ಬೆಂಗಳೂರು : ನವೆಂಬರ್ ತಿಂಗಳ ಮಧ್ಯಭಾಗದಲ್ಲೂ ರಾಜ್ಯದ ಹಲವೆಡೆ ನಿರಂತರ ಮಳೆ ಬೀಳುತ್ತಿರುವ ಕಾರಣ ಅಡಿಕೆ, ಭತ್ತ, ಜೋಳ, ಕಾಫಿ, ಕರಿಮೆಣಸು ಬೆಳೆದ ರೈತರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಈ ಕೂಡಲೆ ಸಮರ್ಪಕವಾಗಿ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.
ನವೆಂಬರ್ ತಿಂಗಳ ಮಧ್ಯಭಾಗಕ್ಕೆ ಬರುತ್ತಿದ್ದರೂ ರಾಜ್ಯದಲ್ಲಿ ಮಳೆ ನಿಲ್ಲುತ್ತಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಇದರಿಂದಾಗಿ ಕೊಯಿಲಿನ ಬಂದ ಬೆಳೆಗಳು ಹೊಲ ಗದ್ದೆಗಳಲ್ಲೆ ಕೊಳೆತು ಹೋಗುವಂತಾಗಿದೆ. ರಾಜ್ಯದಲ್ಲಿ ವಾಡಿಕೆಯಂತೆ 69.79 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ.
ಆದರೆ ಕೊರೊನಾ ಸಮಸ್ಯೆ ಬಂದ ನಂತರ ಜನರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಿಂದಾಗಿ ಕಳೆದ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಸುಮಾರು 8 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಅಂದರೆ 77.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 1.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಾಗಿ ಬಿತ್ತನೆಯಾಗಿದೆ.
ಮುಂಗಾರು ಬೆಳೆಗಳಾದ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಹತ್ತಿ, ಮೆಣಸಿನ ಕಾಯಿ, ಶೇಂಗಾ, ಹೆಸರು, ಉದ್ದು ಮುಂತಾದವುಗಳ ಕೊಯಿಲಿನ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ : ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ
ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾದ ಮಳೆ ಇನ್ನೂ ನಿಂತಿಲ್ಲ. ಆರಂಭದಲ್ಲಿ ಬಿತ್ತನೆ ಮಾಡುವಾಗ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟ ಕಾರಣ ದಕ್ಷಿಣ ಒಳನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರು ಹಾಕಿದ ಬಿತ್ತನೆ ಬೀಜಗಳು ಸರಿಯಾಗಿ ಹುಟ್ಟಲಿಲ್ಲ.
ಆನಂತರ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗಲಿಲ್ಲ. ಇಷ್ಟರ ನಡುವೆಯೂ ರೈತರು ಕಷ್ಟ ಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ರೈತಾಪಿ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.
ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಅಡಿಕೆ, ಕಾಫಿ, ಮೆಣಸು ಮುಂತಾದ ವಾಣಿಜ್ಯ ಬೆಳೆಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೊಳೆ ರೋಗದ ಜೊತೆಗೆ ಅಡಿಕೆಗೆ ಹಳದಿ ಎಲೆ ರೋಗ ಬಂದಿದೆ. ಮೆಣಸಿನ ಬಳ್ಳಿಗಳು ಕೊಳೆತು ಹೋಗುತ್ತಿವೆ. ಕಾಫಿಯೂ ಕೊಳೆ ರೋಗದ ಸಮಸ್ಯೆಯನ್ನು ಎದುರಿಸುತ್ತಿದೆ.
ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ, ವ್ಯಾಪಕ ಮಳೆಯಿಂದಾಗಿ ಅಕ್ಟೋಬರ್ ಅಂತ್ಯದ ವೇಳೆಗೆ 11.22 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ನಷ್ಟವಾಗಿದೆ. ಆದರೆ ಕೃಷಿ ಇಲಾಖೆಯ ಮಾಹಿತಿಗಳಲ್ಲಿ ಕಳೆದ ಒಂದೂವರೆ ತಿಂಗಳಿಂದ ಅತಿ ಹೆಚ್ಚು ಮಳೆ ಬಿದ್ದು ಹಾನಿಯಾಗಿರುವ ಜಿಲ್ಲೆಗಳ ಮಾಹಿತಿಯೆ ಇಲ್ಲ.
ಮಲೆನಾಡು, ಕರಾವಳಿ ಜಿಲ್ಲೆಗಳ ಅಡಿಕೆ, ಮೆಣಸು, ಕಾಫಿಗೆ ಆಗಿರುವ ನಷ್ಟದ ಮಾಹಿತಿ ಇಲ್ಲ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮೈಸೂರು, ಮಂಡ್ಯ, ಚಾಮರಾಜನಗರ ಮುಂತಾದ ಜಿಲ್ಲೆಗಳಲ್ಲಿ ಬೆಳೆದ ರಾಗಿ, ಭತ್ತ, ಮುಸುಕಿನ ಜೋಳದ ಬೆಳೆಗಳಿಗೆ ಆಗಿರುವ ನಷ್ಟದ ಕುರಿತು ಸಮೀಕ್ಷೆಯೆ ನಡೆಸಿಲ್ಲ.
ಇನ್ನು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜಿಲ್ಲೆಗಳ ಬೆಳೆಗಳಲ್ಲಿ ಜುಲೈ ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ವ್ಯಾಪಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅನೇಕ ಕಡೆ ಬರದ ಸಮಸ್ಯೆಯೂ ಇದೆ.
ಇಷ್ಟೆಲ್ಲ ಆದರೂ ಸಹ ಸರ್ಕಾರ ಕೈ ಕಟ್ಟಿ ಕುಳಿತಿದೆ. ನಷ್ಟವಾಗಿರುವ ರೈತರ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡುವುದಾಗಲಿ, ಪರಿಹಾರ ನೀಡುವುದನ್ನಾಗಲಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರವೂ ಕೂಡ ಸಮರ್ಪಕ ಪರಿಹಾರ ನೀಡುತ್ತಿಲ್ಲ. 2019-20, 2020-21 ರ ವರ್ಷಗಳಲ್ಲಿ ಸುಮಾರು 1.5 ರಿಂದ 2 ಲಕ್ಷ ಕೋಟಿ ರೂ.ವರೆಗೆ ನಷ್ಟವಾಗಿತ್ತು.
ಆದರೆ ಕೇಂದ್ರ ಸರ್ಕಾರ 2019-20 ರಲ್ಲಿ 1652.85, 2020-21 ರಲ್ಲಿ 1328.30 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಅಂದರೆ ಒಟ್ಟು ಬಿಡುಗಡೆ ಮಾಡಿದ ಹಣ ಕೇವಲ 2981.15 ಕೋಟಿ ರೂ. ಮಾತ್ರ. 2021-22ರ ನಷ್ಟಕ್ಕೆ ಒಂದು ರೂಪಾಯಿಯನ್ನೂ ನೀಡಿಲ್ಲ.
ಕೇಂದ್ರ ಮತ್ತು ರಾಜ್ಯಗಳೆರಡೂ ಈ ಮಟ್ಟದ ನಿರ್ಲಕ್ಷ್ಯ ತೋರಿಸುವುದು ಅತ್ಯಂತ ಅಮಾನವೀಯ ನಡವಳಿಕೆಯಾಗುತ್ತದೆ. ಕೊರೊನಾದಿಂದ ಸಂಕಟದಲ್ಲಿರುವ ರೈತಾಪಿ ಸಮುದಾಯದಲ್ಲಿ ಆತ್ಮಹತ್ಯೆಗಳ ಪ್ರಮಾಣ ಮತ್ತೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಮಳೆಯಿಂದ ತೊಂದರೆಗೊಳಗಾಗಿರುವ ರೈತರ ಬೆಳೆಗಳನ್ನು ಈ ಕೂಡಲೆ ಸಮರ್ಪಕವಾಗಿ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.