ಕಾರವಾರ: ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದರು. ನೆನ್ನೆ ಪ್ರವಾಸ ಕೈಗೊಂಡ ಅವರು ಮೊದಲು ಹುಬ್ಬಳ್ಳಿಗೆ ಭೇಟಿ ನೀಡಿದರು. ನಂತರ ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆ ಭೇಟಿ ನೀಡಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ, ಅರಬೈಲ್ ಘಾಟ್ ಇನ್ನಿತರೆ ಕಡೆಗಳಲ್ಲಿ ಮುಖ್ಯಮಂತ್ರಿ ಬರುತ್ತಾರೆ, ನಮ್ಮ ಮಾತು ಕೇಳ್ತಾರೆ ಅಂತ ಸಂತ್ರಸ್ತರು ಕಾದಿದ್ದರು. ಯಲ್ಲಾಪುರಕ್ಕೆ ಬರುತ್ತಿದ್ದಂತೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಚಾರದಲ್ಲಿ ಸರಕಾರ ಹೇಗೆ ಪರಿಹಾರ ಕೊಟ್ಟಿದೆ. ಮುಂದೆ ಯಾವ ರೀತಿಯಲ್ಲಿ ಪ್ರವಾಹ ವೀಕ್ಷಣೆ ಮಾಡ್ತೀನಿ ಅನ್ನೋದನ್ನು ವಿವರಿಸಿದರು. ಕಳಚೆ ಅನ್ನೋ ಗ್ರಾಮಕ್ಕೆ ಭೇಟಿ ಕೊಟ್ಟಾಗ ಅಲ್ಲಿ ವಿದ್ಯಾರ್ಥಿನಿಯರು ಆನ್‌ಲೈನ್ ತರಗತಿಗಳಿಗೆ ತೊಂದರೆ ಆಗುತ್ತಿದೆ ಅಂತಾ ಕಣ್ಣೀರ ಹಾಕಿದರು.
ಇದನ್ನು ಓದಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಹುಬ್ಬಳ್ಳಿಗೆ ಮೊದಲ ಭೇಟಿ
ಪ್ರವಾಹಕ್ಕೆ ಹೆಚ್ಚು ಪರಿಣಾಮ ಉಂಟಾದ ಪ್ರದೇಶವೆಂದರೆ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕದ್ರಾ. ಇಲ್ಲಿನ ಒಂದು ಗ್ರಾಮದಲ್ಲಿ ಏಳೆಂಟು ಮನೆಗಳು ಸಂಪೂರ್ಣವಾಗಿ ನಾಶಗೊಂಡಿದೆ. ಕಾಳಿ ನದಿ ಪಾತ್ರದಲ್ಲಿ ಮಹಾ ಪ್ರವಾಹವಾಗಿದ್ದು ಮಲ್ಲಾಪುರಾ, ಗಾಂಧಿನಗರ, ಕೈಗಾ ಟೌನ್ ಶಿಪ್, ಗೋಟೆಗಾಳಿ, ಕೆರೆವಾಡಿ, ಬೈರೇ ಗ್ರಾಮದಲ್ಲಿ ಭಾರೀ ಅನಾಹುತವಾಗಿದೆ. ಅದರೆ ಕದ್ರಾ ರಸ್ತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲೇ ಇಲ್ಲ. ಬರೀ ನಾಲ್ಕು ಪ್ರದೇಶಗಳಿಗೆ ಮಾತ್ರ ಭೇಟಿ ನೀಡಿ ಪ್ರವಾಸ ಅಂತ್ಯಗೊಳಿಸಿದರು.
ಯಲ್ಲಾಪುರದ ಡಬ್ಗುಳಿ, ಅಂಕೋಲಾದ ಹಳವಳ್ಳಿ, ಹೊನ್ನಳ್ಳಿ, ಮಂಜಗುಣಿ, ಬೆಳಸೆ, ಕೋಡಸಣಿ, ಜೋಯ್ಡಾದ ಅಣಸಿ ಘಾಟ್, ಕಾರವಾರದ ಕದ್ರಾ, ಮಲ್ಲಾಪುರ, ಹಣಕೋಣ್ ಜೂಗ್, ಹಳಗಾ, ಸಿದ್ದರ್, ಖಾರ್ಗೆ, ಕುನ್ನಿಪೇಟ್ ಈ ಪ್ರದೇಶಗಳಲ್ಲೂ ಪ್ರವಾಹದಿಂದ ಸಂತ್ರಸ್ತರ ಅಳಲು ಜೋರಾಗಿದ್ದರೂ ಸಹ ಇಲ್ಲಿ ಮುಖ್ಯಮಂತ್ರಿಗಳು ಭೇಟಿ ನೀಡಿಲಿಲ್ಲ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರು ಪ್ರವಾಹ ಬಂದು ನಮ್ಮ ಮನೆಗಳು ಮುಳುಗಡೆಯಾಗಿವೆ. ಊಟಕ್ಕಾಗಿ ಪರದಾಡುತ್ತಿದ್ದೇವೆ. ಸರಕಾರ ನಮಗೆ ಊಟ ಕೊಡದಿದ್ದರೂ ಪರವಾಗಿಲ್ಲ. ಈ ಬಾರಿಯಾದ್ರೂ ನಮಗೆ ಪ್ರವಾಹ ಪರಿಹಾರ ನೀಡಲಿ. 2019ರಲ್ಲಿ ಪ್ರವಾಹ ಬಂದಾಗಲೂ ಪರಿಹಾರ ನೀಡಲಿಲ್ಲ. ಎಂದು ನೋವು ತೋಡಿಕೊಂಡಿದ್ದಾರೆ.
ಇದನ್ನು ಓದಿ: ಯಾವುದೇ ಖಾತೆ ನೀಡಿದರೂ ನಿಭಾಯಿಸಲು ಬದ್ಧ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ಬೇರೆ ಎಲ್ಲಾದರೂ ನಮಗೆ ಮನೆ ಕಟ್ಟಿಸಿಕೊಡಲಿ. ಮಕ್ಕಳನ್ನು ಕಟ್ಟಿಕೊಂಡು ಪದೇಪದೆ ಮನೆ ಬಿಡುವುದು ಕಷ್ಟ. ನಮ್ಮ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ. ಸರಕಾರದಿಂದ ಸಂತ್ರಸ್ತರಿಗೆ ಸರಿಯಾದ ನೆರವು ಯಾವಾಗ ಸಿಗುತ್ತೆ ಎನ್ನುವ ಪ್ರಶ್ನೆ ಪ್ರವಾಹದಿಂದ ಹೊಡೆತ ತಿಂದವರನ್ನು ಕಾಡುತ್ತಿದೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇವಲ ಒಂದು ದಿನದ ಪ್ರವಾಸ ಕೈಗೊಂಡ ಮುಖ್ಯಮಂತ್ರಿಗಳು ಸಂತ್ರಸ್ತರ ನೋವಿಗೆ ಅಷ್ಟಾಗಿ ಸ್ಪಂದನೆ ನೀಡಲಿಲ್ಲ. ಸಿಎಂ ಅವರೊಂದಿಗೆ ಮಾಜಿ ಸಚಿವ ಶಿವರಾಂ ಹೆಬ್ಬಾರ್ ಜೊತೆ ಇದ್ದರೂ ಸಹ ಅವರು ಮತ್ತೆ ತಮಗೆ ಮಂತ್ರಿಗಿರಿ ಸಿಗುವ ನಿರೀಕ್ಷೆಯಲ್ಲಿದ್ದಾರೆ ವಿನಃ ಬೇರೆ ಏನನ್ನೂ ಮಾಡಲು ಮುಂದಾಗಿಲ್ಲ.