ಮಂಗಳೂರು : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳು (JCTU) ಹಾಗೂ ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (SKM)ಗಳ ಜಂಟಿ ನೇತೃತ್ವದಲ್ಲಿ ಮಧ್ಯಮ ವರ್ಗದ ನೌಕರರ ಸಂಘಟನೆಗಳ ಸಹಕಾರದೊಂದಿಗೆ ಜುಲೈ 9ರಂದು ಅಖಿಲ ಭಾರತ ಮಹಾಮುಷ್ಕರವು ನಡೆಯಲಿದೆ ಎಂದು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ಇದರಿಂದಾಗಿ ಇನ್ನು ಮುಂದೆ ಭಾರತದ 70% ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಸಂಘ ಕಟ್ಟುವ ಹಕ್ಕು, ಬೇಡಿಕೆಯ ಹಕ್ಕು, ಒಪ್ಪಂದ ಏರ್ಪಡಿಸುವ ಹಕ್ಕು ಹಾಗೂ ಕಾರ್ಮಿಕರ ಸಾಮೂಹಿಕ ಚೌಕಾಸಿಯ ಬೆನ್ನೆಲುಬಾಗಿದ್ದ ಮುಷ್ಕರದ ಹಕ್ಕನ್ನು ಕೂಡಾ ನಿರಾಕರಿಸಲಾಗಿದೆ. ಕೆಲಸದ ಅವಧಿಯನ್ನು 8 ಗಂಟೆಯಿAದ 12 ಗಂಟೆಗೆ ಹೆಚ್ಚಿಸಲು ಹಾಗೂ ಓವರ್ ಟೈಮ್‌ನ್ನು 3 ತಿಂಗಳಿಗೆ 50 ಗಂಟೆ ಇದ್ದುದ್ದು ಈಗ 125 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ. ಸಾಮೂಹಿಕ ಭದ್ರತೆಯ ಭಾಗವಾಗಿ ನಿವೃತ್ತಿಯಾದ ಕಾರ್ಮಿಕರಿಗೆ ಕನಿಷ್ಠ 9000 ರೂ ನಿವೃತ್ತಿ ವೇತನ ನೀಡುವ ಬದಲಿಗೆ ಇಎಸ್‌ಐ ಮತ್ತು ಪಿಎಫ್ ಆಯ್ಕೆಯ ಸ್ವಾತಂತ್ರ್ಯವನ್ನು ಮಾಲೀಕರಿಗೆ ನೀಡಲಾಗಿದೆ. ಒಡಂಬಡಿಕೆಗಳಿಗೂ ತಿಲಾಂಜಲಿ ನೀಡಿ ILO ನಿಯಮವನ್ನು ಕಡೆಗಣಿಸುವ ಮುಖಾಂತರ ಮೋದಿ ಸರ್ಕಾರ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ವಿವಿಧ ಕ್ಷೇತ್ರಗಳಲ್ಲಿನ ಕಾರ್ಪೊರೇಟ್ ಬಂಡವಾಳಗಾರರ ಮಿಗುತಾಯ ಮೌಲ್ಯವನ್ನು ಹೆಚ್ಚಿಸಲು ಕಾರ್ಮಿಕರ ಬೆನ್ನಮೂಳೆಯನ್ನು 4 ಸಂಹಿತೆಗಳ ಮುಖಾಂತರ ಮುರಿಯಲಾಗುತ್ತಿದೆ. ಮತ್ತೊಂದೆಡೆ ತೆರಿಗೆಗಳ ಭಾರ ಮತ್ತು ಬೆಲೆಯೇರಿಕೆಯಿಂದ ಭಾರತದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದೆ. ದೇಶದ ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರನ್ನು ರಕ್ಷಿಸುವ ಮುಖಾಂತರ, ದೇಶದ ಸಂಪತ್ತಿನ ಲೂಟಿಯನ್ನು ತಡೆಯಲು ಮತ್ತು ಕೆಳಕಂಡ ಬೇಡಿಕೆಗಳಿಗಾಗಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚ್ ಕರೆಯ ಮೇರೆಗೆ ಜುಲೈ 9 ರಂದು ಕಾರ್ಮಿಕ ವರ್ಗ ನಡೆಸಲಿರುವ ಅಖಿಲ ಭಾರತ ಮುಷ್ಕರವನ್ನು ದ.ಕ. ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ವಿವಿಧ ವಿಭಾಗಗಳ ಕಾರ್ಮಿಕರು, ಜನಸಾಮಾನ್ಯರು ಹಾಗೂ ಸಾರ್ವಜನಿಕರು ಈ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಕಾರ್ಮಿಕ ಮುಖಂಡರಾದ ಸೀತಾರಾಮ ಬೆರಿಂಜ ಕೆ, ಫಣೀಂದ್ರ ಕೆ, ಪ್ರಾಂತರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ರೈತ ನಾಯಕ, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ , ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಹಾಜರಿದ್ದರು.
