ನವದೆಹಲಿ: ತ್ವರಿತ ವಿತರಣಾ ವೇದಿಕೆಯಿಂದ 10 ನಿಮಿಷಗಳ ವಿತರಣಾ ಗಡುವನ್ನು ಕೈಬಿಡುವಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಧ್ಯಸ್ಥಿಕೆಯನ್ನು ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರ (ಸಿಐಟಿಯು) ಸ್ವಾಗತಿಸಿದೆ. ಲಕ್ಷಾಂತರ ಅಪ್ಲಿಕೇಶನ್ ಮತ್ತು ಪ್ಲಾಟ್‌ಫಾರ್ಮ್ ಆಧಾರಿತ ಕಾರ್ಮಿಕರ ಉಳಿವಿಗಾಗಿ ನಿರಂತರ ಹೋರಾಟ ಮತ್ತು ಆಧುನಿಕ ಸೇವಾ ವ್ಯವಸ್ಥೆಯ ಕೆಲಸಗಾರರಾಗಿ ತಮ್ಮ ಹಕ್ಕುಗಳನ್ನು ಏಕಕಾಲದಲ್ಲಿ ಸ್ಥಾಪಿಸುವುದಕ್ಕಾಗಿ ಅವರ ಹೋರಾಟಕ್ಕಾಗಿ ಅಭಿನಂದನೆಗಳು. ವಿತರಣೆ
ಕಾರ್ಮಿಕರು ಇನ್ನೂ ಅಪಾಯಕಾರಿ ಕೆಲಸದ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದು, ಇದು ಇಂದಿನ ಹಂತದ ಬಂಡವಾಳಶಾಹಿಯ ಕ್ರೂರ ಮುಖವೆಂದು ಸಿಐಟಿಯು ಅಭಿಪ್ರಾಯಪಟ್ಟಿದೆ. ಗ್ರಾಹಕರನ್ನು ಸಂತೋಷಪಡಿಸುವ ಹೆಸರಿನಲ್ಲಿ ಮತ್ತು ಭಾರೀ ಲಾಭ ಗಳಿಸುವ ಉದ್ದೇಶದಿಂದ 10 ನಿಮಿಷಗಳ ವಿತರಣೆಯ ಭರವಸೆ ನೀಡುವ ಕಂಪನಿಗಳು ಕಾರ್ಮಿಕರನ್ನು ಅಪಘಾತಗಳು ಮತ್ತು ಸಾವುಗಳವರೆಗೆ ತಳ್ಳುತ್ತಿವೆ ಎಂದು ಆರೋಪಿಸಿದೆ.
ಗ್ರಾಹಕರ ರೇಟಿಂಗ್‌ಗಳ ಮೇಲೆ ಕಾರ್ಮಿಕರ ಜೀವನಾಧಾರವನ್ನು ಅವಲಂಬಿತಗೊಳಿಸುವ ಮೂಲಕ ಕಾರ್ಮಿಕರು ಮತ್ತು ಗ್ರಾಹಕರ ನಡುವೆ ಸಾಮಾಜಿಕ ಅಂತರವನ್ನು ಸೃಷ್ಟಿಸಲಾಗುತ್ತಿದೆ ಎಂದು ಸಿಐಟಿಯು ಟೀಕಿಸಿದೆ.
ಇದನ್ನೂ ಓದಿ: ಬೆಂಗಳೂರು | ತಕ್ಷಣ ಪುನರ್ವಸತಿ ಕಲ್ಪಿಸಿ : ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ – ಬಿ.ಟಿ. ಲಲಿತಾ ನಾಯಕ್
ತ್ವರಿತ ವಿತರಣೆಯ ಈ ಮಾದರಿ ಸ್ಥಳೀಯ ಮಾರುಕಟ್ಟೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಆಡಳಿತಾರೂಢ ಪಕ್ಷಗಳಿಗೆ ಸೇರಿದವರನ್ನೂ ಒಳಗೊಂಡಂತೆ ವ್ಯಾಪಾರಿ ಸಂಘಟನೆಗಳು ಮತ್ತು ಅವರ ರಾಜಕೀಯ ಪ್ರತಿನಿಧಿಗಳು ಈ ಮಾದರಿಯು ಸ್ಥಳೀಯ ವ್ಯಾಪಾರಿಗಳಿಗೆ ಹಾನಿ ಉಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ 10 ನಿಮಿಷಗಳ ವಿತರಣಾ ಗಡುವು ಕೈಬಿಟ್ಟಿರುವುದರಿಂದ ಗಿಗ್ ಕಾರ್ಮಿಕರ ಸುರಕ್ಷತೆ, ಭದ್ರತೆ ಹಾಗೂ ಉತ್ತಮ ಕೆಲಸದ ಪರಿಸ್ಥಿತಿಗಳು ಖಚಿತವಾಗುತ್ತವೆಯೇ ಎಂಬುದರ ಬಗ್ಗೆ ಸಿಐಟಿಯು ಆತಂಕ ವ್ಯಕ್ತಪಡಿಸಿದೆ.
ಪ್ರತಿ ವಿತರಣೆಗೆ ದೊರೆಯುವ ದರವನ್ನು ಗಣನೀಯವಾಗಿ ಕಡಿತಗೊಳಿಸಿರುವುದರಿಂದ ಕಾರ್ಮಿಕರ ಆದಾಯ ಕುಸಿದಿದ್ದು, ಸಮಂಜಸವಾದ ಸಂಬಳ ಗಳಿಸಲು ಹೆಚ್ಚು ವಿತರಣೆ ನಡೆಸಲು ಮತ್ತು ದೂರದವರೆಗೆ ಸಂಚರಿಸಲು ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಶೋಷಣೆಯ ಪರಿಣಾಮವಾಗಿ ಹಲವೆಡೆ ಕಾರ್ಮಿಕರಿಂದ ಸಹಜವಾಗಿ ಮುಷ್ಕರಗಳು ನಡೆದಿವೆ.
ಕಂಪನಿಗಳು ಬಳಸುತ್ತಿರುವ ಅಲ್ಗಾರಿದಮ್‌ಗಳೇ ಆರ್ಡರ್‌ಗಳ ಸಂಖ್ಯೆ, ಪ್ರೋತ್ಸಾಹ ಧನ ಮತ್ತು ಒಟ್ಟಾರೆ ಆದಾಯವನ್ನು ನಿಯಂತ್ರಿಸುತ್ತಿದ್ದು, ಇದು ಕಾರ್ಮಿಕರಿಗೆ ದೊಡ್ಡ ಚಿಂತೆಯ ವಿಷಯವಾಗಿದೆ ಎಂದು ಸಿಐಟಿಯು ಹೇಳಿದೆ. 10 ನಿಮಿಷಗಳಿಂದ 15 ನಿಮಿಷಗಳಿಗೆ ವಿತರಣಾ ಗಡುವು ಬದಲಾಗಿದ್ದರೂ ಶೋಷಣೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಬಹುಪ್ರಚಾರಿತ ಕಾರ್ಮಿಕ ಸಂಹಿತೆಗಳು ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಮಾನ್ಯತೆ ನೀಡುವುದಿಲ್ಲ. ವೇತನ, ಕೆಲಸದ ಅವಧಿ ಹಾಗೂ ಗಿಗ್ ಕ್ಷೇತ್ರದ ಕೈಗಾರಿಕಾ ಸಂಬಂಧಗಳಂತಹ ಪ್ರಮುಖ ಪ್ರಶ್ನೆಗಳನ್ನು ಈ ಸಂಹಿತೆಗಳು ಸ್ಪರ್ಶಿಸುವುದಿಲ್ಲ ಎಂದು ಸಿಐಟಿಯು ಟೀಕಿಸಿದೆ.
ಉದ್ಯೋಗ ಮಾರುಕಟ್ಟೆಯ ಕುಸಿತದ ಹಿನ್ನೆಲೆ ಗಿಗ್ ಕ್ಷೇತ್ರದಲ್ಲಿ ಸುಮಾರು 2 ಕೋಟಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದರಿಂದ, ಅವರ ಕೆಲಸದ ಪರಿಸ್ಥಿತಿಗಳು, ಸುರಕ್ಷತೆ, ಕಂಪನಿಗಳ ಅಲ್ಗಾರಿದಮ್‌ಗಳಿಗೆ ಸಂಬಂಧಿಸಿದ ಚಿಂತೆಗಳು, ಕೆಲಸದ ಅವಧಿ ಹಾಗೂ ಐಡಿ ತಡೆಹಿಡಿಯುವಂತಹ ವಿಷಯಗಳನ್ನು ಪರಿಹರಿಸಲು ಸಮಗ್ರ ನೀತಿ ಅಗತ್ಯವಿದೆ ಎಂದು ಸಿಐಟಿಯು ಒತ್ತಾಯಿಸಿದೆ. ಗಿಗ್ ಕಾರ್ಮಿಕರನ್ನು ಕಾರ್ಮಿಕರೆಂದು ಮಾನ್ಯತೆ ನೀಡುವಂತೆ ಪ್ರಸ್ತುತ ಕಾನೂನುಗಳಲ್ಲಿ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಗಿಗ್ ಕಾರ್ಮಿಕರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರವನ್ನು ಪರಿಣಾಮಕಾರಿ ಕ್ರಮಗಳಿಗೆ ಒತ್ತಾಯಿಸುವ ಉದ್ದೇಶದಿಂದ ಸಂಘಟಿತ, ಸಂಯೋಜಿತ ಹಾಗೂ ದೀರ್ಘಕಾಲೀನ ಹೋರಾಟಕ್ಕೆ ಸಿಐಟಿಯು ಕರೆ ನೀಡಿದೆ.
ಇದನ್ನೂ ನೋಡಿ: ವಲಸೆ ಕಾರ್ಮಿಕರ ಮನೆಗೆ ನುಗ್ಗಿ ಆಧಾರ್ ಪರಿಶೀಲಿಸಲು ಪುನೀತ್ ಕೆರೆಹಳ್ಳಿ ಯಾರು? Janashakthi Media
