ಸೌಹಾರ್ದದ ಭಾಷೆ ಸಮನ್ವಯದ ಮನಸ್ಸು ಸಮಾಜದ ಬುನಾದಿಯಾಗುವುದು ಇವತ್ತಿನ ತುರ್ತು
ಏಪ್ರಿಲ್ 22ರಂದು ಕಾಶ್ಮೀರದ ಪ್ರವಾಸಿ ತಾಣ ಪೆಹಲ್ಗಾಮ್ನಲ್ಲಿ ಭಯೋತ್ಪಾದಕರಿಂದ ನಡೆದಿರುವ ನರಮೇಧ ಮಾನವ ಸಮಾಜವನ್ನೇ ತಲ್ಲಣಗೊಳಿಸುವ ಒಂದು ಘಟನೆ. ಈ ದುರಂತದಲ್ಲಿ ಮಡಿದ 26 ಪ್ರವಾಸಿಗರು,, ಇಬ್ಬರು ಸ್ಥಳೀಯರು, ಗಾಯಗೊಂಡ 20ಕ್ಕೂ ಹೆಚ್ಚು ಜನರು ನಮ್ಮ ಸಾಮಾಜಿಕ ಸೂಕ್ಷ್ಮತೆ ಮತ್ತು ನಾಗರಿಕ ಪ್ರಜ್ಞೆಗೆ ಸವಾಲಾಗಿ ನಿಲ್ಲುತ್ತಾರೆ. ಪ್ರತಿ ಬಾರಿ ಈ ರೀತಿಯ ಭಯೋತ್ಪಾದಕ ದಾಳಿಗಳು ಸಂಭವಿಸಿದಾಗಲೂ, ಹತ್ತಾರು ಜನರ ಮಾರಣ ಹೋಮ ನಡೆದಾಗಲೂ ಎರಡು ರಾಜಕೀಯ ಧ್ವನಿಗಳು ಥಟ್ಟನೆ ಪ್ರಕಟವಾಗುತ್ತವೆ. ಆಡಳಿತಾರೂಢ ಸರ್ಕಾರದಿಂದ ಸಹಜವಾಗಿಯೇ ಉಗ್ರವಾದವನ್ನು/ಭಯೋತ್ಪಾದನೆಯನ್ನು ಬುಡಮಟ್ಟದಿಂದಲೇ ಹೊಸಕಿಹಾಕುತ್ತೇವೆ ಎಂಬ ಭರವಸೆ, ವಿರೋಧ ಪಕ್ಷಗಳಿಂದ ಗುಪ್ತಚರ ವೈಫಲ್ಯ ಮೊದಲಾದ ಕೊರತೆಗಳ ಆರೋಪ. ಈ ಬಾರಿ ಗುಪ್ತಚರ ವೈಫಲ್ಯವಾಗಿರುವುದನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕಾದ ಸನ್ನಿವೇಶದಲ್ಲಿ, 26 ಅಮಾಯಕರು ತಮ್ಮ ಜೀವ ತೊರೆದಿದ್ದಾರೆ. ನಾಗರಿಕ
-ನಾ ದಿವಾಕರ
ಇಂತಹ ಘಟನೆಗಳು ʼ ಖಂಡನಾರ್ಹʼ ಎಂದು ಹೇಳುವುದು ಸಹಜವಾದರೂ, ಇದು ಕೇವಲ ಖಂಡನೆ ಅಥವಾ ಉಗ್ರ ಪ್ರತೀಕಾರಗಳಿಗೆ ಸೀಮಿತವಾದ ವಿದ್ಯಮಾನ ಅಲ್ಲ. ಏಕೆಂದರೆ ಭಯೋತ್ಪಾದನೆ ಎಂಬ ಒಂದು ಮಾನವ ವಿರೋಧಿ ವಿದ್ಯಮಾನ ಆಧುನಿಕ-ನಾಗರಿಕ ಮಾನವ ಸಮಾಜದ ಒಂದು ಸೃಷ್ಟಿ. ಸಮಾಜವನ್ನು, ಸಮುದಾಯವನ್ನು ಹಾಗೂ ಭೌಗೋಳಿಕ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಊಳಿಗಮಾನ್ಯ ಧೋರಣೆಯ ಅಂತಾರಾಷ್ಟ್ರೀಯ ಆಯಾಮವನ್ನು ʼ ಭಯೋತ್ಪಾದನೆ ʼಯ ಎಲ್ಲ ಮಜಲುಗಳಲ್ಲೂ ಗುರುತಿಸಬಹುದು. ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಮತ್ತೆರಡು ಧ್ವನಿಗಳು ಕೇಳಿಬರುತ್ತವೆ. ʼ ಭಯೋತ್ಪಾದನೆಗೆ ಮತ ಅಥವಾ ಧರ್ಮ ಎಂಬುದಿಲ್ಲ ʼ ಎಂಬ ಸೆಕ್ಯುಲರ್ ಕೂಗು, ಮತ್ತೊಂದು ʼ ಭಯೋತ್ಪಾದನೆಯನ್ನು ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ನೆಲೆಯಲ್ಲಿ ʼ ಗುರುತಿಸುವ ಭಾವೋದ್ವೇಗದ ಮತಾಂಧತೆಯ ಪ್ರಚಾರ. ನಾಗರಿಕ
ಹಿಂಸೆ ಕ್ರೌರ್ಯದ ವಿರಾಟ್ ರೂಪ
ನಿಜ, ಅತ್ಯಾಚಾರದಿಂದ ಭಯೋತ್ಪಾದನೆಯವರೆಗೆ ಯಾವುದೇ ಮನುಷ್ಯ ವಿರೋಧಿ ಚಟುವಟಿಕೆಗಳಿಗೂ ʼ ಧರ್ಮ ʼ ಎನ್ನುವುದು ಇರುವುದಿಲ್ಲ. ಆದರೆ ಈ ಅಮಾನುಷ ಚಟುವಟಿಕೆಗಳಲ್ಲಿ ತೊಡಗುವ ಶಕ್ತಿಗಳು-ವ್ಯಕ್ತಿ-ಸಂಘಟನೆಗಳು ಪ್ರೇರಣೆ ಪಡೆಯುವುದು, ಪ್ರಚೋದನೆ ಪಡೆಯುವುದು ತಾವು ಶ್ರದ್ಧಾಭಕ್ತಿಯಿಂದ, ವಿವೇಕರಹಿತರಾಗಿ ಅನುಸರಿಸುವ-ಅನುಕರಿಸುವ ವಿವಿಧ ಮತ/ಧರ್ಮಗಳ ಚೌಕಟ್ಟಿನೊಳಗೆ. ಗ್ರಾಂಥಿಕ ನೆಲೆಯಲ್ಲಿ ಇದನ್ನು ಸಮರ್ಥಿಸುವಂತಹ ಯಾವುದೇ ನಿರೂಪಣೆಗಳನ್ನಾಗಲೀ (Narratives), ವ್ಯಾಖ್ಯಾನಗಳಾಗಲೀ (Interpretationns) ಗುರುತಿಸುವುದು ಸಾಧ್ಯವಿಲ್ಲ. ಮಾನವ ಜಗತ್ತನ್ನು ನಿರ್ದೇಶಿಸುವ ಸಾಂಸ್ಥೀಕರಣಗೊಂಡ , ಎಲ್ಲ ಧಾರ್ಮಿಕ ಚಿಂತನೆಗಳೂ ಸಹಬಾಳ್ವೆಯ ಸಮಾಜವನ್ನು ಕಟ್ಟುವ ಕನಸುಗಳಿಂದ ತುಂಬಿರುತ್ತವೆ. ಮನುಷ್ಯರ ನಡುವಿನ ಪರಸ್ಪರ ಸಂಬಂಧಗಳನ್ನು ಮಾನವೀಯ ನೆಲೆಯಲ್ಲೇ ನಿರ್ವಚಿಸುತ್ತವೆ. ಆದಾಗ್ಯೂ ಅಮೂರ್ತ ನೆಲೆಯಲ್ಲಿ ಈ ಅಂಧಾನುಕರಣೆಯೇ ಹಿಂಸೆ ಮತ್ತು ಕ್ರೌರ್ಯವನ್ನೂ ಪ್ರಚೋದಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಾಗರಿಕ
ಇದನ್ನೂ ಓದಿ: ಇರಾನ್-ಯು.ಎಸ್ ಮಾತುಕತೆ : ಅಣು ಒಪ್ಪಂದಕ್ಕೆ ಹಾದಿಯೋ, ಯುದ್ಧಕ್ಕೆ ಮುನ್ನುಡಿಯೋ?
ಆಧುನಿಕ ನಾಗರಿಕತೆಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮತಗಳ ಮತ್ತು ಅವುಗಳು ಪ್ರತಿಪಾದಿಸುವ ಧಾರ್ಮಿಕ ಆಲೋಚನೆಗಳ ಸಾಂಸ್ಥೀಕರಣದ ಫಲವಾಗಿಯೇ, ಭೌಗೋಳಿಕ ವಿಸ್ತರಣೆಗಾಗಿ, ಮಾರುಕಟ್ಟೆ ನಿಯಂತ್ರಣಕ್ಕಾಗಿ, ಸಾಂಸ್ಕೃತಿಕ ಯಜಮಾನಿಕೆಗಾಗಿ ಹಾಗೂ ಸಾಮಾಜಿಕ ಆಧಿಪತ್ಯಕ್ಕಾಗಿ ಮತ್ತೊಂದು ನೆಲೆಯನ್ನು ಆಕ್ರಮಿಸುವ ಪ್ರಚೋದನೆಗಳೂ ಸೃಷ್ಟಿಯಾಗುತ್ತಿರುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಇಂದು ಇಡೀ ಜಗತ್ತನ್ನು ತಲ್ಲಣಗೊಳಿಸುವ ʼಇಸ್ಲಾಮಿಕ್ ಜಿಹಾದಿʼ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಉದಾಹರಣೆಯಾಗಿ ಮುಂದಿಡಲಾಗುತ್ತದೆ. ಆದರೆ ಇಲ್ಲಿ ಸೃಷ್ಟಿಯಾಗಿರುವ ಭಯೋತ್ಪಾದನೆಯ ಚೌಕಟ್ಟುಗಳಿಗೆ ಭೌಗೋಳಿಕ ರಾಜಕಾರಣ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒಡೆತನ, ಮಾರುಕಟ್ಟೆ ನಿಯಂತ್ರಣ ಮುಂತಾದ ಸಾಮ್ರಾಜ್ಯಶಾಹಿ ವಿದ್ಯಮಾನಗಳೂ ಕಾರಣವಾಗಿರುವುದನ್ನು ಗುರುತಿಸಬೇಕಿದೆ.
ಈ ದೃಷ್ಟಿಯಿಂದ, ವಿಶ್ವದಾದ್ಯಂತ ಆಳುವ ವರ್ಗಗಳು ನಿರ್ವಚಿಸುವ ʼ ಭಯೋತ್ಪಾದನೆ ʼಎಂಬ ವಿದ್ಯಮಾನವನ್ನು ಸೂಕ್ಷ್ಮವಾಗಿ ಭೇದಿಸಿ, ಅದನ್ನು ಹಿಂಸಾತ್ಮಕ ಮನಸ್ಥಿತಿಯ ರೂಪದಲ್ಲಿ ನೋಡಿದಾಗ, ಅಲ್ಲಿ ನಮಗೆ ಮತೀಯ ಆಧಿಪತ್ಯಕ್ಕಾಗಿ ಅಥವಾ ಧಾರ್ಮಿಕ ಅಹಮಿಕೆಯ ಕಾರಣದಿಂದ ಸಹಮಾನವರನ್ನೇ ಕೊಲ್ಲಲೂ ಹೇಸದ ಒಂದು ಸಾಂಸ್ಥಿಕ ಚೌಕಟ್ಟನ್ನು ಗುರುತಿಸಬಹುದು. ಈ ನರಮೇಧ/ಹತ್ಯಾಕಾಂಡದ ಚರಿತ್ರೆಯಲ್ಲಿ ಅಹಿಂಸೆಯನ್ನೇ ಮೂಲತತ್ವವಾಗಿರಿಸಿಕೊಂಡ ಬೌದ್ಧ ಧಮ್ಮವನ್ನು ಅನುಸರಿಸುವ ಶ್ರೀಲಂಕಾ, ಜಪಾನ್, ಮ್ಯಾನ್ಮಾರ್ ಮೊದಲಾದ ದೇಶಗಳೂ ಇದಕ್ಕೆ ಹೊರತಾಗಿಲ್ಲ. ಅಂತಾರಾಷ್ಟ್ರೀಯ ಭೌಗೋಳಿಕ ರಾಜಕಾರಣದಲ್ಲಿ (Geo Politics) ಯೆಮನ್, ಲೆಬನಾನ್, ಗಾಝಾ, ಇರಾಕ್, ಸೂಡಾನ್, ಸಿರಿಯಾ, ಆಫ್ಘಾನಿಸ್ತಾನ ಮುಂತಾದ ರಣಭೂಮಿಗಳು ಎದುರಾಗುತ್ತವೆ. ಈ ದೇಶಗಳಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳೇ ಸೃಷ್ಟಿಸಿರುವ ಉಗ್ರವಾದ ಈಗ ಅನಿರ್ಬಂಧಿತವಾಗಿ, ಮನುಕುಲವನ್ನು ನಾಶಪಡಿಸುತ್ತಿದೆ.
ಹಾಗೆಯೇ ಆಂತರಿಕವಾಗಿ ನೋಡಿದಾಗ, ನರಮೇಧಗಳ ದೀರ್ಘ ಇತಿಹಾಸವನ್ನೇ ಗುರುತಿಸಬಹುದು. ನೆಲ್ಲಿ, ಗುಜರಾತ್, ಮುಂಬೈ, ಪಂಜಾಬ್ ಈ ಕೋಮುಗಲಭೆಗಳಲ್ಲಿ ಸಹಮಾನವರನ್ನು ನಿಷ್ಕಾರುಣ್ಯವಾಗಿ ಹತ್ಯೆ ಮಾಡುವ ಒಂದು ಪರಂಪರೆಯನ್ನೇ ಗುರುತಿಸಬಹುದು. ಈ ಘಟನೆಗಳನ್ನು ಕೋಮುಗಲಭೆ, ಖಾಲಿಸ್ತಾನ, ಮತೀಯ ಸಂಘರ್ಷ ಮುಂತಾದ ಪದಗಳ ಮೂಲಕ ನಿರ್ವಚಿಸಿದರೂ, ಅಲ್ಲಿನ ನಮಗೆ ಮೇಲೆ ಉಲ್ಲೇಖಿಸಿದಂತೆ ಸಮಾಜದ ಮೇಲೆ ಯಜಮಾನಿಕೆಯನ್ನು ಸ್ಥಾಪಿಸುವ ಸಾಂಸ್ಥಿಕ-ಧಾರ್ಮಿಕ ಚಿಂತನೆಗಳು, ಸಾಂಸ್ಕೃತಿಕ ಚೌಕಟ್ಟುಗಳು ಹಾಗೂ ಭೌಗೋಳಿಕ ವಿಸ್ತರಣೆಯ ಆಕಾಂಕ್ಷೆಗಳೂ ಕಾಣಲು ಸಾಧ್ಯ. ದುರಂತ ಎಂದರೆ ನಾಗರಿಕ ಸಮಾಜವಾಗಿ ನಾವು ʼಭಯೋತ್ಪಾದನೆ ʼ ಯ ಅಥವಾ ʼ ಸಾಂಘಿಕ ಹಿಂಸೆ-ಸಾಂಸ್ಥಿಕ ಪ್ರಚೋದನೆʼ;ಯ ಸಮಾಜಘಾತುಕ ಲಕ್ಷಣಗಳನ್ನು, ಮಾನವ ವಿರೋಧಿ ಸ್ವರೂಪಗಳನ್ನು ಹೀಗೆ ಛೇದಿಸಿ ನೋಡುವ ಪ್ರಯತ್ನಗಳನ್ನೇ ಮಾಡುತ್ತಿಲ್ಲ.
ಪೆಹಲ್ಗಾಮ್- ಅಮಾನುಷತೆಯ ಸಂಕೇತ
ಕಾಶ್ಮೀರದ ಪೆಹಲ್ಗಾಮ್ನಲ್ಲಿ ನಡೆದಿರುವುದು ಯಾವುದೇ ನಾಗರಿಕ ಪ್ರಜ್ಞೆಯೂ ಸಹಿಸಿಕೊಳ್ಳಲಾಗದ ಒಂದು ಘಟನೆ. ಇದರ ಹಿಂದಿನ ವಿದೇಶಿ ಶಕ್ತಿಗಳಾಗಲೀ, ಸ್ಥಳೀಯ ಸಂಘಟನೆಗಳಾಗಲೀ ಕ್ಷಮಾರ್ಹವಾಗಲಾರದು. ಆದರೆ ಈ ಅಮಾನುಷ ಕೃತ್ಯದ ನಡುವೆಯೇ ಮಾನವೀಯತೆ ಮತ್ತು ಮನುಜ ಸೂಕ್ಷ್ಮತೆಯನ್ನು ಎತ್ತಿಹಿಡಿಯುವ ಪ್ರಸಂಗಗಳೂ ನಡೆದಿರುವುದನ್ನು ಗುರುತಿಸಲೇಬೇಕಿದೆ. ಭಯೋತ್ಪಾದಕರ ದಾಳಿಗೆ ತುತ್ತಾದ 26 ಅಮಾಯಕ ಹಿಂದೂಗಳ ಜೊತೆಗೆ ಅವರ ರಕ್ಷಣೆಗೆ ಧಾವಿಸಿದ ಇಬ್ಬರು ಮುಸ್ಲಿಂ ವ್ಯಕ್ತಿಗಳೂ ಹತರಾಗಿದ್ದಾರೆ. ಹಂತಕರ ಉದ್ದೇಶ ಕೊಲ್ಲುವುದೊಂದೇ ಆಗಿರುತ್ತದೆ ಎನ್ನುವುದು ಸಮಾಜಶಾಸ್ತ್ರೀಯ ಮನಶ್ಶಾಸ್ತ್ರದ ಅರಿವು ಇರುವ ಯಾರಿಗೇ ಆದರೂ ತಿಳಿದಿರುವ ಸಂಗತಿ. ಇದರ ಒಂದು ಉದಾಹರಣೆಯನ್ನು ಒಡಿಷಾದ ಕ್ರೈಸ್ತ ಪಾದ್ರಿ ಗ್ರಾಹಂ ಸ್ಟೈನ್ಸ್ ಅವರ ಸಜೀವ ದಹನ ಪ್ರಕರಣದಲ್ಲಿ ಕಾಣಬಹುದು. ಹಾಗಾಗಿ ಸಹಮಾನವರನ್ನು ಕೊಲ್ಲುವ ಕ್ರಿಯೆಯ ಹಿಂದೆ ಒಂದು ಕ್ರೂರ ಮನಸ್ಥಿತಿ, ಅಮಾನುಷ ಧೋರಣೆ ಹಾಗೂ ದುಷ್ಟ ಆಲೋಚನೆಗಳು ಸುಪ್ತವಾಗಿರುತ್ತವೆ ಎನ್ನುವುದನ್ನು ಗಮನಿಸಬೇಕಿದೆ.
ಕಾಶ್ಮೀರದ ಪೆಹಲ್ಗಾಮ್ನ ಸುಂದರ ಪರಿಸರದಲ್ಲಿ ಅಮಾನುಷ ದಾಳಿಯಿಂದ ಚೆಲ್ಲಾಡಿದ ನೆತ್ತರ ಕೋಡಿಯಲ್ಲಿ ನಮಗೆ ಹೃದಯವಿದ್ರಾವಕ ಚಿತ್ರಣ ಕಾಣುತ್ತದೆ. ಕಠೋರ ಹೃದಯವನ್ನೂ ಕಲುಕುವ ಈ ದೃಶ್ಯಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸುತ್ತದೆ. ಇದನ್ನು ಅಲ್ಲಗಳೆಯಲೂ ಆಗದು. ಆದರೆ 21ನೇ ಶತಮಾನದ ಮೂರನೆ ದಶಕದಲ್ಲಿರುವ ಆಧುನಿಕ ಸಮಾಜಕ್ಕೆ ಇಲ್ಲಿ ಕಾಣಬೇಕಿರುವುದು, ಒಂದೆಡೆ ಮನುಷ್ಯನಲ್ಲಿ ಮಾನವೀಯ ಪ್ರಜ್ಞೆಯ ಅವನತಿ ಮತ್ತೊಂದೆಡೆ ನಿರ್ದಿಷ್ಟ ಧಾರ್ಮಿಕ/ಮತೀಯ ಅಸ್ಮಿತೆಗಳ ನೋವು ಮತ್ತು ತಲ್ಲಣಗಳು. ಏಕೆಂದರೆ ಪೆಹಲ್ಗಾಮ್ನಲ್ಲಿ ದಾಳಿಯನ್ನು ʼ ಧರ್ಮ ʼದ ಚೌಕಟ್ಟಿನೊಳಗಿಟ್ಟು ನೋಡದೆ ಹೋದರೂ, ಅಲ್ಲಿ ಘಾಸಿಗೊಳಗಾದ ಭಾವನೆಗಳು ಮತ್ತು ಮಾನವ ಸಂವೇದನೆಯ ನೆಲೆಗಳು, ಸಾಮಾನ್ಯ ಜನರ ನಡುವೆ ತಲ್ಲಣ ಸೃಷ್ಟಿಸುತ್ತವೆ.
ಆಡಳಿತಾತ್ಮಕ ನೆಲೆಯಲ್ಲಿ ಗೋಚರಿಸುವ ಗುಪ್ತಚರ ಇಲಾಖೆಯ ವೈಫಲ್ಯ, ಭದ್ರತಾ ವ್ಯವಸ್ಥೆಯ ಲೋಪ ಇವೆಲ್ಲವೂ ಆಡಳಿತಾರೂಢ ಸರ್ಕಾರವೇ ಉತ್ತರಿಸಬೇಕಾದ ಪ್ರಶ್ನೆಗಳು. ಸ್ವತಂತ್ರ ಭಾರತದ ಚರಿತ್ರೆಯಲ್ಲೇ ʼ ಉತ್ತರದಾಯಿತ್ವ ʼ ಎನ್ನುವುದು ಸಾರ್ವಜನಿಕ ಚರ್ಚೆಗೂ ಒಳಗಾಗದ ಒಂದು ವಿದ್ಯಮಾನ. 2008ರ ಮುಂಬೈ, 2019ರ ಪುಲ್ವಾಮಾ ಮತ್ತು 2025ರ ಪೆಹಲ್ಗಾಮ್ ಈ ಮೂರೂ ಭೀಕರ ಘಟನೆಗಳು ಭಾರತದ ಸರ್ಕಾರಗಳಿಗೆ ಸವಾಲಾಗಿಯೇ ಪರಿಣಮಸಿವೆ. ಪುಲ್ವಾಮಾ ಘಟನೆಯ ಬಗ್ಗೆ ಈ ವೇಳೆಗೆ ಕನಿಷ್ಠ ಎಫ್ಐಆರ್ ದಾಖಲಾಗಿ, ಸಮಗ್ರ ತನಿಖೆ ನಡೆದು, 40 ಯೋಧರ ಅಮೂಲ್ಯ ಜೀವಗಳ ನರಮೇಧಕ್ಕೆ ಕಾರಣವಾದ ಶಕ್ತಿಗಳಿಗೆ ಶಿಕ್ಷೆಯಾಗಿದ್ದರೆ ? ಈ ಪ್ರಶ್ನೆ ಸಹಜವಾಗಿ ಮೂಡುತ್ತದೆ. . ಆದರೆ ಭಾರತದ ಸಾರ್ವಜನಿಕ ಪ್ರಜ್ಞೆಯಲ್ಲಿ ಪುಲ್ವಾಮಾ ವಿಸ್ಮೃತಿಗೆ ಜಾರಿಬಿಟ್ಟಿದೆ. ಇಲ್ಲಿ ಹತರಾದ ಯೋಧರ ಕುಟುಂಬಗಳಿಗೆ ನ್ಯಾಯ ಬೇಕು ಎನ್ನುವ ಧ್ವನಿ ರಾಜಕೀಯವಾಗಿಯೂ ಸಹ ಕೇಳಿಬಂದಿಲ್ಲ.
ಈ ಉತ್ತರದಾಯಿತ್ವ ಮತ್ತು ಆಡಳಿತಾತ್ಮಕ ಜವಾಬ್ದಾರಿಯ ಚೌಕಟ್ಟಿನಿಂದ ಹೊರನಿಂತು ನೋಡಿದಾಗ, ನಾಗರಿಕರಾಗಿ ನಮ್ಮ ಕರ್ತವ್ಯವನ್ನೂ ಮರುನಿರ್ವಚನೆಗೊಳಪಡಿಸಬೇಕಾಗುತ್ತದೆ. ಏಕೆಂದರೆ ಭಾರತದ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ತಮ್ಮ ಟಿವಿ ಪರದೆಗಳ ಮೇಲೆ ಗ್ರಾಫಿಕ್ಸ್ ಮೂಲಕ ಸೃಷ್ಟಿಸುವ ಯುದ್ಧೋನ್ಮಾದ ಇಡೀ ಸಮಾಜವನ್ನು ದಿಕ್ಕುತಪ್ಪಿಸುತ್ತವೆ. ಭಯೋತ್ಪಾದನೆ ಮಾನವ ಸಮಾಜವನ್ನು ಗಾಢವಾಗಿ ಕಾಡುತ್ತಿರುವ ಒಂದು ಪಿಡುಗು ಆದರೆ ʼ ಯುದ್ಧ ʼ ಎನ್ನುವುದು ಮನುಕುಲವನ್ನೇ ವಿನಾಶದ ಅಂಚಿಗೆ ಕೊಂಡೊಯ್ಯುವ ಪ್ರಕ್ರಿಯೆ. ಯಾವುದೇ ದೇಶಗಳ ನಡುವೆ ನಡೆದರೂ, ಯುದ್ಧ ಎನ್ನುವುದು ವರ್ತಮಾನ ಮತ್ತು ಭವಿಷ್ಯದ ಮಾನವ ಸಮಾಜವನ್ನು ಶಾಶ್ವತವಾಗಿ ವಿನಾಶದಂಚಿಗೆ ತಂದು ನಿಲ್ಲಿಸುವ ಒಂದು ಹಿಂಸಾತ್ಮಕ ಪ್ರಕ್ರಿಯೆ. ಯುದ್ಧಗಳ ಮೂಲಕವೇ ಜಾಗತಿಕ ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಸಾಧ್ಯವಿಲ್ಲ ಎನ್ನುವುದನ್ನು ಅಮೆರಿಕದ ದುಸ್ಸಾಹಸಗಳ ಚರಿತ್ರೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. ಏಕೆಂದರೆ ಸಾಂಘಿಕ-ಸಾಂಸ್ಥಿಕ ಸ್ವರೂಪ ಪಡೆದುಕೊಂಡಿದ್ದರೂ, ಭಯೋತ್ಪಾದನೆ ಅಥವಾ ಉಗ್ರವಾದ ಅಥವಾ ಯಾವುದೇ ರೀತಿಯ ಆಕ್ರಮಣಕಾರಿ ಪ್ರವೃತ್ತಿಯ ಮೂಲ ಇರುವುದು ಕ್ರೂರ-ಹಿಂಸಾತ್ಮಕ ಮನಸ್ಥಿತಿಯಲ್ಲಿ.
ಸಾಮಾಜಿಕ ಮನಸ್ಥಿತಿ-ಆಲೋಚನೆ
ಈ ಮನಸ್ಥಿತಿಯನ್ನು ನಿರಂತರವಾಗಿ ಪೋಷಿಸುವ, ಪ್ರಚೋದಿಸುವ ಮತ್ತು ಕಾರ್ಯಗತಗೊಳಿಸುವ ವಿಚ್ಛಿದ್ರಕಾರಕ ಶಕ್ತಿಗಳನ್ನು ನಾವು ನಿತ್ಯ ಕಾಣುವ ಸಮಾಜದ ಒಳಗಿನಿಂದಲೇ ಸೃಷ್ಟಿಸಲಾಗುತ್ತದೆ. ಈ ಮನಸ್ಥಿತಿ ವಿಭಿನ್ನ ಆಯಾಮಗಳಲ್ಲಿ ಅನಾವರಣಗೊಳ್ಳುವುದನ್ನು ಕೋಮು ಗಲಭೆಗಳಲ್ಲಿ, ಮತೀಯ ಸಂಘರ್ಷದಲ್ಲಿ, ಜಾತಿ ದೌರ್ಜನ್ಯಗಳಲ್ಲಿ ಭಾರತ ಕಾಣುತ್ತಲೇ ಬಂದಿದೆ. ಇಂತಹ ಮನಸ್ಥಿತಿಗೆ ಕಾರಣ ಮತವೋ, ಧಾರ್ಮಿಕ ನಂಬಿಕೆಯೋ, ಜಾತಿ ಶ್ರೇಷ್ಠತೆಯೋ, ಪಿತೃಪ್ರಧಾನತೆಯೋ ? ಇದನ್ನು ಭೇದಿಸುತ್ತಾ ಹೋದಲ್ಲಿ ನಾಗರಿಕತೆಯ ರೂಪ (Civilisational Form) ಪಡೆದಿರುವ ನಮ್ಮ ಸಮಾಜದ ಒಳಗೇ ಇರಬಹುದಾದ ದ್ವೇಷಾಸೂಯೆಗಳು, ಸಂವೇದನಾರಹಿತ ಆಲೋಚನೆಗಳು, ʼಅನ್ಯʼರನ್ನು ಸೃಷ್ಟಿಸುವ ಭೇದಭಾವಗಳು, ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುವ ಮೇಲರಿಮೆಗಳು ಮತ್ತು ಈ ಕಾರಣಗಳಿಂದಲೇ ಸೃಷ್ಟಿಯಾಗುವ ಅಮಾನುಷತೆ ಎದುರಾಗುತ್ತವೆ.
ಸಾಮಾನ್ಯ ಮನುಷ್ಯನ ಈ ಮನಸ್ಥಿತಿಯನ್ನೇ ಸಾಂಸ್ಥಿಕವಾಗಿ-ಸಾಂಘಿಕವಾಗಿ ಬಳಸಿಕೊಳ್ಳುವ ಮತಾಂಧ ಶಕ್ತಿಗಳು, ಮತೀಯ ಗುಂಪುಗಳು, ಸುಲಭವಾಗಿ ವಶೀಕರಣಕ್ಕೊಳಗಾಗುವ ಅಥವಾ ಸಮ್ಮೋಹನಕ್ಕೊಳಗಾಗಬಹುದಾದ ವ್ಯಕ್ತಿಗಳನ್ನು ಸಮಾಜದ ಒಳಗಿನಿಂದಲೇ ಆಕ್ರಮಿಸಿಕೊಳ್ಳುತ್ತವೆ. ಇಲ್ಲಿ ವ್ಯಕ್ತಿಗತ ದೌರ್ಬಲ್ಯ ಒಂದು ಕಾರಣವಾದರೆ ಮತ್ತೊಂದು ತತ್ವ-ಸಿದ್ದಾಂತ ಅಥವಾ ಮತೀಯ-ಧಾರ್ಮಿಕ ಅಂಧಶ್ರದ್ಧೆಯೂ ಕಾರಣವಾಗುತ್ತದೆ. ಕಾಶ್ಮೀರದ ಯುವಜನರಲ್ಲಿ ಇಂತಹ ಒಂದು ಸಮೂಹ ಸನ್ನಿಗೊಳಗಾಗಿರುವವರೇ ಭಯೋತ್ಪಾದಕ ಚಟುವಟಿಕೆಗಳ ವಾಹಕ ಶಕ್ತಿಗಳಾಗಿ ಪರಿಣಮಿಸುತ್ತಾರೆ. ಈ ಸಮೂಹ ಸನ್ನಿ ಮತ ಅಥವಾ ಧರ್ಮದ ನೆಲೆಗಳನ್ನು ದಾಟಿ, ಸಾಮಾಜಿಕ ಅಡಿಪಾಯವನ್ನು ಭೇದಿಸತೊಡಗಿದಾಗ, ಅಲ್ಲಿ ಸಮಾಜಘಾತುಕ ಮನಸ್ಥಿತಿ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುತ್ತದೆ. ಇದನ್ನು ಭಾರತದಲ್ಲಿ ಕಾಶ್ಮೀರದಿಂದಾಚೆಗೂ, ಭಾರತದಿಂದಾಚೆ ಎಲ ದೇಶಗಳಲ್ಲೂ ಕಾಣಬಹುದು.
ಈ ಅಪಾಯವನ್ನು ತಡೆಗಟ್ಟುವ ಜವಾಬ್ದಾರಿ ಸಂವಹನ ಮಾಧ್ಯಮಗಳ ಮೇಲಿರುತ್ತದೆ. ಹಾಲಿವುಡ್ ಮಾದರಿಯ ಗ್ರಾಫಿಕ್ಸ್ ಬಳಸಿ, ಸುದ್ದಿ ಕೋಣೆಗಳಲ್ಲಿ (News Rooms) ʼ ಸಂಭಾವ್ಯ ʼ ಯುದ್ಧ ಸನ್ನಿವೇಶವನ್ನು ಬಿತ್ತರಿಸುವ ಬದಲು, ಭಾರತದ ವಿದ್ಯುನ್ಮಾನ ಮಾಧ್ಯಮಗಳು ಜನಸಾಮಾನ್ಯರ ನಡುವೆ ಸಂಯಮ, ವಿವೇಕ ಮತ್ತು ವಿವೇಚನೆಯ ಸಂದೇಶಗಳನ್ನು ಬಿತ್ತುವ ನಿಟ್ಟಿನಲ್ಲಿ ಯೋಚಿಸುವುದು ವರ್ತಮಾನದ ತುರ್ತು ಎನಿಸುವುದಿಲ್ಲವೇ ? ಪೆಹಲ್ಗಾಮ್ ಘಟನೆಗೆ ಕಾರಣರಾದವರನ್ನು ಹಿಡಿದು ಶಿಕ್ಷಿಸುವುದು, ಈ ಕ್ರೌರ್ಯದ ಹಿಂದೆ ಇರಬಹುದಾದ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಪ್ರತೀಕಾರ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರಗಳ ಆಡಳಿತಾತ್ಮಕ ಕರ್ತವ್ಯ. ಆದರೆ ಆಕ್ರೋಶದ ಭರದಲ್ಲಿ ಕೈಗೊಳ್ಳಬಹುದಾದ ಪ್ರತೀಕಾರದ ಕ್ರಮಗಳನ್ನು ಬಿತ್ತರಿಸುವ ದೃಶ್ಯ ಮಾಧ್ಯಮಗಳು, ವಿಶಾಲ ಸಮಾಜದ ಜನಸಾಮಾನ್ಯರ ನಡುವೆ ಸಂಯಮ, ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಭಾರತದ ಬಹುತೇಕ ದೃಶ್ಯ ಮಾಧ್ಯಮಗಳು ಇಲ್ಲಿ ವಿಫಲವಾಗಿವೆ.
ನಾಗರಿಕತೆಯ ನೈತಿಕ ಜವಾಬ್ದಾರಿ
ನಾಗರಿಕತೆಯನ್ನು ಅಳವಡಿಸಿಕೊಂಡ ಸಮಾಜವೊಂದು (Civilised Society) ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಯಮದಿಂದ ವರ್ತಿಸಬೇಕಾಗುತ್ತದೆ. ಭಾರತೀಯ ಸರ್ಕಾರ ಕೈಗೊಳ್ಳಬಹುದಾದ ಯಾವುದೇ ಕ್ರಮಗಳಿಗೆ ಸಮ್ಮತಿಸಬೇಕಾಗುತ್ತದೆ. ಆದರೆ ಪದೇ ಪದೇ ಹೀಗೇಕೆ ಆಗುತ್ತಿದೆ ? ಎಂಬ ಪ್ರಶ್ನೆಗೆ ಸರ್ಕಾರಗಳೇ ಉತ್ತರಿಸಬೇಕಾಗುತ್ತದೆ. 2016ರ ನೋಟು ಅಮಾನ್ಯೀಕರಣವಾಗಲೀ, ಸಂವಿಧಾನ ಅನುಚ್ಛೇದ 370ರ ರದ್ದತಿಯಾಗಲೀ ಕಾಶ್ಮೀರವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಆಂತರಿಕವಾಗಿ ಸಕ್ರಿಯವಾಗಿರಬಹುದಾದ ಸಾಂಘಿಕ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಕ್ರಮಗಳು ಸ್ವೀಕಾರಾರ್ಹವೇ. ಆದರೆ ಇಲ್ಲಿ ಸಮಾಜದೊಳಗೆ ಆಂತರಿಕವಾಗಿ ಬೇರೂರುತ್ತಿರುವ ದ್ವೇ಼ಷ ಭಾವನೆಗಳನ್ನು ವ್ಯವಸ್ಥಿತವಾಗಿ ಬಿತ್ತುವ ಬೌದ್ಧಿಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಸೃಷ್ಟಿಸುವ ಯುದ್ಧೋನ್ಮಾದ ಇಂತಹ ಸಕಾರಾತ್ಮಕ ಪ್ರಕ್ರಿಯೆಯನ್ನು ಭಂಗಗೊಳಿಸುತ್ತದೆ.
ಪೆಹಲ್ಗಾಮ್ ಘಟನೆಯಿಂದ ಹೊರನಿಂತು ನೋಡಿದಾಗಲೂ ನಮಗೆ ಕಾಣುತ್ತಿರುವುದೇನು ? ಇಡೀ ಸಮಾಜವೇ ಹಿಂಸೆಯನ್ನು ವೈಭವೀಕರಿಸುವ, ಕ್ರೌರ್ಯವನ್ನು Romanticise ಮಾಡುವ, ಅಮಾನುಷ ದಾಳಿಗಳನ್ನು ತನ್ನದೇ ಕಾರಣಗಳಿಗಾಗಿ ಸಮರ್ಥಿಸುವ ಹಾಗೂ ಮನುಜ ಸಂವೇದನೆಯ ನೆಲೆಗಳನ್ನು ನಾಶಪಡಿಸುವ ಒಂದು ವಿಕೃತ ಪ್ರಕ್ರಿಯೆಗೆ ಒಳಗಾಗುತ್ತಿದೆ. ಈ ಮನಸ್ಥಿತಿಗೆ ತತ್ವ-ಸಿದ್ಧಾಂತ-ಮತ-ಧರ್ಮ ಇತ್ಯಾದಿ ಲೇಪನಗಳನ್ನು ಆರೋಪಿಸಲಾಗುತ್ತಿದೆ. ಇದಕ್ಕೆ ಬಲಿಯಾಗುತ್ತಿರುವುದು ಅಮಾಯಕ ಮಹಿಳೆಯರು, ದಲಿತ-ಅಲ್ಪಸಂಖ್ಯಾತರಲ್ಲಿನ ದುರ್ಬಲ ಜನಗಳು ಮತ್ತು ಅವಕಾಶವಂಚಿತ-ಅಂಚಿನಲ್ಲಿರುವ ತಳಸಮುದಾಯಗಳು. ಆಧುನಿಕ ಡಿಜಿಟಲ್ ತಂತ್ರಜ್ಞಾನದ ಹಾಗೂ ಸಾಂವಿಧಾನಿಕ ಸವಲತ್ತುಗಳ ಫಲಾನುಭವಿ ಸಮಾಜವೊಂದರಲ್ಲಿರುವ ಮೇಲ್ಪದರದ ಸಮಾಜ (Elite Society) ಇಂತಹ ಸಾಮಾಜಿಕ ವಿಕೃತಿಯನ್ನು ಹೋಗಲಾಡಿಸುವ ಮುಂದಾಳತ್ವ ವಹಿಸಬೇಕು. ಆದರೆ ದುರದೃಷ್ಟವಶಾತ್ ಭಾರತದಲ್ಲಿ ಈ ವರ್ಗದ ಬಹುದೊಡ್ಡ ಭಾಗ ಭಿನ್ನ ಹಾದಿಯಲ್ಲಿ ಸಾಗುತ್ತಿದೆ.
ಈ ಭಿನ್ನ ಹಾದಿಗೆ ಕಾರಣಗಳೇನೇ ಇರಲಿ, ಪೆಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ನವ ವಿವಾಹಿತ ವ್ಯಕ್ತಿಯ ಮೃತ ದೇಹದ ಪಕ್ಕದಲ್ಲೇ ಕುಳಿತು ದುಃಖಿಸುತ್ತಿರುವ ಮಹಿಳೆಯ ಚಿತ್ರ ಸಾಮಾಜಿಕ ಮಾಧ್ಯಮಗಳಷ್ಟೇ ಅಲ್ಲದೆ, ಎಲ್ಲ ಆಯಾಮಗಳಲ್ಲೂ ಜನಮಾನಸವನ್ನು ತಲುಪಿ, ಮನಸ್ಸನ್ನು ತಲ್ಲಣಗೊಳಿಸುತ್ತಿದೆ. ಈ ಅಮಾಯಕ ಮಹಿಳೆ ಅಥವಾ ಹತನಾದ ವ್ಯಕ್ತಿ ಮಾಡಿದ ಅಪರಾಧವಾದರೂ ಏನು ? ಈ ಪ್ರಶ್ನೆಗೆ ಉತ್ತರವನ್ನು ಶೋಧಿಸುತ್ತಲೇ, ಆ ಮಹಿಳೆಯಲ್ಲಿ ನಮಗೆ, ಇದೇ ರೀತಿಯಲ್ಲಿ ಕೋಮು ಗಲಭೆಗಳಲ್ಲಿ, ಮತಾಂಧರ ದಾಳಿಗಳಲ್ಲಿ, ಹತ್ಯಾಕಾಂಡಗಳಲ್ಲಿ ತಮ್ಮ ಸಂಗಾತಿಗಳನ್ನು ಕಳೆದುಕೊಂಡು ಅನಾಥರಾದ ನೂರಾರು ಮಹಿಳೆಯರೂ ಕಾಣದೆ ಹೋದರೆ, ಇವರ ಪೈಕಿ ಪುಲ್ವಾಮಾ ದುರಂತದಲ್ಲಿ ಸಂಗಾತಿಯನ್ನು ಕಳೆದುಕೊಂಡ 40 ಮಹಿಳೆಯರು ಕಣ್ಣೆದುರು ಬರದೆ ಹೋದರೆ, ನಮ್ಮ ಸಾಮಾಜಿಕ ದೃಷ್ಟಿಗೆ ಪೊರೆ ಬಂದಿದೆ ಎಂದು ಖಚಿತವಾಗಿ ಹೇಳಬಹುದು..
ಒಳನೋಟದ ಸೂಕ್ಷ್ಮತೆ ಮತ್ತು ಪ್ರಜ್ಞೆಯ ಕಡೆಗೆ
ಈ ಪೊರೆಯನ್ನು ಕಳಚುವ ಜವಾಬ್ದಾರಿ ನವ ಭಾರತದ ನಾಗರಿಕ ಜಗತ್ತಿನ ಮೇಲಿದೆ. ಇದು ರಾಜಕೀಯ ಪ್ರಶ್ನೆಯಲ್ಲ. ಆಡಳಿತಾತ್ಮಕ ಜಿಜ್ಞಾಸೆಯೂ ಅಲ್ಲ. ನಮ್ಮ ಚುನಾಯಿತ ಜನಪ್ರತಿನಿಧಿಗಳನ್ನೂ ಒಳಗೊಂಡಂತೆ, ಭಾರತದ ಕಲಿತ-ಮುಂದುವರೆದ ಸಮಾಜ ಸಂಯಮ , ಸಂವೇದನೆ, ಸೂಕ್ಷ್ಮತೆ ಮತ್ತು ಮಾನವೀಯತೆಯ ನೆಲೆಗಳನ್ನು ರಕ್ಷಿಸಲು ಸಂಕಲ್ಪ ಮಾಡಬೇಕಿದೆ. ಇಲ್ಲಿ ಎದ್ದು ಕಾಣುವ ಕೊರತೆ ಎಂದರೆ ಸೌಹಾರ್ದತೆಯ ಭಾಷೆ. ದೃಶ್ಯ ಮಾಧ್ಯಮಗಳ ಸುದ್ದಿಮನೆಗಳ ನಿರೂಪಕರಲ್ಲೂ ಈ ಕೊರತೆಯನ್ನು ಗುರುತಿಸುವಷ್ಟು ಮಟ್ಟಿಗೆ ಸಮಾಜ ನೈತಿಕವಾಗಿ ಕುಸಿದಿದೆ ಎನ್ನುವುದು ಅಲ್ಲಗಳೆಯಲಾಗದ ವಾಸ್ತವ. ಈ ಸೌಹಾರ್ದತೆಯ ಭಾಷೆ ನಮ್ಮದಾಗಬೇಕು, ಮನುಜ ಸೂಕ್ಷ್ಮತೆ-ಸಂವೇದನೆಯ ಪರಿಭಾಷೆ ನಮ್ಮೊಳಗೆ ಗಟ್ಟಿಯಾಗಬೇಕು. ಆಗ ಮಾನವೀಯತೆ ಅಥವಾ ಮನುಜ ಪ್ರಜ್ಞೆ ಎನ್ನುವುದು ವಿಶಾಲ ಸಮಾಜವನ್ನು ನಿರ್ದೇಶಿಸುವ ನೈತಿಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
ಪೆಹಲ್ಗಾಮ್ ಘಟನೆ ಬಡಿದೆಬ್ಬಿಸಬೇಕಿರುವುದು ಅನ್ಯಮತ ದ್ವೇಷವನ್ನಲ್ಲ. ಬದಲಾಗಿ ಒಂದು ನಾಗರಿಕತೆಯಾಗಿ ನಾವು ಕಳೆದುಕೊಂಡಿರುವ ಮಾನವೀಯ ಪ್ರಜ್ಞೆಯನ್ನು. ಕಾಶ್ಮೀರದ ಜನತೆ ಇದನ್ನು ಅರಿತಿದ್ದಾರೆ. ಇದರ ಒಂದು ಆಯಾಮವನ್ನು ಪೆಹಲ್ಗಾಮ್ ದಾಳಿಯಲ್ಲಿ ರಕ್ಷಕರಾಗಿ ಮುನ್ನುಗ್ಗಿ ಹತರಾದ ಇಬ್ಬರು ಮುಸ್ಲಿಂ ವ್ಯಕ್ತಿಗಳಲ್ಲಿ ಸಾಂಕೇತಿಕವಾಗಿ ಗುರುತಿಸಬಹುದು. ಸಮಸ್ತ ಭಾರತೀಯರೂ ತಮ್ಮ ಜಾತಿ, ಮತ, ಧರ್ಮ ಹಾಗೂ ಸಾಮುದಾಯಿಕ ಅಸ್ಮಿತೆಗಳನ್ನು ದಾಟಿ, ಒಂದು ಸೌಹಾರ್ದದ ಭಾಷೆಯನ್ನು ರಾಷ್ಟ್ರೀಯ ಪರಿಭಾಷೆಯಾಗಿ ಸ್ವೀಕರಿಸಬೇಕಿದೆ. 2047ರ ವಿಕಸಿತ ಭಾರತಕ್ಕೆ ಇದು ಅಡಿಪಾಯವಾಗಬೇಕಿದೆ. ಯುದ್ಧೋನ್ಮಾದದ ಭ್ರಮೆಗೆ ಸಿಲುಕದೆ ವಾಸ್ವವಿಕ ನೆಲೆಯಲ್ಲಿ ಮಾನವೀಯ ಮೌಲ್ಯಗಳ ಮರುಬಿತ್ತನೆ ನಮ್ಮ ಆದ್ಯತೆಯಾಗಬೇಕಿದೆ. ಸರ್ಕಾರ ಅದರ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಒಕ್ಕೊರಲಿನಿಂದ ಸರ್ಕಾರದೊಡನೆ ನಿಲ್ಲೋಣ. ಆದರೆ ಜಾತಿ-ಮತಗಳ ದ್ವೇಷಾಸೂಯೆಗಳ ಭಾವನೆಗಳಿಗೆ ಸಿಲುಕಿ ನಾವು ನಿಂತ ನೆಲ ಕುಸಿಯದಂತೆ ಎಚ್ಚರ ವಹಿಸೋಣ.
ಇದು ನಾಗರಿಕತೆಯ ಜವಾಬ್ದಾರಿ (Civilisational Responsibiity). ನಮ್ಮ ನಡುವಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪ್ರಾದೇಶಿಕ ಭಿನ್ನತೆ ಮತ್ತು ಭಿನ್ನಮತಗಳನ್ನು ಬದಿಗೊತ್ತಿ ಪ್ರಜ್ಞಾವಂತ ಭಾರತೀಯರಾಗುವ ಕಡೆಗೆ ಹೆಜ್ಜೆ ಹಾಕೋಣ. ಪೆಹಲ್ಗಾಮ್ ಘಟನೆ ನಮ್ಮನ್ನು ಎಚ್ಚರಿಸುವ ಘಟನೆ ಮಾತ್ರವೇ ಆಗದೆ, ನಮ್ಮ ಅಂತರ್ ಪ್ರಜ್ಞೆಯನ್ನು ಕಲಕಿ ಸಕಾರಾತ್ಮಕವಾಗಿ ಜಾಗೃತಗೊಳಿಸುವ ಘಟನೆಯೂ ಆಗಬೇಕಿದೆ. ಇದಕ್ಕೆ ಬೇಕಿರುವ ಬೌದ್ಧಿಕ ಬಂಡವಾಳ ಸಮನ್ವಯ-ಸೌಹಾರ್ದತೆಯ ಭಾವನೆ ಮತ್ತು ಸದ್ಭಾವನೆಯ ಮಾನವೀಯ ಭಾಷೆ. ವಿಕಸಿತ ಭಾರತಕ್ಕೆ ಇದು ಅತ್ಯವಶ್ಯ.
ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media