ನವದೆಹಲಿ : ಸುಪ್ರೀಂ ಕೋರ್ಟ್ ವಕೀಲರ ಸಂಘ(ಎಸ್‌ಸಿಬಿಎ)ದ ಅಧ್ಯಕ್ಷ ಆದಿಶ್ ಅಗರ್ವಾಲ್‌ರನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರು ತರಾಟೆಗೆ ತೆಗೆದುಕೊಂಡರು.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ, ಬಾಂಡ್ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ದ ಆದಿಶ್ ಅಗರ್ವಾಲ್ ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಇಂದು ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ತಾವು ರಾಷ್ಟ್ರಪತಿಗಳಿಗೆ ಪತ್ರ ಬರೆದ ವಿಚಾರವನ್ನು ಅಗರ್ವಾಲ್ ಪ್ರಸ್ತಾಪಿಸಿದರು,ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಹಿರಿಯ ವಕೀಲರ ಹೊರತಾಗಿ ನೀವು ಎಸ್‌ಸಿಬಿಎ ಅಧ್ಯಕ್ಷರು. ನನ್ನ ಸ್ವಯಂಪ್ರೇರಿತ ಅಧಿಕಾರಗಳ ಕುರಿತಂತೆ ನೀವು ಪತ್ರ ಬರೆದಿದ್ದೀರಿ. ಇವುಗಳೆಲ್ಲಾ ಪ್ರಚಾರ ಉದ್ದೇಶ ಹೊಂದಿವೆ. ನಾನು ಇನ್ನಷ್ಟು ಮಾತಾಡುವಂತೆ ಮಾಡಬೇಡಿ, ಅದು ಚೆನ್ನಾಗಿರದು” ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಅಗರ್ವಾಲ್ ಅವರ ಪತ್ರಕ್ಕೆ ನಮ್ಮ ಬೆಂಬಲವಿಲ್ಲ ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಚಾರದಿಂದ ದೂರ ಉಳಿದರು.
ಘಟನೆಯ ಹಿನ್ನೆಲೆ : ಚುನಾವಣಾ ಬಾಂಡ್ ಕುರಿತು “ದೇಣಿಗೆ ನೀಡಿದವರ ಹೆಸರು ಮತ್ತು ಅವರು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಮೊತ್ತವನ್ನು ಬಹಿರಂಗಪಡಿಸಿದರೆ, ಅವರಿಂದ ಕಡಿಮೆ ದೇಣಿಗೆ ಪಡೆದ ಪಕ್ಷಗಳು ಕಿರುಕುಳ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದೇಣಿಗೆ ಪಡೆಯುವಾಗ ಹೆಸರು ಬಹಿರಂಗಪಡಿಸುವುದಿಲ್ಲ ಎಂಬ ಮಾತು ಕೊಡಲಾಗಿತ್ತು. ಹೆಸರು ಬಹಿರಂಗಪಡಿಸಿದರೆ ವಚನ ಭಂಗ ಮಾಡಿದಂತೆ ಆಗುತ್ತದೆ” ಎಂದು ಆದಿಶ್ ಅಗರ್ವಾಲ್ ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.