ಬೆಂಗಳೂರು : ಶ್ರಮಿಕ ವರ್ಗಕ್ಕೆ ಬಜೆಟ್‌ನಲ್ಲಿ ಅನ್ಯಾಯ ಮಾಡಿಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್ ಸಾಂಕ್ರಾಮಿಕದ ಅಸಮರ್ಥ ನಿರ್ವಹಣೆ, ಹಿಂದಿನ ಸರ್ಕಾರದ ಕಾರ್ಮಿಕ ವಿರೋಧಿ ನಿಲುವುಗಳು ಕಾರ್ಮಿಕರ ಬದುಕನ್ನು ದುಸ್ತರಗೊಳಿಸಿತ್ತು. ದುಡಿಮೆಯ ಬೆವರಿಗೆ ಗೌರವ ಕೊಡುವ ಸರ್ಕಾರ ನಮ್ಮದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಿಸಿ, ಅವರ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗೆ ಒತ್ತು ನೀಡಲಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು 2023 ನೇ ಬಜೆಟ್ ಭಾಷಣದಲ್ಲಿ ಉಲ್ಲೇಖಿರುವುದರ ಮೂಲಕ ಕಳೆದ ಮೂರು ದಶಕಗಳಿಂದ ಸ್ವತಃ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ ಉದಾರವಾದಿ ಆರ್ಥಿಕ ನೀತಿಗಳು ಜನತೆಯ ಬದುಕನ್ನು ದುಸ್ತರಗೊಳಿಸಿದೆ ಎನ್ನುವ ಸತ್ಯವನ್ನು ಈ ಬಜೆಟ್ ಮೂಲಕ ಒಪ್ಪಿಕೊಂಡಿದ್ದರೂ ಕರ್ನಾಟಕದ ಕಾರ್ಮಿಕ ವರ್ಗದ ದೃಷ್ಟಿಯಿಂದ ಇದು ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ. ಹಾಗೂ ಯಾವ ವಲಯಗಳಿಗೆ ಅನ್ಯಾಯವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಕೆಲಸದ ಅವಧಿ ಹೆಚ್ಚಳ ರದ್ದು ಮಾಡಬೇಕಿತ್ತು : ಹಿಂದಿನ ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದು ಮಾಡುವುದಾಗಿ ಘೋಷಿಸಿ ಮತ್ತೊಂದು ಕಡೆ ಅದೇ
ಬಿಜೆಪಿ ಸರ್ಕಾರ ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸಿತ್ತು ಮತ್ತು ರಾತ್ರಿಪಾಳೆಯದ ದುಡಿಮೆಯನ್ನು ಮಹಿಳೆಯರಿಗೆ ಕಡ್ಡಾಯಗೊಳಿಸಿದ್ದನ್ನು ರದ್ದು ಮಾಡಲು ಹಿಂದೇಟು ಹಾಕಿದೆ ಕನಿಷ್ಠ ವೇತನ ಪತಿಷ್ಕರಣೆ ವಿಷಯದಲ್ಲೂ ಸರ್ಕಾರ ಯಾವುದೇ ಬದ್ದತೆಯನ್ನು ಪ್ರದರ್ಶನ ಮಾಡದೇ ಮಾಲೀಕರ ಒತ್ತಡಕ್ಕೆ ಮಣಿದಿದೆ
ಅಸಂಘಟಿತ ಕಾರ್ಮಿಕರ ಕಲ್ಯಾಣ ನಿರ್ಲಕ್ಷ್ಯ : ರಾಜ್ಯದಲ್ಲಿ ಕೋಟ್ಯಾಂತರ ಕಾರ್ಮಿಕರು ಮನೆಗೆಲಸ, ಹಮಾಲಿ, ಅಟೋ, ಟೈಲರ್ಸ್, ಬೀಡಿ ಉದ್ಯಮ,
ಬೀದಿಬದಿ, ಸಣ್ಣ ವ್ಯಾಪಾರಿಗಳು, ಮ್ಯಾಕನಿಕ್ ಗಳು, ವಿಮಾ ಪ್ರತಿನಿಧಿಗಳು ಯಾವೊಂದು ಸಾಮಾಜಿಕ ಭದ್ರತೆ ಇಲ್ಲದೆ ದುಡಿಯುತ್ತಿದ್ದಾರೆ ಹತ್ತಾರು ವರ್ಷಗಳಿಂದ ಅವರು ಪಿಂಚಣಿ, ಭವಿಷ್ಯನಿಧಿ, ಆರೋಗ್ಯ ಮೊದಲಾದ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದಾರೆ. ಇವರುಗಳ ಕಲ್ಯಾಣಕ್ಕಾಗಿ ಬಜೆಟ್ ನಲ್ಲಿ ಹಣ ಮೀಸಲಿರಿಸದಿರುವುದು ಸರಿಯಲ್ಲ ಈ ಬಜೆಟ್ ನಲ್ಲಿ ಭವಿಷ್ಯನಿಧಿ ಯೋಜನೆ ಸೇರಿ ಇತರೆ ಕಾರ್ಯಕ್ರಮಗಳನ್ನು ಘೋಷಿಸಬೇಕು ಕಾರ್ಮಿಕ ಸಂಘಗಳು ಕೋರಿದ್ದವು. ಆದರೆ ಅಸಂಘಟಿತ ಕಾರ್ಮಿಕರಿಗೆ ಬಜೆಟ್ ನಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ
ಸ್ಕೀಂ ನೌಕರರ ವೇತನ ಗ್ಯಾರಂಟಿ ಇಲ್ಲ : ಕಾಂಗ್ರೆಸ್ ಚುನಾವಣೆಗೂ ಮುನ್ನ ಅಂಗನವಾಡಿ, ಬಿಸಿಯೂಟ ನೌಕರರಿಗೆ ಕೊಟ್ಟ ವೇತನ ಭರವಸೆಯನ್ನು ಈಡೇರಿಸಿಲ್ಲ. 4000 ಶಿಶುಪಾಲನಾ ಕೇಂದ್ರಗಳನ್ನು ಪಂಚಾಯತ್ ರಾಜ್ ಇಲಾಖೆಯಿಂದ ಸ್ಥಾಪಿಸುವ ನಿರ್ಧಾರ ಐಸಿಡಿಎಸ್ ಯೋಜನೆಗೆ ದೊಡ್ಡ ಪೆಟ್ಟು ಕೊಡಲಿದೆ. ಅಂಗನವಾಡಿ ನೌಕರರಿಗೆ ಮೊಬೈಲ್ ಕೊಡಬಹುದು ಎಂಬ ನಿರೀಕ್ಷೆಯೂ ಸುಳ್ಳಾಗಿದೆ.
ಕಟ್ಟಡ ಕಲ್ಯಾಣ ನಿಧಿ ದುರುಪಯೋಗಕ್ಕೆ ಅವಕಾಶ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಹಿಂದಿನ ಸರ್ಕಾರದಂತೆ ಸಂಚಾರಿ ಕ್ಲಿನಿಕ್ ಆರಂಭ ಹಾಗೂ ಬಸ್ ಪಾಸ್ ವಿತರಣೆ ಮುಂದುವರೆಸಿರುವುದು ಕಲ್ಯಾಣ ಮಂಡಳಿ ನಿಧಿಯ ದುರುಪಯೋಗಕ್ಕೆ ಮತ್ತಷ್ಟು ಎಡೆಮಾಡಿಕೊಡಲಿದೆ ಹಿಂದಿನ ಬಿಜೆಪಿ ಸರ್ಕಾರ ಮಂಡಳಿ ನಿಧಿಯನ್ನು ಖರೀದಿಗಳ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿರುವುದನ್ನು ಮಾನ್ಯ ಮುಖ್ಯಮಂತ್ರಿ ಗಳು ಕಾರ್ಮಿಕ ಸಚಿವರು ಗಮನಿಸದೇ ಹಳೆಯ ಯೋಜನೆಗಳನ್ನೇ ಪ್ರಕಟಿಸಿರುವುದು ಸರಿಯಲ್ಲ
ಗುತ್ತಿಗೆ ಹೊರಗುತ್ತಿಗೆ ನಿಯಂತ್ರಣ ಬೇಕಿತ್ತು: ಅದೇ ರೀತಿ ರಾಜ್ಯದ ಖಾಸಗಿ ಹಾಗೂ ಸರ್ಕಾರದ ಇಲಾಖೆಗಳಲ್ಲಿ ಲಕ್ಷಾಂತರ ಜನರು ಗುತ್ತಿಗೆ ಹೊರಗುತ್ತಿಗೆ ನಿಗದಿತ ಅವಧಿಯಲ್ಲಿ ದುಡಿಯುತ್ತಿದ್ದಾರೆ ಇವರುಗಳ ವೇತನಕ್ಕೆ ಸರ್ಕಾರ ಮತ್ತು ಮಾಲೀಕರು ನೂರಾರು ಕೋಟಿ ಹಣವನ್ನು ಗುತ್ತಿಗೆ ಏಜೆನ್ಸಿಗಳಿಗೆ ನೀಡುತ್ತಿವೆ. ಆದರೆ ಗುತ್ತಿಗೆದಾರರು ಕಾರ್ಮಿಕರಿಗೆ ಸರಿಯಾದ ಕಾನೂನು ಬದ್ದವೇತನ ಸೇರಿ ಇತರೆ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿದ್ಧಾರೆ ಹೀಗಾಗಿ ಈ ಗುತ್ತಿಗೆ ಹೊರಗುತ್ತಿಗೆ ನಿಯಂತ್ರಿಸಬೇಕು ಹಾಗೂ ಕಾರ್ಮಿಕರಿಗೆ ನೇರಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಆಗ್ರಹವಾಗಿತ್ತು ಆದರೆ ಈ ಬಗ್ಗೆ ಯೂ ರಾಜ್ಯ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪಗಳು ಇಲ್ಲವಾಗಿವೆ
ಸ್ವಾಗತಾರ್ಹ ಕ್ರಮಗಳು: ಗಿಗ್ ಆರ್ಥಿಕ ವಲಯಗಳಲ್ಲಿ ದುಡಿಯುತ್ತಿರುವ ʻGig workersʼ, ಅಂದರೆ ಸ್ವಿಗ್ಗಿ, ಜೊಮಾಟೋ, ಮೊದಲಾದ ಕಾರ್ಮಿಕರಿಗೆ ಎರಡು ಲಕ್ಷ ರೂ.ಗಳ ಜೀವವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಿ ಇದರ ಸಂಪೂರ್ಣ ವಿಮಾ ಕಂತನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು ಎಂದು ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ. ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಶವಸಂಸ್ಕಾರ ಧನ ಸಹಾಯ ಹೆಚ್ಚಳ ಹಾಗೂ ಹಳದಿ ಬೋರ್ಡ್ ಹೊಂದಿರುವ ವಾಣಿಜ್ಯ ಚಾಲಕರಿಗೆ ಕೆಲವು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹವಾಗಿದೆ.
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಕೆಲ ಸ್ವಾಗತಾರ್ಹ ಅಂಶಗಳಿದ್ದಾಗ್ಯೂ ಒಟ್ಟಾರೆ ಕಾರ್ಮಿಕ ವರ್ಗಕ್ಕೆ ಸಮಗ್ರವಾಗಿ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎನ್ನದೆ ಬೇರೆ ದಾರಿ ಇಲ್ಲ. ಮೇಲ್ಕಂಡ ಅಂಶಗಳ ಕುರಿತು ಕಾರ್ಮಿಕರ ಸಚಿವರ ಉಪಸ್ಥಿತಿಯಲ್ಲಿ ಕಾರ್ಮಿಕ ಸಂಘಟನೆಗಳು ಹಲವು ಹಕ್ಕೋತ್ತಾಯಗಳನ್ನು ಮಂಡಿಸಿದ್ದರೂ ಅದಕ್ಕೆ ಯಾವುದೇ ಆಧ್ಯತೆ ಸಿಗದಿರುವುದು ವಿಷಾಧನೀಯ ಎಂಬುದು ಸಿಐಟಿಯುವಿನ ಸ್ಪಷ್ಟ ಅಭಿಪ್ರಾಯವಾಗಿದೆ ಮೀನಾಕ್ಷಿಸುಂದರಂ ತಿಳಿಸಿದ್ದಾರೆ.