ಟ್ಯಾಂಕರ್ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ, ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ: ಆರ್.ಅಶೋಕ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣದಲ್ಲಿಯೇ ಜನರು ಕಲುಷಿತ ನೀರು ಕುಡಿದು ಸತ್ತಿದ್ದಾರೆ. ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಕೂಡ ಈ ಸರ್ಕಾರಕ್ಕಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿ ಅವರ ಕ್ಷೇತ್ರ ವರುಣದಲ್ಲಿ ಕಲುಷಿತ ನೀರನ್ನು ಜನರು ಸೇವಿಸಿ ಸಾವಿಗೀಡಾಗಿದ್ದಾರೆ. ಅಂದರೆ ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ. ಈಗ ತುಮಕೂರಿನಲ್ಲೂ ಕಲುಷಿತ ನೀರು ಸೇವಿಸಿ ಆರು ಜನರ ಸಾವಾಗಿದೆ ಎಂದರು.

ಇದಕ್ಕೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಮೂತ್ರಪಿಂಡ ಸಮಸ್ಯೆ ಎಂದು ಕಾರಣ ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಅದನ್ನೇ ಸಬೂಬು ಮಾಡಬಾರದು. ಈ ಕುರಿತು ವರದಿ ಕೇಳಿದ್ದೇನೆ ಎಂದರು‌.

ಇದನ್ನು ಓದಿ : ಕರ್ನಾಟಕಕ್ಕೆ ಹರಿದು ಬಂದ.3750 ಕೋಟಿ ರೂ. ಬಂಡವಾಳ: ಹೆಚ್.ಕೆ.ಪಾಟೀಲ

ಕೊಪ್ಪಳದಲ್ಲಿ ಕೂಡ ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ‌‌. ಇದರಿಂದಲೇ ಜನರು ಕಲುಷಿತ ನೀರು ಕುಡಿಯಬೇಕಾಗಿದೆ. ಶಾಸಕರು ಅನುದಾನ ಕೇಳಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಯ್ಮುಚ್ಚಿಕೊಂಡು ಸುಮ್ಮನಿರಿ ಎಂದಿದ್ದಾರೆ. ಜನರ ಸಾವಿಗೆ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ಕಿಡಿಕಾರಿದರು.

ಅಧಿಕಾರಿಗಳ ಬಳಿ ಈ ಬಗ್ಗೆ ಕಾರಣ ಕೇಳಿದರೆ ಜಾತ್ರೆಯಲ್ಲಿ ಅವಾಂತರವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರು 15 ಬಾರಿ ಬಜೆಟ್ ಮಂಡಿಸಿದರೂ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ. ನಾನು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

ಎಟಿಎಂ ಕಾಂಗ್ರೆಸ್ ಸರ್ಕಾರ ಹೈಕಮಾಂಡ್ ಗೆ ಹಣ ಕಳುಹಿಸಲು ಟ್ಯಾಂಕರ್ ಮಾಫಿಯಾವನ್ನು ಬಳಸಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನದಲ್ಲಿ ಶೇ.25 ರಷ್ಟು ಕಡಿತ ಮಾಡಿ ಮೂಲಸೌಕರ್ಯ ಸಿಗದಂತೆ ಮಾಡಿದೆ. ಇದರ ಪ್ರತಿಫಲವಾಗಿ ಜನರಿಗೆ ಸರಿಯಾಗಿ ನೀರು ದೊರೆಯುತ್ತಿಲ್ಲ. ಸಿಎಂ ಸೂಚನೆಗೆ ಅಧಿಕಾರಿಗಳು ಬೆಲೆ ನೀಡದೆ ಕೈ ಚೆಲ್ಲಿದ್ದಾರೆ. ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಇದನ್ನು ನೋಡಿ : ಚುನಾವಣಾ ಫಲಿತಾಂಶದ ನಂತರವೂ ಮುಸ್ಲಿಂರೇ ಟಾರ್ಗೆಟ್‌!? – ಮುನೀರ್ ಕಾಟಿಪಳ್ಳ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *