ನವದೆಹಲಿ: ಕೇಂದ್ರದಿಂದ ರಾಜ್ಯಕ್ಕೆ ಕಳೆದ ವರ್ಷದ ₹11,400 ಕೋಟಿ ಜಿಎಸ್‌ಟಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮಾಸಿಕ ಕಂತಿನ ರೂಪದಲ್ಲಿ ಬಿಡುಗಡೆ ಮಾಡುವ ಭರವಸೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ ಮಾತನಾಡಿ ʻʻಕೇಂದ್ರ ಸರಕಾರಕ್ಕೆ ಹಲವು ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ಕೇಳಲಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ನಬಾರ್ಡ್ ನೆರವಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಯಾವುದೇ ಬೇಡಿಕೆ ಇದ್ದರೂ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆʼʼ ಎಂದು ಹೇಳಿದರು.
ಇದನ್ನು ಓದಿ: ಜಿಎಸ್‌ಟಿ ಪರಿಹಾರ ಬದಲಿಗೆ ಕೇಂದ್ರದಿಂದ ಸಾಲ
ಬಾಕಿ ಹಣದೊಂದಿಗೆ ರೂ.18 ಸಾವಿರ ಕೋಟಿ ರೂಪಾಯಿಗಳ ಸಾಲ ಕೂಡ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸೂಕ್ ಮಾಂಡವ್ಯ ಭೇಟಿಯ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ʻʻಕೊರೊನಾ ಲಸಿಕೆ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಚರ್ಚಿಸಿದ್ದೇನೆ, ಮುಂದಿನ ತಿಂಗಳಿನಿಂದ ದಿನಕ್ಕೆ 1.5 ಲಕ್ಷ ಕೋವಿಡ್ ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ. ಕೋವಿಡ್ 3 ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಸಚಿವರನ್ನು ಸಮ್ಮತ್ತಿಸಿದ್ದಾರೆʼʼ ಎಂದರು.
ಇದನ್ನು ಓದಿ: ಕೇಂದ್ರದಿಂದ ರಾಜ್ಯಗಳಿಗೆ ₹75 ಸಾವಿರ ಕೋಟಿ ಜಿಎಸ್‌ಟಿ ಸಾಲ ಬಿಡುಗಡೆ
ಪ್ರಸ್ತುತ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 63 ರಿಂದ 64 ಲಕ್ಷಕ್ಕೆ ಲಸಿಕೆ ಬಿಡುಗಡೆಯಾಗುತ್ತಿದೆ. ಅದನ್ನು ಪ್ರತಿದಿನಕ್ಕೆ ಒಂದೂವರೆ ಲಕ್ಷಕ್ಕೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟಿದ್ದೇನೆ, ಇದರಿಂದ ಪ್ರತಿದಿನ ಸುಮಾರು 5 ಲಕ್ಷ ಮಂದಿಗೆ ಲಸಿಕೆ ನೀಡಲು ಸಾಧ್ಯವಾಗಲಿದೆ ಎಂದರು.
ಸಚಿವ ಸಂಪುಟ ರಚನೆ ಬಗ್ಗೆ ಪ್ರಸ್ತಾಪಿಸಿದ ಸಿಎಂ ಬೊಮ್ಮಾಯಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರೊಂದಿಗೆ ಚರ್ಚಿಸುತ್ತೇನೆ. ಅವರೊಂದಿಗೆ ಸಂಪುಟ ರಚನೆ ಬಗ್ಗೆ ಅನುಮತಿ ಕೇಳುವೆ. ಶೀಘ್ರದಲ್ಲಿ ಅನುಮೋದನೆ ದೊರೆಯಲಿದೆ ಎಂದು ಹೇಳಿದರು.