲದೇ ಕೊಪ್ಪ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯೂ ಆಗಿದ್ದಾರೆ. ಇಂತಹ ವ್ಯಕ್ತಿಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರು ಸರಕಾರಿ ಹುದ್ದೆ ಕೊಟ್ಟು ಸಿಎಂ ಕಚೇರಿಯಿಂದ ಸಂಬಳ ಕೊಡಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಈ ಮೂಲಕ ಜೀವರಾಜ್ ಅವರು ತಮ್ಮ ಕಚೇರಿ ಸಿಬ್ಬಂದಿಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ವಿಜಯಾನಂದ್ ಮಾತ್ರವಲ್ಲದೇ ಕೊಪ್ಪ ತಾಲೂಕಿನ ಕೆಲ ಗ್ರಾಪಂ ಸದಸ್ಯರನ್ನೂ ತನ್ನ ಕಚೇರಿ ಸಿಬ್ಬಂದಿ ಎಂಬಂತೆ ದಾಖಲೆಗಳಲ್ಲಿ ತೋರಿಸಿ ಅವರಿಗೂ ಸಹ ಮುಖ್ಯಮಂತ್ರಿ ಕಚೇರಿಯಿಂದ ಸಂಬಳ ಕೊಡಿಸಿದ್ದಾರೆಂದು ಆರೋಪಿಸಿದ ಸುಧೀರ್ ಕುಮಾರ್, ಪುಣ್ಯಪಾಲ್ ಎಂಬ ಬಿಜೆಪಿಯ ಬಾಡಿಗೆ ಭಾಷಣಕಾರನಿಗೂ 31,500 ರೂ. ಮಸಿಕ ಸಂಬಳ ನಿಗದಿ ಮಾಡಿರುವುದು ದಾಖಲೆಗಳಲ್ಲಿದೆ. ಅಲ್ಲದೇ ಕೊಪ್ಪ ಗ್ರಾಮಾಂತರ ವಿಭಾಗದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆ ಹಾಗೂ ಕೊಪ್ಪ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ, ಬಿಜೆಪಿ ಯುವಮೋರ್ಚಾದ ಶೃತಿ ಎಂ.ಸಿ ಎಂಬವರಿಗೂ ಕೂಡ ಆಪ್ತ ಸಹಾಯಕಿ ಎಂದು ತೋರಿಸಿ 31,500 ರೂ. ಮಾಸಿಕ ಸಂಬಳ ನೀಡಲು ಜೀವರಾಜ್ ಸಹಕರಿಸಿದ್ದಾರೆ. ಅಲ್ಲದೇ ಕೊಪ್ಪ ಪ.ಪಂ ಮಾಜಿ ಸದಸ್ಯೆ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ವಾಣಿ ಸತೀಶ್ ಹೆಗ್ಡೆ ಎಂಬವರಿಗೂ 17,500 ರೂ. ಮಾಸಿಕ ಸರಕಾರಿ ಸಂಬಳ ನಿಗದಿ ಮಾಡಿದ್ದಾರೆ ಎಂದು ಸುಧೀರ್ ಕುಮಾರ್ ದಾಖಲೆಗಳ ಸಹಿತ ಆರೋಪಿಸಿ ವಾಗ್ದಾಳಿ ನಡೆಸಿದರು.
ಮಾಜಿ ಶಾಸಕ, ಹಾಲಿ ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಕಚೇರಿಯಿಂದಲೇ ಸಂಬಳ ನೀಡುವಂತಹ ಭ್ರಷ್ಟಾಚಾರ ಮಾಡಿದ್ದಾರೆ. ಈ ಸಂಬಂಧ ದಾಖಲೆಗಳಿದ್ದು, ಸಿಎಂ ಬೊಮ್ಮಾಯಿ ಅವರಿಗೆ ತಾಕತ್, ಧಮ್ ಇದ್ದಲ್ಲಿ ತಮ್ಮ ಆಪ್ತ ಕಾರ್ಯದರ್ಶಿ ಜೀವರಾಜ್ ವಿರುದ್ಧ ಸುಮೊಟೊ ಕೇಸ್ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ.