ಚಿತ್ರದುರ್ಗ: ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿಯವರನ್ನು ಪ್ರತಿಷ್ಠಿತ ರೈತ ನಾಯಕ ನುಲೇನೂರು ಶಂಕರಪ್ಪ ಹಸಿರು ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರರು ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಮುಖಂಡರು ತಿಳಿಸಿದ್ದಾರೆ. ಪುರಸ್ಕಾರ
“ಕಳೆದ ವರ್ಷ ಅಗಲಿದ ಚಿತ್ರದುರ್ಗ ಜಿಲ್ಲೆಯವರಾದ ಹಿರಿಯ ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪ ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲಾಗಿದ್ದು ಸಾಮಾಜಿಕ, ರೈತ, ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರಿಗೆ ರಾಜ್ಯಮಟ್ಟದಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. ಪ್ರಥಮ ವರ್ಷದಲ್ಲಿ ಮಹಿಳಾ ಹೋರಾಟಗಾರ್ತಿಗೆ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ” ಎಂದು ಪ್ರತಿಷ್ಠಾನದ ಪರವಾಗಿ ಡಾ.ರವಿಶಂಕರ್ ನುಲೇನೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪುರಸ್ಕಾರ
ಇದನ್ನೂ ಓದಿ: ಬೆಳಗಾವಿ | ದಿನದ 24 ಗಂಟೆಯೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಇರಬೇಕು ! – ಸಚಿವ ಗುಂಡೂರಾವ್
ಎಸ್ ವರಲಕ್ಷ್ಮಿ ಅವರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ವೀರಕಪುತ್ರ ಗ್ರಾಮದವರು. ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಮಡಿಕೆ ತಯಾರಿಕೆ ಅವರ ಕುಟುಂಬದ ಕುಲಕಸುಬು. ಒಂದು ಹೊತ್ತಿನ ಊಟಕ್ಕೂ ಇಡೀ ಕುಟುಂಬ ದುಡಿಯಬೇಕಾಗಿದ್ದ ಸ್ಥಿತಿಯ ಕಾರಣ ಪದವಿ ವಿದ್ಯಾಭ್ಯಾಸ ಗಗನಕುಸುಮವಾಗಿತ್ತು. ಚೆನ್ನಾಗಿ ಓದಿ ಅಪ್ಪ-ಅಮ್ಮನ ಕಷ್ಟ ನಿವಾರಿಸಬೇಕೆಂದುಕೊಂಡಿದ್ದ ವರಲಕ್ಷ್ಮಿ ಅವರ ಕನಸು ನನಸಾಗಲಿಲ್ಲ. ಆದರೆ, ಬಡತನವನ್ನು ಮೀರಬೇಕೆಂಬ ಮಹತ್ವಾಕಾಂಕ್ಷೆ, ಛಲ ಅವರನ್ನು ದಿಟ್ಟ ಹೋರಾಟಗಾರ್ತಿಯಾಗಿ ರೂಪಿಸಿತು.

ಬರಗಾಲದ ಕಾರಣ ವರಲಕ್ಷ್ಮಿ ಅವರ ಕುಟುಂಬವು ತಾಯಿಯವರ ತವರುಮನೆ ಬೆಂಗಳೂರಿನ ಕುಂಬಳುಗೋಡಿಗೆ ಬಂದು ನೆಲೆಸಿತು. ಹಣದ ತೊಂದರೆ ಇದ್ದ ಕಾರಣ ವರಲಕ್ಷ್ಮಿ ಅವರು ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿಂದ ಯೂನಿಯನ್ ಸಂಪರ್ಕಕ್ಕೆ ಬಂದರು. ನಾನಾ ಹೋರಾಟಗಳಲ್ಲಿ ಭಾಗಿಯಾದ ಅವರು ಜೈಲುವಾಸವನ್ನೂ ಅನುಭವಿಸಿದರು. ಕೆಲಸ ಬಿಟ್ಟು ಪೂರ್ಣಾವಧಿಗೆ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಅಂಗನವಾಡಿ ಕಾರ್ಯಕರ್ತೆಯರನ್ನು ಸಂಘಟಿಸುವ ಜವಾಬ್ದಾರಿ ಹೊತ್ತರು. 40 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಗೌರವಧನ ಹೆಚ್ಚಳಕ್ಕೆ ಹೋರಾಡಿ ಯಶಸ್ಸು ಕಂಡಿದ್ದು ಮರೆಯಲಾಗದ ಸಾಧನೆ.
ಇದನ್ನೂ ನೋಡಿ: ಧರ್ಮಸ್ಥಳ, ಮರಘಾ ಪ್ರಕರಣ | ಮಹಿಳೆಯರ ವಿರುದ್ಧ ಷಡ್ಯಂತ್ರಗಳು…! ಅಲ್ಲಿ ಇಲ್ಲಿ ಎಲ್ಲೆಲ್ಲೂ Janashakthi Media
