ಮೇಕೆದಾಟು ಯೋಜನೆ: ಉಪವಾಸಕ್ಕೆ ಮುಂದಾದ ಅಣ್ಣಾಮಲೈಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಮಹತ್ವದ ಯೋಜನೆಗಳಲ್ಲಿ ಒಂದಾದ ಮೇಕೆದಾಟು ಯೋಜನೆ ವಿರುದ್ಧ ಆಗಸ್ಟ್ 5ರಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅವರು ಅವರ ಕೆಲಸ ಮಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಮೇಕೆದಾಟು ಯೋಜನೆ ಜಾರಿಗಾಗಿ ಬೊಮ್ಮಾಯಿ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಎಚ್‌ಡಿಕೆ ಆಗ್ರಹ

ಯೋಜನೆ ಜಾರಿ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ. ರಾಜ್ಯದ ಜನರ ನೆರವಿಗಾಗಿ ಧಾವಿಸಬೇಕಿದೆ. ಕುಡಿಯುವ ನೀರಿನ ಬವಣೆ ತೀರಿಸುತ್ತೇವೆ. ಕಾವೇರಿಯ ಹೆಚ್ಚುವರಿ ನೀರನ ಮೇಲೆ ನಮಗೆ ಹಕ್ಕಿದೆ. ನಾವು ಯೋಜನೆ ಕೈಗೆತ್ತಿಕೊಳ್ಳುವುದು ಶತಸಿದ್ಧ ಎಂದು ಬೊಮ್ಮಾಯಿ ಹೇಳಿದರು.

ಮೇಕೆದಾಟುವಿನಲ್ಲಿ ನಮ್ಮ ಹಕ್ಕು ಇದೆ. ಅಲ್ಲಿನ ನೀರಿನಲ್ಲಿಯೂ ನಮಗೂ ಪಾಲಿದೆ. ಯೋಜನೆ ಮಾಡಲು ಈಗಾಗಲೇ ನಾವು ಡಿಪಿಆರ್ ಮಾಡಿದ್ದೇವೆ. ಅನುಮೋದನೆಯೊಂದೇ ಬಾಕಿ ಇರೋದು, ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

ಯೋಜನೆಯ ವಿರುದ್ದ ಯಾರಾದರೂ ಉಪವಾಸ ಕುಳಿತುಕೊಳ್ಳಲಿ ಅಥವಾ ಊಟ ಮಾಡಿಕೊಳ್ಳಲಿ ನಮಗೆ ಬೇಕಿಲ್ಲ ಎಂದರು.

ಇದನ್ನು ಓದಿ: ಮೇಕೆದಾಟು ಯೋಜನೆ ಭೂಮಿಪೂಜೆ ಏರ್ಪಡಿಸಿ-ಸರಕಾರದ ಜತೆ ನಾವಿದ್ದೇವೆ: ಡಿ.ಕೆ. ಶಿವಕುಮಾರ್

ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿ ವಿರೋಧಿಸಿ ಉಪವಾಸಕ್ಕೆ ಮುಂದಾಗಿರುವ ಅಣ್ಣಾಮಲೈ ಕರ್ನಾಟಕದಲ್ಲಿ ನಮ್ಮದೇ ಸರಕಾರ ಇರಬಹುದು. ಆದರೆ ನಾವು ತಮಿಳುನಾಡು ಸರಕಾರದ ಪರ ನಿಲ್ಲುತ್ತೇನೆ ಎಂದು ಹೇಳಿದ್ದರು.

ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಾಹ್ನದ ನಂತರ ಬೆಂಗಳೂರಿಗೆ ವಾಪಸ್ಸಾದರು.

Donate Janashakthi Media

Leave a Reply

Your email address will not be published. Required fields are marked *