ಸಿಎಂ ಹೆಸರಿನಲ್ಲಿ ಮೋಸ : 30 ಲಕ್ಷ ಕಳೆದುಕೊಂಡ ಬಡಕುಟುಂಬ

ಮಂಡ್ಯ: “ನನಗೆ ಸಿಎಂ ಬೊಮ್ಮಾಯಿ ತುಂಬಾ ಆಪ್ತರಿದ್ದಾರೆ, ನಿಮ್ಮ ಮಗನಿಗೆ ಪಿಎಸ್‌ಐ ಕೆಲಸ ಕೊಡಿಸುತ್ತೇನೆ” ಎಂದು ಬಿಜೆಪಿ ಮುಖಂಡನ ಗೆಳಯನೊಬ್ಬ ಬಡ ಕುಟುಂಬಕ್ಕೆ ಮೋಸ ಮಾಡಿದ ಘಟನೆ ಶ್ರೀರಂಗಪಟ್ಟಣದ ಗಾಮನಹಳ್ಳಿಯಲ್ಲಿ ನಡೆದಿದೆ.

ಮಗನಿಗೆ ಪಿಎಸ್​ಐ ಕೆಲಸ ಕೊಡಿಸುವ ಆಸೆಗೆ ಬಿದ್ದ ರೈತನೊಬ್ಬ ಬರೋಬ್ಬರಿ 30.25 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದೀಗ ರೈತನ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ ನಿಂಗರಾಜು, ಮೋಸ ಹೋದ ರೈತ. ಕೋಲಾರ ಮೂಲದ ಮಂಜುನಾಥ್ ಅಲಿಯಾಸ್​ ಅಕ್ಷಯ್ ಮಂಜುನಾಥ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ನಿಂಗರಾಜು ಮಗ ಅರುಣ್ ಕುಮಾರ್ ಪಿಎಸೈ ಪರೀಕ್ಷೆ ಬರೆದಿದ್ದ. ಇದರ ನಡುವೆ ನಿಂಗರಾಜುವಿಗೆ ಬಿಜೆಪಿ ಮುಖಂಡರೊಬ್ಬರ ಮೂಲಕ ಅಕ್ಷಯ್​ ಮಂಜುನಾಥ್​ ಪರಿಚಯವಾಗಿದ್ದ. ತಾನು ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದ. 40 ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ.

ಮಂಜುನಾಥ್​ ಹೇಳಿದ ಮಾತನ್ನು ನಂಬಿ 38 ಲಕ್ಷ ಕೊಡುವುದಾಗಿ ಒಪ್ಪಿ 30.25 ಲಕ್ಷ ರೂಪಾಯಿಯನ್ನು ನಿಂಗರಾಜು ನೀಡಿದ್ದ. 17 ಲಕ್ಷ ಬ್ಯಾಂಕ್ ಮೂಲಕ RTGS ಮಾಡಿದ್ದ. ಉಳಿದ 13.25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದ. ಬಡ್ಡಿಗೆ ಸಾಲ ಮಾಡಿ ಹಾಗೂ ತನ್ನ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಹಣ ಜೋಡಿಸಿದ್ದ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಇದಾದ ಬಳಿಕ ಪಿಎಸೈ ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರು ಬಾರದಿದ್ದಾಗ ನಿಂಗರಾಜು ಹಣ ವಾಪಾಸ್ ಕೇಳಿದ್ದ. ಆದರೆ, ಹಣ ವಾಪಸ್ ಕೊಡದ ಮಂಜುನಾಥ್​ ಸಬೂಬು ಹೇಳಿಕೊಂಡು ಬರುತ್ತಿದ್ದಾನೆ. ಇತ್ತ ಮಗನಿಗೆ ಕೆಲಸವೂ ಸಿಗದೆ, ಅತ್ತ ಹಣವೂ ಇಲ್ಲದೆ ನಿಂಗರಾಜು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕುಟುಂಬಕ್ಕೆ ಬಂದಿದೆ.

ದೂರು ನೀಡಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕುಟುಂಬ ಕಣ್ಣೀರಿಡುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಹಾಗೂ ಮಂಡ್ಯ ಎಎಸ್ಪಿಗೆ ನಿಂಗರಾಜು ದೂರು ನೀಡಿದ್ದು, ಎಫೈಆರ್ ದಾಖಲು ಮಾಡದೇ ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ನಿಂಗರಾಜು ಅಳಲು ತೋಡಿಕೊಂಡಿದ್ದಾರೆ.‌ ಸಿಎಂ ಹೆಸರು ಬೇರೆ ಉಲ್ಲೇಖವಾಗಿದ್ದರಿಂದ ಆರೋಪಿಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಹೆಸರು ದುರುಪಯೋಗ, ಹಣ ವಂಚನೆ ಮಾಡಿರುವ ಅಕ್ಷಯ್‌ ಮಂಜುನಾಥ್‌ ಹಾಗೂ ಬಿಜೆಪಿ ಮುಖಂಡನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಠಾಣೆಗೆ ಕರೆಯಿಸಿ ರಾಜಿ ಮಅಡುವುದು ಸರಿಯಲ್ಲ, ಕೂಡಲೆ ಅವರನ್ನು ಬಂಧಿಸಬೇಕು. ಸ್ಥಳೀಯ ಪೊಲೀಸರು ನಿರ್ಲಕ್ಷ್ಯ ಮಾಡಿದರೆ, ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ನಿಂಗರಾಜು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *