ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮತ್ತೆ ಭೂಕಂಟಕ ಎದುರಾಗಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜಮೀನನ್ನು ಅಕ್ರಮವಾಗಿ ಡೀನೋಟಿಫೈ ಮಾಡಿದ ಆರೋಪದಲ್ಲಿ ತನಿಖೆ ಎದುರಿಸಬೇಕಾಗಿ ಬಂದಿದೆ.
ಬೆಂಗಳೂರಿನ ಜಾಲ ಹೋಬಳಿಯ ಹೂವಿನಾಯಕಹಳ್ಳಿಯಲ್ಲಿ ಸುಮಾರು 20 ಎಕರೆ ಕೆಐಎಡಿಬಿ ಭೂಮಿಯ ಅಕ್ರಮ ಡಿನೋಟಿಫಿಕೇಷನ್ ಆರೋಪ ಪ್ರಕರಣ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್‌ಶೀಟ್ ಪ್ರಕಾರ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಡಿನೋಟಿಫಿಕೇಷನ್ ಪ್ರಕರಣದಿಂದ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಹ್ಮಣ್ಯ ಅವರನ್ನು ಕೈಬಿಟ್ಟು ಲೋಕಾಯುಕ್ತ ಕೋರ್ಟ್ ಹೊರಡಿಸಿದ್ದ ಆದೇಶ ರದ್ದುಕೋರಿ ಉದ್ಯಮಿ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಹಿಂದೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ದೋಷಾರೋಪಪಟ್ಟಿ ಮೇರೆಗೆ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಮುಂದುವರೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, ‘ಅಧಿಕಾರ ದುರುಪಯೋಗದ ಮೂಲಕ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕುವ ಯತ್ನಕ್ಕೆ ಹೈಕೋರ್ಟ್ ತಡೆಯೊಡ್ಡಿದೆ. ಕೆಐಎಡಿಬಿ ಡಿನೋಟಿಫಿಕೇಷನ್ ಹಗರಣದ ತನಿಖೆಗೆ ಆದೇಶಿಸಿದೆ. ಸಿಎಂ ಕುರ್ಚಿಯಲ್ಲಿ ಕುಳಿತು ತನಿಖೆಯನ್ನು ಹೇಗೆ ಎದುರಿಸುತ್ತೀರಿ? ಯಾವ ನೈತಿಕತೆಯಲ್ಲಿ ಕಳಂಕಿತ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೀರಿ ಎಂದು ಯಡಿಯೂರಪ್ಪಗೆ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದೆ.
ಅಧಿಕಾರ ದುರುಪಯೋಗದ ಮೂಲಕ ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕುವ ಯತ್ನಕ್ಕೆ ಹೈಕೋರ್ಟ್ ತಡೆಯೊಡ್ಡಿದೆ.
ಕೆಐಎಡಿಬಿ ಡಿನೋಟಿಫಿಕೇಷನ್ ಹಗರಣದ ತನಿಖೆಗೆ ಆದೇಶಿಸಿದೆ.ಸಿಎಂ ಕುರ್ಚಿಯಲ್ಲಿ ಕುಳಿತು ತನಿಖೆಯನ್ನು ಹೇಗೆ ಎದುರಿಸುತ್ತೀರಿ? ಯಾವ ನೈತಿಕತೆಯಲ್ಲಿ ಕಳಂಕಿತ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿರಿ @BSYBJP ಅವರೇ?#ಭ್ರಷ್ಟಬಿಜೆಪಿ
— Karnataka Congress (@INCKarnataka) March 17, 2021
ಪ್ರಕರಣದ ಹಿನ್ನೆಲೆ : ನಗರದ ಹೂವಿನಾಯಕನಳ್ಳಿ ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಗಳಿಗೆ ಕೆಐಎಡಿಬಿ ವಶಪಡಿಸಿಕೊಂಡಿದ್ದ 20 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ಆಲಂಪಾಷಾ 2011ರ ಆ.20ರಂದು ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.
ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2012 ರ ಮೇ 21ರಂದು ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಕೆಲ ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ನ್ಯಾಯಾಲಯ 2016ರ ಜುಲೈ 25ರಂದು ಆರೋಪಿಗಳ ವಿರುದ್ಧದ ಚಾರ್ಚ್‌ಶೀಟ್ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರ ಆಲಂಪಾಷಾ ಹೈಕೋರ್ಟ್ ಮೆಟ್ಟಿಲೇರಿದ್ದರು.