ಮಡಿಕೇರಿ: ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿಗೆ ಹೋಗುತ್ತಿರುವುದು ರಾಜ್ಯದ ಅಭಿವೃದ್ಧಿ ಕೆಲಸಗಳ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಬಗ್ಗೆ ಚರ್ಚಿಸಲು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿಯೂ ಯಾವುದಕ್ಕೆ ಹೋಗಿದ್ದಾರೆ ಎಂದು ತಿಳಿದು ಬಂದಿಲ್ಲ. ಇವರೇ ದೆಹಲಿಗೆ ಹೋಗಿದ್ದಾರೋ ಇಲ್ಲ, ಪ್ರಧಾನಿ ಮೋದಿ ಅವರೇ ಇವರನ್ನು ಕರೆಸಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿ ಪ್ರವಾಸದ ಬಗ್ಗೆ ಅವರದೇ ಪಕ್ಷದ ಎಂಎಸ್‌ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಸಮೀಪ ಇರುವ ರೆಸಾರ್ಟ್ ಒಂದರಲ್ಲಿ ನಡೆದ ಹಾರಂಗಿ ನೀರು ಬಳಕೆದಾರರ ಸಹಕಾರ ಸಂಘದ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬಿಎಸ್‌ವೈ ಅವರ ದಿಢೀರ್ ದೆಹಲಿ ಭೇಟಿ ಬಗ್ಗೆ ಪ್ರಸ್ತಾಪಸಿದರು.
ಇದನ್ನು ಓದಿ: ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”
ಅವರು ಆರ್ಥಿಕ ಅಭಿವೃದ್ಧಿ ವಿಷಯಗಳಿಗೆ ಹೋಗಿದ್ದಾರೆ ಎನ್ನುವುದಾದರೆ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ್ ಅವರು ಬಂದಿದ್ದಾಗ ಅವರನ್ನು ಭೇಟಿ ಮಾಡಲಿಲ್ಲ. ಕೇಂದ್ರ ಹಣಕಾಸು ಸಚಿವರು ಎರಡು ದಿನಗಳು ಬೆಂಗಳೂರಿನಲ್ಲಿದ್ದರೂ ಮುಖ್ಯಮಂತ್ರಿಗಳು ಭೇಟಿ ಮಾಡಲಿಲ್ಲ. ಗೃಹ ಸಚಿವರನ್ನು ಮಾತ್ರ ಭೇಟಿ ಮಾಡಲು ಕಳುಹಿಸಿದರು. ಇದೆಲ್ಲಾ ಏಕೆ ಹೀಗಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಕೆಲಸವನ್ನು ಮಾಡುವುದಕ್ಕಾಗಿ ಹೋಗಿರಬಹುದು, ಎಲ್ಲವೂ ಒಳ್ಳೆಯದಾಗಲಿ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.
ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಗಣಿಗಾರಿಕೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ವಿಶ್ವನಾಥ್ ಅವರು ಜಲಾಶಯ ಬಿರುಕು ಬಿಟ್ಟಿದೆ ಎಂದಿರುವ ಮಂಡ್ಯ ಸಂಸದೆ ಸುಮಲತಾ ಅವರ ಹೇಳಿಕೆ ನೀಡಿದ್ದಾರೆ. ಕೆಆರ್‌ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಜಲಾಶಯಕ್ಕೆ ತೊಂದರೆ ಇದೆ. ಕಲ್ಲುಗಣಿಗಾರಿಕೆಯಲ್ಲಿ 80 ಅಡಿ ಆಳದವರೆಗೆ ಕೊರೆದು ಕೆಮಿಕಲ್ ಬಳಸಿ ಬ್ಲಾಸ್ಟ್ ಮಾಡಲಾಗುತ್ತಿದೆ. ಇದು ಅಣೆಕಟ್ಟೆಗೆ ಅತ್ಯಂತ ಅಪಾಯಕಾರಿ, ಹಾಗೇನಾದರೂ ಅಪಾಯವಾದರೆ ಅದನ್ನು ಊಹಿಸಿಕೊಳ್ಳಲು ಸಾಧ್ಯವಿದೆಯೇ ಎಂದು ಪ್ರಶ್ನೆ ಮಾಡಿದರು.
ಇದನ್ನು ಓದಿ: ಸಿಎಂ ದೆಹಲಿ ಭೇಟಿ-ಸಚಿವ ಸಂಪುಟ ವಿಸ್ತರಣೆ ಊಹಾಪೋಹ: ಸಚಿವ ವಿ.ಸೋಮಣ್ಣ
ಜೆಡಿ(ಎಸ್) ಪಕ್ಷವು ರೈತರ ಪರವಾಗಿರುವ ಪಕ್ಷ, ಕುಮಾರಸ್ವಾಮಿ ಅವರು, ದೇವೇಗೌಡ್ರು, ರೈತರ ಪರವಾಗಿ ಅಂದ್ರೆ ಅಣೆಕಟ್ಟೆ ಉಳಿಸುವುದಕ್ಕೆ ಮಾತನಾಡಬೇಕು. ಆದರೆ ಅವರು ರಾಜಕಾರಣ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳು ಗಣಿಗಾರಿಕೆ ಪರವಾಗಿವೆ, ಅಲ್ಲಿನ ಎಂಎಲ್ಎಗಳೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಅಂದರೆ ಕೆಆರ್‌ಎಸ್ ರಕ್ಷಣೆ ಮಾಡುವವರು ಯಾರು ಎಂದರು.
ಮಂಡ್ಯದ ಸಂಸದೆಯಾಗಿ ಸುಮಲತಾ ಅವರು ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ ಜನ ಪ್ರತಿನಿಧಿಗಳು, ಸಚಿವರು ಅಣೆಕಟ್ಟೆ ಸುರಕ್ಷಿತವಾಗಿದೆ ಎಂದು ಹೇಳುವುದಕ್ಕೆ ಅವರೇನು ಭೂಗರ್ಭಶಾಸ್ತ್ರಜ್ಞರೇ ಎಂದು ಪ್ರಶ್ನಿಸಿದರು.