ಸ್ವಚ್ಚ ಭಾರತವೂ ರಾಜಕೀಯ ಮಾಲಿನ್ಯವೂ

– ನಾ ದಿವಾಕರ

ನವ ಭಾರತ ಬಯಲುಶೌಚ ಮುಕ್ತವಾಗುತ್ತಿದೆ ಆದರೆ ರಾಜಕೀಯ ಮಾಲಿನ್ಯ ಸರ್ವವ್ಯಾಪಿಯಾಗುತ್ತಿದೆ

ಭಾರತದ ಚುನಾವಣಾ ರಾಜಕಾರಣದಲ್ಲಿ ರಾಜಕೀಯ ಭ್ರಷ್ಟಾಚಾರ ಒಂದು ಕೇಂದ್ರ ವಿಷಯವಾಗಿರುವುದು ಹೊಸದೇನಲ್ಲ. “ಆಳ್ವಿಕೆಗೆ ಬಂದ ಕೂಡಲೇ ಭ್ರಷ್ಟರನ್ನು ಮಟ್ಟ ಹಾಕುತ್ತೇವೆ, ಕಪ್ಪುಹಣವನ್ನು ನಿಯಂತ್ರಿಸಿ ಹೊರಗೆಳೆಯುತ್ತೇವೆ, ಸ್ವಿಸ್‌ ಬ್ಯಾಂಕ್‌ಗಳಲ್ಲಿರುವ ಅಕ್ರಮ ಸಂಪತ್ತಿಗೆ ಘರ್‌ ವಾಪ್ಸಿ ಭಾಗ್ಯ ಕರುಣಿಸುತ್ತೇವೆ, ಆಡಳಿತ ವಲಯದಲ್ಲಿ ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೆಸೆಯುತ್ತೇವೆ,,,,, ” ಇತ್ಯಾದಿ ಘೋಷಣೆಗಳನ್ನು ಭಾರತದ ಸಾರ್ವಭೌಮ ಮತದಾರರು ದಶಕಗಳಿಂದ ಕೇಳಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ಭ್ರಮಾಧೀನ ಮತದಾರರ ಮನವೊಲಿಸುವ ಸಲುವಾಗಿಯೇ ಲೋಕಾಯುಕ್ತ, ಲೋಕಪಾಲ ಮೊದಲಾದ ನಿಯಂತ್ರಣ ಸಂಸ್ಥೆಗಳೂ ಸಹ ಕಾರ್ಯನಿರ್ವಹಿಸುತ್ತಿವೆ.  ಆದರೆ ಯಾವುದೇ ರಾಜಕೀಯ ಪಕ್ಷವೂ ಸಹ ಭ್ರಷ್ಟಾಚಾರದ ಆರೋಪ ಹೊತ್ತವರನ್ನು ದೂರ ಇರಿಸುತ್ತೇವೆ ಎಂದು ಘೋಷಿಸಿರುವುದನ್ನು ಕಾಣಲಾಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಭ್ರಷ್ಟರಿಗೆ ಸುರಕ್ಷಿತ ತಾಣ (Safe havens) ಒದಗಿಸುವುದು ಒಂದು ಹೊಸ ಪರಂಪರೆಯಾಗಿದೆ. ಬಿಜೆಪಿ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ರಾಜಕೀಯ ಮಾಲಿನ್ಯ

2014ರ ಚುನಾವಣೆಗಳಲ್ಲಿ ಭ್ರಷ್ಟಾಚಾರ ಒಂದು ಪ್ರಧಾನ ವಿಷಯವಾಗಿತ್ತು. ಮುದ್ರಣ-ವಿದ್ಯುನ್ಮಾನ ಸುದ್ದಿ ಮಾಧ್ಯಮಗಳು ಸಮ್ಮೋಹನಕ್ಕೊಳಗಾದ ಹಾಗೆ ಯುಪಿಎ ಸರ್ಕಾರದ ಭ್ರಷ್ಟಾಚಾರದ ಹಗರಣಗಳ ಸುತ್ತ ಕತೆಗಳನ್ನು ಪೋಣಿಸಿದ್ದವು. ಅಣ್ಣಾ ಹಜಾರೆ ನಾಯಕತ್ವದಲ್ಲಿ ಇಡೀ ದೇಶವೇ ಭ್ರಷ್ಟ ರಾಜಕಾರಣದ ವಿರುದ್ಧ ಸಮರ ಸಾರಿದಂತೆ ಭಾಸವಾಗಿತ್ತು. ಆ ಹೋರಾಟದ ಮುಂಚೂಣಿಯಲ್ಲಿದ್ದ ಅರವಿಂದ ಕೇಜ್ರಿವಾಲ್‌ ಇಂದು ಅಬಕಾರಿ ಹಗರಣದ ಆರೋಪಿಯಾಗಿ ಜೈಲು ಸೇರಿದ್ದಾರೆ. (ನಿರಪರಾಧಿ ಎಂದು ಸಾಬೀತಾಗುವವರೆಗೂ ಕಾಯಬೇಕಿದೆ). 2014ರಲ್ಲಿ ಎರಡನೆ ಸ್ವಾತಂತ್ರ್ಯ ಸಮರ ಎಂದೇ ಮಾಧ್ಯಮಗಳು ಬಣ್ಣಿಸಿದ್ದ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವೇ ಬಿಜೆಪಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಲೋಕಪಾಲ್‌ ಸ್ಥಾಪಿಸುವುದಾಗಿಯೂ, ಕಪ್ಪುಹಣ ನಿರ್ಮೂಲನೆ ಮಾಡುವುದಾಗಿಯೂ, ಭ್ರಷ್ಟಾಚಾರವನ್ನು‌ ಮೂಲದಲ್ಲೇ ಕಿವುಚಿಹಾಕುವುದಾಗಿಯೂ ಘೋಷಿಸಿದ್ದ ಬಿಜೆಪಿ 10 ವರ್ಷಗಳ ಆಳ್ವಿಕೆಯ ಅನಂತರ, ಚುನಾವಣಾ ಬಾಂಡ್‌ ಎಂಬ ಸ್ವತಂತ್ರ ಭಾರತದ ಅತಿದೊಡ್ಡ ಭ್ರಷ್ಟಾಚಾರ ಹಗರಣದ ಫಲಾನುಭವಿಯಾಗಿ ನಿಂತಿದೆ. ರಾಜಕೀಯ ಮಾಲಿನ್ಯ

ವಿಪರ್ಯಾಸವೆಂದರೆ 2011-12ರ ಜನಾಂದೋಲನದ ಪ್ರಮುಖ ಧ್ವನಿ ಅಣ್ಣಾ ಹಜಾರೆ ಈ ಚುನಾವಣಾ ಬಾಂಡ್‌ ಕುರಿತು ಈವರೆಗೂ ನಿಖರವಾದ ವಿರೋಧ ವ್ಯಕ್ತಪಡಿಸಿಲ್ಲ. ಅಥವಾ ಕಳೆದ ಹತ್ತು ವರ್ಷಗಳಲ್ಲಿ ಲೋಕಪಾಲ್‌ ಮಸೂದೆಯನ್ನು ಬಲಪಡಿಸುವ ಯಾವುದೇ ಚಳುವಳಿಯನ್ನು ಹಮ್ಮಿಕೊಂಡಿಲ್ಲ. ಈ ನಡುವೆಯೇ ಭ್ರಷ್ಟ ರಾಜಕಾರಣಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಆಡಳಿತಾರೂಢ  ಪಕ್ಷವನ್ನು ಆಶ್ರಯಿಸುತ್ತಿರುವ ಹೊಸ ಬೆಳವಣಿಗೆ ದೇಶವನ್ನು ವ್ಯಾಪಿಸಿದೆ. “ ನಾವು ತಿನ್ನುವುದೂ ಇಲ್ಲ ತಿನ್ನಲು ಬಿಡುವುದೂ ಇಲ್ಲ ” ಎಂಬ ಉದಾತ್ತ ಘೋಷಣೆಯ ಮೂಲಕ ಜನಸಾಮಾನ್ಯರನ್ನು ಸಮ್ಮೋಹನಕ್ಕೊಳಪಡಿಸಿದ ಬಿಜೆಪಿ ಇಂದು “ತಿಂದು ತೇಗಿ ಅರಗಿಸಿಕೊಂಡವರಿಗೆ” ರಕ್ಷಣೆ ನೀಡುವ ಪಕ್ಷವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಬಿಜೆಪಿ ಎಲ್ಲಿಯೂ ಸಹ “ತಿಂದವರನ್ನು ತಿನ್ನುವವರನ್ನು ಮುಟ್ಟುವುದಿಲ್ಲ” ಎಂದು ಪ್ರಮಾಣೀಕರಿಸಿಲ್ಲ. ಹಾಗಾಗಿಯೇ ಕರ್ನಾಟಕದ ಗಣಿ ಹಗರಣದ ರೂವಾರಿಗಳಿಗೂ ಪಕ್ಷದಲ್ಲಿ ಗೌರವಯುತ ಸ್ಥಾನ ದೊರೆಯುತ್ತದೆ.ರಾಜಕೀಯ ಮಾಲಿನ್ಯ

ಪ್ರಾಮಾಣಿಕತೆ ಎಂಬ ಪಳೆಯುಳಿಕೆ

ಕೆಲವೇ ದಶಕಗಳ ಹಿಂದಿನ ರಾಜಕೀಯ ಚಿತ್ರಣವನ್ನು ತೆರೆದುನೋಡಿದಾಗಲೂ ಒಂದು ದೃಶ್ಯವನ್ನು ನೆನೆಸಿಕೊಳ್ಳಲು ಸಾಧ್ಯ. ರಾಜಕೀಯ ಪಕ್ಷಗಳು ಪ್ರಾಮಾಣಿಕತೆ, ನೈತಿಕತೆ ಮತ್ತು ಪಾರದರ್ಶಕತೆಯ ಬಗ್ಗೆ ಎದೆಬಡಿದುಕೊಂಡು ಪ್ರಚಾರ ಮಾಡುತ್ತಿದ್ದವು. ಈ ಮೂರೂ ಉದಾತ್ತ ಮೌಲ್ಯಗಳನ್ನು ಹೊರನೋಟಕ್ಕಾದರೂ ಪ್ರದರ್ಶಿಸುವ ಮೂಲಕ ರಾಜಕೀಯ ನಾಯಕರು ಜನಸಾಮಾನ್ಯರಲ್ಲಿ ವಿಶ್ವಾಸ ಮೂಡಿಸುತ್ತಿದ್ದುದನ್ನು ಕಾಣಬಹುದಿತ್ತು. ಬಿಜೆಪಿಯ ಪ್ರಚಾರಗಳಲ್ಲೂ ಸ್ವಚ್ಚ ರಾಜಕಾರಣದ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನಾಕರ್ಷಣೆಯ ಚಹರೆಯಾಗಿದ್ದರು. 2024ರ ಸಂದರ್ಭದಲ್ಲಿ ಎಲ್ಲಿಯೂ ಈ ಚಹರೆ ಪ್ರಧಾನವಾಗಿ ಕಾಣುವುದಿಲ್ಲ. ಏಕೆಂದರೆ ಬಿಜೆಪಿ ಭ್ರಷ್ಟರನ್ನು ರಕ್ಷಿಸುವ ಒಂದು ಪಕ್ಷವಾಗಿ ರೂಪುಗೊಂಡಿದೆ. ಅಧಿಕಾರ ರಾಜಕಾರಣದಲ್ಲಿ ಶಾಶ್ವತವಾಗಿ ಬೇರೂರಲು ಅಗತ್ಯವಾದ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನೂ ಸಹ ‍ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ.ರಾಜಕೀಯ ಮಾಲಿನ್ಯ

ಸಂಸದೀಯ ಪ್ರಜಾತಂತ್ರದಲ್ಲಿ ಅಧಿಕಾರ ಗಳಿಸಲು ಸಂಖ್ಯಾಬಲ ಮುಖ್ಯವಾಗುತ್ತದೆ. ಈ ಬಹುಮತವನ್ನು ಗಳಿಸುವ ಸಲುವಾಗಿ ಯಾವುದೇ ರೀತಿಯ ವಾಮಮಾರ್ಗಗಳನ್ನು ಬಳಸಿದರೂ ಅವುಗಳನ್ನು ಒಪ್ಪುವಂತಹ ಒಂದು ಮನಸ್ಥಿತಿಯು ಸಾರ್ವಜನಿಕ ಪ್ರಜ್ಞೆಯನ್ನೂ ಆವರಿಸಿದೆ. ಹಾಗಾಗಿಯೇ ಇಲ್ಲಿ ವ್ಯಕ್ತಿಗತವಾದ ನೈತಿಕ ಗುಣಮಟ್ಟ ಅಥವಾ ನಾಯಕತ್ವದ ಪ್ರಾಮಾಣಿಕತೆಯ ಮಾನದಂಡಗಳು ಗಣನೆಗೆ ಬರುವುದಿಲ್ಲ. ಭ್ರಷ್ಟಾಚಾರದ ಆರೋಪಿಗಳನ್ನು, ಅಪರಾಧಿಗಳನ್ನು ಬರಮಾಡಿಕೊಳ್ಳುವ ರಾಜಕೀಯ ಪಕ್ಷಗಳು ಅವರು ಸ್ಥಾಪಿಸಿರುವ ಅಕ್ರಮ ಸಾಮ್ರಾಜ್ಯವನ್ನು ಕಾಪಾಡುವ ಭರವಸೆ ನೀಡುವುದಷ್ಟೇ ಅಲ್ಲದೆ ವ್ಯಕ್ತಿಗತವಾಗಿಯೂ ಅಂತಹ ನಾಯಕರಿಗೆ ಉನ್ನತ ಸ್ಥಾನಗಳನ್ನು ಒದಗಿಸುತ್ತವೆ. ಇಂತಹ ಹಲವು ನಿದರ್ಶನಗಳು ನಮ್ಮ ಮುಂದಿವೆ. ಹಾಗಾಗಿ ಭ್ರಷ್ಟರನ್ನು ಶುದ್ಧಪಡಿಸುವ ಪ್ರಕ್ರಿಯೆಯನ್ನು ಬದಿಗಿಟ್ಟು, ಭ್ರಷ್ಟ ಪರಂಪರೆಯನ್ನು ಸಮ್ಮಾನಿಸಿ ಅಧಿಕೃತಗೊಳಿಸುವ ಒಂದು ಪ್ರಕ್ರಿಯೆಗೆ ನವ ಭಾರತ ತೆರೆದುಕೊಂಡಿದೆ.

ಭ್ರಷ್ಟತೆಯ ಕವಚವನ್ನು ಕಳೆದುಕೊಂಡು ಸ್ವಚ್ಚ ಎನಿಸಿಕೊಳ್ಳಲೆಂದೇ ತಮ್ಮ ತವರು ತೊರೆದು ಬಿಜೆಪಿ ಸೇರಿದ ರಾಜಕೀಯ ನಾಯಕರು ಈ ಪರಂಪರೆಯ ವಾರಸುದದಾರರಾಗಿದ್ದಾರೆ. ಎನ್‌ಸಿಪಿ ಪಕ್ಷದ ಅಜಿತ್‌ ಪವಾರ್‌, ಟಿಎಂಸಿಯ ಸುವೇಂಧು ಅಧಿಕಾರ, ಶಿವಸೇನೆಯ ನಾರಾಯಣರಾಣೆ, ಕಾಂಗ್ರೆಸ್‌ನ ಅಶೋಕ್‌ ಚವ್ಹಾಣ್‌, ನವೀನ್‌ ಜಿಂದಾಲ್‌, ಹಿಮಂತ್‌ ಬಿಸ್ವಾಸ್‌ ಶರ್ಮ, ಜ್ಯೋತಿರಾದಿತ್ಯ ಸಿಂಧಿಯಾ ಮೊದಲಾದವರು ತಮ್ಮ ಭ್ರಷ್ಟ ಮುಖವಾಡಗಳನ್ನು ಕಳೆದುಕೊಂಡು ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಜ್ಜಾಗಿದ್ದಾರೆ.  ಇವರೊಡನೆ ಮುಕುಲ್‌ ರಾಜ್‌, ಜನಾರ್ಧನರೆಡ್ಡಿ, ಯಾಮಿನಿ ಜಾಧವ್‌, ಭಾವನಾ ಗವಲೀ, ತಪಸ್‌ ರಾಯ್‌, ಪೆಮಾ ಖಂಡು ಮುಂತಾದವರೂ ಸಹ ಸ್ವಚ್ಚವಾಗಲು ತಮ್ಮ ಮೂಲ ನೆಲೆಯನ್ನು ತೊರೆದು ಬಿಜೆಪಿ ಸೇರಿದ್ದಾರೆ. ( ಪ್ರಜಾವಾಣಿ , 26 ಮಾರ್ಚ್‌ 2024 ಇದರ ವಿಸ್ತೃತ ವರದಿ ನೀಡಿದೆ). ಈ ನಾಯಕರ ಬೇಲಿಜಿಗಿತ ಅಥವಾ ತೊಟ್ಟ ಹೊಸ ಕವಚಗಳು ಏನನ್ನು ಸೂಚಿಸುತ್ತದೆ ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡಬೇಕಿದೆ.ರಾಜಕೀಯ ಮಾಲಿನ್ಯ

ಇಂದು ಯಾವುದೇ ಪಕ್ಷವೂ, ಯಾವ ರಾಜಕೀಯ ನಾಯಕರೂ ತಮ್ಮನ್ನು ಪ್ರಾಮಾಣಿಕ/ಪಾರದರ್ಶಕ ಅಥವಾ ನಿಷ್ಠೆಯ ಜನಸೇವಕ ಎಂದು ಗುರುತಿಸಿಕೊಳ್ಳುವುದು ಅಸಾಧ್ಯ. ಈ ಸನ್ನಿವೇಶದಲ್ಲಿ ಭಾರತೀಯ ಸಮಾಜ ಮತ್ತು ರಾಜಕಾರಣವನ್ನು ಕಾಡುತ್ತಿರುವ ರಾಜಕೀಯ ಭ್ರಷ್ಟಾಚಾರ ಮತ್ತು ಭ್ರಷ್ಟ ರಾಜಕಾರಣದ ಮಾದರಿಗಳು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುವ ಸಾಧ್ಯತೆಗಳಿವೆ. “ ತಾವು ಅಥವಾ ತಮ್ಮ ಪಕ್ಷ ಅಥವಾ ತಮ್ಮ ಸರ್ಕಾರ ಪ್ರಾಮಾಣಿಕ ” ಎಂದು ಎದೆಯುಬ್ಬಿಸಿ ಹೇಳುವ ನೈತಿಕತೆಯನ್ನೇ ಕಳೆದುಕೊಂಡಿರುವ ರಾಜಕೀಯ ವ್ಯವಸ್ಥೆಯಲ್ಲಿ ಕಡು ಭ್ರಷ್ಟಾಚಾರವೂ ಸಹ ಸಾಪೇಕ್ಷತೆಯನ್ನು ಪಡೆದುಕೊಂಡಿದ್ದು, “ ನಾವು ಅವರಷ್ಟು ಭ್ರಷ್ಟರಲ್ಲ ಅಥವಾ ಅವರಿಗಿಂತಲೂ ಮೇಲು ” ಎನ್ನುವ ನಿರೂಪಣೆ ಸಾಮಾನ್ಯವಾಗಿದೆ. ಈ ನಿರೂಪಣೆ ರಾಜಕೀಯ ವಲಯಗಳಲ್ಲಿ ಸ್ವೀಕೃತವೂ ಆಗಿದೆ. ಕೇಜ್ರಿವಾಲ್‌ ಬಂಧನಕ್ಕೆ ವಿಷಾದ ವ್ಯಕ್ತಪಡಿಸುವ ಅಣ್ಣಾ ಹಜಾರೆ ಚುನಾವಣಾ ಬಾಂಡ್‌ ಕುರಿತು ಸೊಲ್ಲೆತ್ತದಿರುವುದು ಈ ಬೌದ್ಧಿಕ ನಿರ್ಲಿಪ್ತತೆ/ನಿಷ್ಕ್ರಿಯತೆಯ ಸಂಕೇತವೇ ಆಗಿದೆ.ರಾಜಕೀರಾಜಕೀಯ ಮಾಲಿನ್ಯಯ ಮಾಲಿನ್ಯ

ಇದನ್ನು ಓದಿ : ಬೋರ್ ವೆಲ್ ಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ ರಕ್ಷಣೆ; ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು

ಮಾರುಕಟ್ಟೆ ಮತ್ತು ರಾಜಕಾರಣ

ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಚುನಾವಣಾ ಬಾಂಡ್‌ ಯೋಜನೆಯನ್ನು ಸಮರ್ಥಿಸಿಕೊಂಡಿದ್ದು, ಇದರಿಂದ ಪಕ್ಷಗಳು ಯಾರಿಂದ ದೇಣಿಗೆ ಪಡೆಯುತ್ತವೆ ಎಂಬುದು ಜನತೆಗೆ ತಿಳಿಯುವಂತಾಗಿದೆ ಎಂದು ಹೇಳಿದ್ದಾರೆ. ಇದು ಸತ್ಯ. ಆದರೆ ಬಾಂಡ್‌ ಯೋಜನೆಯ ಉದ್ದೇಶ ಇದೇ ಆಗಿದ್ದಲ್ಲಿ ದೇಣಿಗೆದಾರರ-ಫಲಾನುಭವಿಗಳ ಗೋಪ್ಯತೆಯನ್ನು ಕಾಪಾಡಲು ಹಲವು ಹಾಲಿ ಕಾನೂನುಗಳನ್ನು ತಿದ್ದುಪಡಿ ಮಾಡಿದ್ದೇಕೆ ? ಅಥವಾ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸದೆ ಇದ್ದಲ್ಲಿ ಇದು ಬಹಿರಂಗವಾಗುತ್ತಿತ್ತೇ ? ಈ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳುವುದೂ ಇಲ್ಲ. ಆದರೆ ಜನಸಾಮಾನ್ಯರ ಮನಸ್ಸಿನಲ್ಲಿ ಇರುವ  ಪ್ರಶ್ನೆ ಯಾರು ಯಾರಿಗೆ ನೀಡುತ್ತಿದ್ದಾರೆ ಎಂಬುದಲ್ಲ. ಕಾರ್ಪೋರೇಟ್‌ ಉದ್ದಿಮೆಗಳು ಏಕೆ ಈ ಪ್ರಮಾಣದ ದೇಣಿಗೆಯನ್ನು ನೀಡುತ್ತವೆ ? ಆಡಳಿತಾರೂಢ ಬಿಜೆಪಿಯೇ ಏಕೆ ಹೆಚ್ಚು ದೇಣಿಗೆ ಪಡೆಯುತ್ತವೆ ? ಈ ದೇಣಿಗೆಯ ಮೂಲಕ ಕಾರ್ಪೋರೇಟ್‌ ವಲಯ ಯಾವ ರೀತಿಯ ಲಾಭ ಪಡೆಯುತ್ತದೆ ? ಈ ಪ್ರಶ್ನೆಗಳಿಗೆ ಜನರು ಉತ್ತರ ಬಯಸುತ್ತಾರೆ.ರಾಜಕೀಯ ಮಾಲಿನ್ಯ

ನವ ಉದಾರವಾದಿ ಆರ್ಥಿಕತೆ, ಕಾರ್ಪೋರೇಟ್‌ ಮಾರುಕಟ್ಟೆ ಪ್ರೇರಿತ ಆರ್ಥಿಕ ನೀತಿಗಳು ಹಾಗೂ ಆಪ್ತಬಂಡವಾಳಶಾಹಿಯ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ಹೊರಗೆಡಹಿರುವ ಚುನಾವಣಾ ಬಾಂಡ್‌ ಏಕೆ ಸ್ವತಂತ್ರ ಭಾರತದ ಅತಿದೊಡ್ಡ ಭ್ರಷ್ಟಾಚಾರ ಹಗರಣ ಎನಿಸಿಕೊಳ್ಳುತ್ತದೆ ಎಂದರೆ, ಈ ಅಪಾರ ಮೊತ್ತದ ಹಣದ ಹರಿವಿಗೂ ಮಾರುಕಟ್ಟೆ ಪ್ರೇರಿತ ಅಭಿವೃದ್ಧಿ ಮಾದರಿಗೂ ನೇರ ಸಂಬಂಧವಿದೆ. ತಳಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರದ ವ್ಯಾಪ್ತಿ ಮತ್ತು ಆಳವನ್ನು ಚೆನ್ನಾಗಿ ಅರಿತಿರುವ ಸಾಮಾನ್ಯ ಜನತೆಗೆ ಆಳುವ ಪಕ್ಷಗಳು ಹಾಗೂ ಕಾರ್ಪೋರೇಟ್‌ ಉದ್ಯಮಗಳ ನಡುವೆ ಇರುವ ಅನೈತಿಕ ಸಂಬಂಧಗಳೂ ಈಗ ಅರಿವಾಗಿದೆ. ಆಧುನಿಕ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ತಳಮಟ್ಟದ ಸಮಾಜಕ್ಕೆ ಸಲ್ಲಬೇಕಾದ ಸಂಪನ್ಮೂಲಗಳನ್ನು ಹಾಗೂ ಉತ್ಪಾದಿತ ಸಂಪತ್ತನ್ನು ಬಂಡವಾಳಶಾಹಿ ಮಾರುಕಟ್ಟೆಗೆ ಪರಭಾರೆ ಮಾಡುವ ಈ ವಿಧಾನದ ಸೂಕ್ಷ್ಮಗಳನ್ನು ಬಾಂಡ್‌ ಯೋಜನೆ ಅನಾವರಣಗೊಳಿಸಿದೆ.ರಾಜಕೀಯ ಮಾಲಿನ್ಯ

ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ, ರಕ್ಷಿಸಲು ಬಯಸುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಾಡಬೇಕಿರುವ ಜಿಜ್ಞಾಸೆ ಇದು. 2024ರ ಚುನಾವಣೆಗಳು ಸಮೀಪಿಸುತ್ತಿರುವಂತೆ ಭ್ರಷ್ಟರ ಬೇಲಿಜಿಗಿತವೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಾಜಕೀಯ ವಲಯವು ಭ್ರಷ್ಟಾಚಾರ ಎಂಬ ವಿದ್ಯಮಾನವನ್ನೇ ಮರುನಿರ್ವಚಿಸಲು ಮುಂದಾಗಿದೆ. ಜೈಲುವಾಸ ಅನುಭವಿಸಿದ ಕಡುಭ್ರಷ್ಟರಿಗೂ ಗೌರವಯುತ ಸ್ಥಾನ ನೀಡಲಾಗುತ್ತಿರುವ ಹೊತ್ತಿನಲ್ಲಿ “ಸಮಾಜಸೇವೆ-ಜನಸೇವೆ-ದೇಶಸೇವೆ” ಮುಂತಾದ ಪದಗಳೆಲ್ಲವೂ ಬಿಕರಿಯಾಗುವ ಸರಕುಗಳಂತಾಗಿವೆ, ಸಂಭಾವ್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಬೌದ್ಧಿಕ ಕವಚಗಳಾಗಿವೆ. ಜಾತಿ ನಿಷ್ಠೆ -ವ್ಯಕ್ತಿ ಆರಾಧನೆ ಪರಾಕಾಷ್ಠೆ ತಲುಪಿರುವ ಭಾರತದ ರಾಜಕಾರಣದಲ್ಲಿ ಭ್ರಷ್ಟಾಚಾರವೂ ಸಹ ಕೇವಲ ಹೊಂದಾಣಿಕೆ ಅಥವಾ ಪರಸ್ಪರ ಹೋಲಿಕೆಗಳ ಮೂಲಕ ನಿರ್ವಚಿಸಲ್ಪಡುತ್ತಿರುವುದು ಚಿಂತೆಗೀಡುಮಾಡುವ ವಿಚಾರ.ರಾಜಕೀಯ ಮಾಲಿನ್ಯ

ಸುಶಿಕ್ಷಿತ ಸಮಾಜವನ್ನೂ ಆವರಿಸಿರುವ ಈ ಆಲೋಚನಾ ವಿಧಾನವೇ ಪಕ್ಷಗಳನ್ನು, ನಾಯಕರನ್ನು ಪ್ರಶ್ನಾತೀತ ಮಾಡಿಬಿಟ್ಟಿದೆ. ಹಾಗಾಗಿಯೇ “ಭ್ರಷ್ಟಾಚಾರ ಮುಕ್ತ ಭಾರತ” ಯಾವುದೇ ಪಕ್ಷದ ಘೋಷವಾಕ್ಯವಾಗದೆ ಇದ್ದರೂ, ಅದನ್ನು ಸಹಿಸಿಕೊಳ್ಳುವ ಜನಸ್ತೋಮವನ್ನೂ ಸಮಾನಾಂತರವಾಗಿ ಸೃಷ್ಟಿಸಲಾಗಿದೆ. ವೃತ್ತಿಪರತೆ/ವೃತ್ತಿಧರ್ಮವನ್ನು ಮಾರುಕಟ್ಟೆಗೆ ಒತ್ತೆ ಇಟ್ಟಿರುವ ಮಾಧ್ಯಮ ವಲಯದ ನಿಷ್ಕ್ರಿಯತೆ (ಕೆಲವೇ ಅಪವಾದಗಳ ಹೊರತು) ಈ ಘೋಷವಾಕ್ಯವನ್ನು ಸಂಪೂರ್ಣವಾಗಿ ಮರೆತಂತೆಯೇ ಕಾಣುತ್ತದೆ. ಅಣ್ಣಾ ಹಜಾರೆ ಆಂದೋಲನದ ನಡುವೆ 2ಜಿ, ಕಾಮನ್‌ವೆಲ್ತ್‌, ಕಲ್ಲಿದ್ದಲು ಹಗರಣಗಳ ಸಂದರ್ಭದಲ್ಲಿ ಸಮ್ಮೋಹನಕ್ಕೊಳಗಾಗಿದ್ದ ವಿದ್ಯುನ್ಮಾನ ಮಾಧ್ಯಮಗಳು ಶತಮಾನದ ಭ್ರಷ್ಟಾಚಾರ ಹಗರಣ ಎನಿಸಿಕೊಂಡಿರುವ ಚುನಾವಣಾ ಬಾಂಡ್‌ ಬಗ್ಗೆ ಮೌನ ವಹಿಸಿರುವುದು ಈ ನಿಷ್ಕ್ರಿಯತೆಗೆ ಸಾಕ್ಷಿಯಾಗಿದೆ.

ಸ್ವಚ್ಛತೆಯ ಹೊಸ ಅಭಿಯಾನ

ಭಾರತವನ್ನು ಬಯಲುಶೌಚ ಮುಕ್ತಗೊಳಿಸುವ “ ಸ್ವಚ್ಛ ಭಾರತ ಅಭಿಯಾನ ” ತಕ್ಕಮಟ್ಟಿಗೆ ಯಶಸ್ವಿಯಾಗಿರುವ ಹೊತ್ತಿನಲ್ಲೇ, ದೇಶದ ರಾಜಕೀಯ ವಾತಾವರಣ ಮತ್ತು ಸಾಮಾಜಿಕ ಪರಿಸರ ಮೌಲಿಕವಾಗಿ ಅಧೋಗತಿಗೆ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಾರ್ವಜನಿಕ ಬದುಕನ್ನು ಬೌದ್ಧಿಕವಾಗಿ, ಭೌತಿಕವಾಗಿ ಪ್ರಭಾವಿಸಬಹುದಾದ ರಾಜಕೀಯ ಚಟುವಟಿಕೆಗಳು ಕಲುಷಿತವಾಗುತ್ತಿದ್ದು, ಈ ಮಾಲಿನ್ಯವೇ ಸಾಂವಿಧಾನಿಕ ನೈತಿಕತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜನಪರ ಕಾಳಜಿಗಳನ್ನು ಮತ್ತಷ್ಟು ಹಿಂದಕ್ಕೆ ನೂಕುತ್ತಿದೆ. ಯುವ ಮನಸ್ಸುಗಳಿಗೆ ಆದರ್ಶಪ್ರಾಯವಾಗಬಹುದಾದ ವ್ಯಕ್ತಿತ್ವವನ್ನು ಇಂದಿಗೂ ಇತಿಹಾಸದ ಬುಟ್ಟಿಯಿಂದಲೇ ಹೆಕ್ಕಿ ತೆಗೆಯಬೇಕಾದ ಅನಿವಾರ್ಯತೆಯ ನಡುವೆ, ನವ ಭಾರತದ millenial ಜನಸಂಖ್ಯೆ ಹೊಸ ಆಳ್ವಿಕೆಯನ್ನು ಆಯ್ಕೆ ಮಾಡಬೇಕಿದೆ.   ಈ ಸಂದಿಗ್ಧತೆಯ ನಡುವೆಯೇ ಭಾರತದ ರಾಜಕಾರಣವನ್ನು ಭ್ರಷ್ಟ ಮುಕ್ತಗೊಳಿಸುವ, ಸ್ವಚ್ಛಗೊಳಿಸುವ ಒಂದು “ ಸ್ವಚ್ಛ ಭಾರತ ಅಭಿಯಾನ” ತಳಮಟ್ಟದಿಂದಲೇ ರೂಪುಗೊಳ್ಳಬೇಕಿದೆ. ಇದು ಪಕ್ಷಾತೀತವಾಗಿ ಯೋಚಿಸಬೇಕಾದ ಗಂಭೀರ ವಿಚಾರ.ರಾಜಕೀಯ ಮಾಲಿನ್ಯ

ಭವಿಷ್ಯದ ಭಾರತಕ್ಕೆ ಬೇಕಿರುವುದು ಕಡುಭ್ರಷ್ಟರನ್ನು ಸ್ವಚ್ಛವಾಗಿಸುವ “ತೊಳೆಯುವ ಯಂತ್ರಗಳಲ್ಲ”. ಈ ಭ್ರಷ್ಟಚಾರವನ್ನು ಬೇರು ಸಮೇತ ಕಿತ್ತುಹಾಕುವ ಮೂಲಕ ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಕಾಪಾಡುವಂತಹ “ಬೌದ್ಧಿಕ ಯಂತ್ರಗಳು” ಇಂದು ಅತ್ಯವಶ್ಯವಾಗಿದೆ. ಈ ಬುಲ್ಡೋಜರ್‌ನ ಕೀಲಿ ಸಂವಿಧಾನದಲ್ಲಿದೆ, ಚಾಲನಾ ಶಕ್ತಿ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ. ಇದನ್ನು ಮುನ್ನಡೆಸಲು ಬೇಕಾದ ಇಂಧನ ಯುವ ಸಮೂಹದಲ್ಲಿದೆ. ಮುನ್ನಡೆಸುವ ಕ್ಷಮತೆ/ಪ್ರಾಮಾಣಿಕತೆ ಇರುವ ಚಾಲಕರನ್ನು ಈ ಯುವ ಸಮೂಹದ ನಡುವೆಯೇ ಗುರುತಿಸಬೇಕಿದೆ. ಚುನಾವಣೆಗಳು ಈ ಚಲನೆಯ ಹಾದಿಯನ್ನು ಸುಗಮಗೊಳಿಸುವ ಒಂದು ಸೇತುವೆ. ಪ್ರಜ್ಞಾವಂತ ಮತದಾರರ ರಾಜಕೀಯ ಪ್ರಜ್ಞೆ ಈ ಸೇತುವೆಯ ಸ್ತಂಭಗಳು. ಇದನ್ನು ಕಾಪಾಡುವ ಜವಾಬ್ದಾರಿ ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲಿದೆ.ರಾಜಕೀಯ ಮಾಲಿನ್ಯ

ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ

Donate Janashakthi Media

Leave a Reply

Your email address will not be published. Required fields are marked *