ಹೈದರಾಬಾದ್: ಈಗೇನಿದ್ದರೂ ವಿಶ್ವದೆಲ್ಲೆಡೆ ಯುದ್ಧ ಮಾಡುವ ನೀತಿಯೂ ಸಂಪೂರ್ಣ ಬದಲಾಗುತ್ತಿದೆ. ಸಮಾಜವನ್ನು ವಿಭಜಿಸಿ, ದೇಶಕ್ಕೆ ನಷ್ಟವನ್ನುಂಟು ಮಾಡುವ ಹೊಸ ತಂತ್ರ ಆರಂಭವಾಗಿದೆ ಅಂತರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ 73ನೇ ಬ್ಯಾಚ್ ಐಪಿಎಸ್ ಅಧಿಕಾರಿಗಳ ಸಮಾರಂಭದಲ್ಲಿ ಮಾತನಾಡಿದ ಅವರು ರಾಜಕೀಯ ಹಾಗೂ ಮಿಲಿಟರಿಯ ಗುರಿಗಳನ್ನು ಈಡೇರಿಸಿಕೊಳ್ಳಲು ಇನ್ನು ಮುಂದೆ ಯುದ್ಧದಿಂದ ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ದೇಶಗಳ ಮಧ್ಯೆ ನಡೆಯುವ ಯುದ್ಧಗಳು ತುಂಬಾ ದುಬಾರಿ ಮತ್ತು ಕೈಗೆಟುಕಲಾಗದವು. ಅದೇ ಸಮಯದಲ್ಲಿ, ಫಲಿತಾಂಶದ ಬಗ್ಗೆ ಅನಿಶ್ಚಿತತೆ ಇದೆ ಎಂದು ಹೇಳಿದರು.
ಇದನ್ನು ಓದಿ: “ಜನತೆಯನ್ನು ಉಳಿಸಿ-ದೇಶವನ್ನು ಉಳಿಸಿ” – ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ
‘ಭಾರತದ ಸಾರ್ವಭೌಮತ್ವವು ಕರಾವಳಿ ಪ್ರದೇಶಗಳಿಂದ ಗಡಿ ಪ್ರದೇಶದಲ್ಲಿನ ಕೊನೆಯ ಪೊಲೀಸ್ ಠಾಣೆ ಸರಹದ್ದಿನವರೆಗೂ ವ್ಯಾಪಿಸಿದೆ. ಭಾರತದ 32 ಲಕ್ಷ ಚ.ಕಿ.ಮೀ ಪ್ರದೇಶದಲ್ಲಿದೆ. ಅಲ್ಲದೆ, ಚೀನಾ, ಮಯನ್ಮಾರ್, ಬಾಂಗ್ಲಾದೇಶದ ಜೊತೆಗೆ 15 ಸಾವಿರ ಕಿಲೋ ಮೀಟರ್ ನಷ್ಟು ಗಡಿ ರೇಖೆ ಹೊಂದಿದೆ. ದೇಶದ ಗಡಿಯಲ್ಲಿ ಅನೇಕಾನೇಕ ಸಮಸ್ಯೆಗಳಿವೆ. ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆ ಪೊಲೀಸ್ ಪಡೆಗಳ ಹೊಣೆಗಾರಿಕೆ. ನಿಮಗೆ ನೀಡಿದ ತರಬೇತಿಯ ಉದ್ದೇಶ ಪೊಲೀಸ್ ಕೆಲಸವಷ್ಟೇ ಅಲ್ಲ, ಅದನ್ನೂ ಮೀರಿದ್ದಾಗಿದೆ’ ಎಂದು ಹೇಳಿದರು.
ಬದಲಾದ ವೇಳೆಯಲ್ಲಿ ಯುದ್ಧದ ತಂತ್ರಗಳು ಸಂಪೂರ್ಣ ವಿಭಿನ್ನವಾಗಿವೆ. ಸಮಾಜವನ್ನು ಒಡೆಯುವ ಮೂಲಕ ದೇಶಕ್ಕೆ ನಷ್ಟ ಉಂಟು ಮಾಡಲಾಗುತ್ತದೆ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕ ಅತ್ಯಂತ ಪ್ರಾಮುಖ್ಯತೆ ಪಡೆದುಕೊಳ್ಳುತ್ತಾನೆ. ಹೀಗಾಗಿ, ನಾಲ್ಕನೇ ತಲೆಮಾರಿನ ಯುದ್ಧ ತಂತ್ರವನ್ನು ಈಗ ಅಳವಡಿಸಿಕೊಳ್ಳಲಾಗಿದೆ. ಈ ತಂತ್ರದ ಮುಖ್ಯ ಗುರಿ ಸಮಾಜ ಒಡೆಯುವುದಾಗಿದೆ ಅಂತ ಹೇಳಿದರು.
ಇದನ್ನು ಓದಿ: ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ
ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆ ತರಲು ನಾಗರಿಕ ಸಮಾಜವೇ ಯುದ್ಧದ ಹೊಸ ಗಡಿರೇಖೆಯಾಗಿದೆ. ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಜನಸೇವೆಯೇ ಶ್ರೇಷ್ಠ ಸೇವೆ ಎಂಬುದನ್ನು ಯುವ ಅಧಿಕಾರಿಗಳು ತಿಳಿದುಕೊಳ್ಳಬೇಕು. ಹಿಂದಿನ ತಪ್ಪುಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಸುಧಾರಣೆಗಳ ಬಗ್ಗೆ ಯೋಚಿಸುವುದು ಮಾತ್ರವಲ್ಲದೆ ಭವಿಷ್ಯದ ಸವಾಲುಗಳನ್ನು ನೋಡಲು ಮತ್ತು ಮುಂಚಿತವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪರಿವರ್ತಿತರಾಗಬೇಕು.
ಪ್ರಜಾಪ್ರಭುತ್ವದ ಯಶಸ್ಸು ಕಾನೂನುಗಳ ಜಾರಿಯಲ್ಲಿದೆ. ಕಾನೂನು ಜಾರಿ ಮಾಡುವವರು ದುರ್ಬಲರು, ಭ್ರಷ್ಟರು ಮತ್ತು ಪಕ್ಷಪಾತಿಗಳಾಗಿರುವಲ್ಲಿ ಜನರು ಸುರಕ್ಷಿತ ಮತ್ತು ಭದ್ರತೆಯನ್ನು ಅನುಭವಿಸಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ 21 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದು, ಇದೂವರೆಗೆ 35,480 ಮಂದಿ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ಹುತಾತ್ಮರಾದ 40 ಐಪಿಎಸ್ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ ಎಂದೂ ಅವರು ಹೇಳಿದರು.