- ಶುಕ್ರವಾರ ರಾತ್ರಿಯಿಂದಲೇ ಕಠಿಣ ನೈಟ್ ಕರ್ಫ್ಯೂ ಜಾರಿ
- ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೆ ನಿರ್ಧಾರ
- ಆಗಸ್ಟ್ 23ರಿಂದ ಶಾಲಾ ತರಗತಿಗಳು ಆರಂಭಕ್ಕೆ ತೀರ್ಮಾನ
ಬೆಂಗಳೂರು : ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸೋಂಕಿನ ಆರ್ಭಟಕ್ಕೆ ಕಡಿವಾಣ ಹಾಕಲು ಇಂದಿನಿಂದ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಣತರ ಜತೆ ಸಭೆ ನಡೆಸಲಾಗಿದ್ದು, ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು ರಾಜ್ಯಾದ್ಯಂತ ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ನಿಷೇಧಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು. ನೈಟ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು. ಕೊರೋನಾ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ, ಸೇರಿದಂತೆ ಇನ್ನಿತರ ಗಡಿ ಜಿಲ್ಲೆಗಳಲ್ಲಿ ವಿಕೇಂಡ್ ಕರ್ಫ್ಯೂ ಜಾರಿಗೆ ತರಲಾಗುವುದು.
ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ನಿಯಂತ್ರಣ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿದರು. ಮೂರನೇ ಅಲೆ ನಿಯಂತ್ರಣ ಸಂಬಂಧ ತೆಗೆದುಕೊಳ್ಳಬಹುದಾದ ಅಗತ್ಯ ಮುಂಜಾಗ್ರತಾ ಕ್ರಮದ ಕುರಿತು ಈ ವೇಳೆ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು. ಪಾಸಿಟಿವಿಟಿ ರೇಟ್ ದರ ಆಧರಿಸಿ, ಕೆಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಶಾಲೆಗಳ ಆರಂಭ ಯಾವಾಗ? : ಆರೋಗ್ಯ ಪರಿಣತರು ಮತ್ತು ಶಿಕ್ಷಣ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದ್ದು, ಬೇರೆ ರಾಜ್ಯಗಳಲ್ಲಿನ ತೀರ್ಮಾನಗಳನ್ನು ಕೂಡ ಪರಿಗಣಿಸಿ ಶಾಲೆಗಳನ್ನು ಹಂತ ಹಂತವಾಗಿ ತೆರೆಯಲು ನಿರ್ಧರಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
9, 10, 11, ಮತ್ತು 12ನೇ ತರಗತಿಗಳಿಗೆ ಆಗಸ್ಟ್ 23ರಿಂದ ಶಾಲೆಗಳನ್ನು ಷರತ್ತುಬದ್ಧವಾಗಿ ಆರಂಭಿಸಲು ತೀರ್ಮಾನಿಸಲಾಗಿದೆ. ತರಗತಿಗಳು ಬ್ಯಾಚ್‌ಗಳಲ್ಲಿ ನಡೆಯಲಿದ್ದು, ಎರಡು ಬ್ಯಾಚ್‌ಗಳಲ್ಲಿ ಪರ್ಯಾಯ ದಿನಗಳಂದು ತರಗತಿಗಳನ್ನು ನಡೆಸಲಾಗುವುದು. ಇದರ ವಿವರಗಳನ್ನು ಮುಂದೆ ನೀಡಲಾಗುವುದು ಎಂದರು.
ಆಗಸ್ಟ್ ಅಂತ್ಯದ ವೇಳೆ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಮತ್ತು ಅಖಿಲ ಭಾರತ ಮಟ್ಟದಲ್ಲಿನ ಸನ್ನಿವೇಶಗಳನ್ನು ಹಾಗೂ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಗಳನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಕೊವೀಡ್ ಮೂರನೇ ಅಲೆಯ ತಜ್ಞರ ಸಮಿತಿ ಅಧ್ಯಕ್ಷರಾದ ದೇವಿಶೆಟ್ಟಿ, ಟಾಸ್ಕ್ ಫೋರ್ಸ್ ಸದಸ್ಯರಾದ ಡಾ ಮಂಜುನಾಥ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್, ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಚಿವರಾದ ಆರ್ ಅಶೋಕ್, ಕೆ ಸುಧಾಕರ್ ಕೂಡ ಈ ವೇಳೆ ಉಪಸ್ಥಿತರಿದ್ದರು.