ರಾಯಚೂರು: ಸಿಐಟಿಯು ಅಖಿಲ ಭಾರತ ಸಮ್ಮೇಳನ ಬೆಂಗಳೂರಿನಲ್ಲಿ ಜನವರಿ 18ರಿಂದ 23ರವರೆಗೆ ನಡೆಯಲಿದ್ದು, ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ರಾಜ್ಯಾದ್ಯಂತ ಭಾರೀ ಪ್ರಚಾರ ಮತ್ತು ಜನಸಾಮಾನ್ಯರ ನಡುವೆ ಸಂಘಟನಾ ಚಳುವಳಿಯ ಮಹತ್ವವನ್ನು ಸಾರುವ ಕೆಲಸ ಭರದಿಂದ ಸಾಗಿದೆ.
ಕಾರ್ಮಿಕ ಸಂಘಟನೆಯ ಅಖಿಲ ಭಾರತ ಸಮ್ಮೇಳನ ಭಾಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಪ್ರಚಾರದೊಂದಿಗೆ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ರಾಯಚೂರು ನಗರದ ಹರಿಜನ ವಾಡದಲ್ಲಿ ಮನೆಮನೆಗೆ ಭೇಟಿ ನೀಡಿ ನಿಧಿ ಸಂಗ್ರಹ ಅಭಿಯಾನದ ನಡೆಸುವ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳು ಸಹ ಸಾಥ್ ನೀಡಿದ್ದಾರೆ.
ನಿಧಿ ಸಂಗ್ರಹ ಮಾಡುತ್ತಿರುವಾಗ ಬೀದಿಬದಿಯಲ್ಲಿ ಆಟವಾಡುತಿದ್ದ ಅಂಗನವಾಡಿ ಮಕ್ಕಳು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿ ʻನಮ್ಮ ಟೀಚರ್ ಅವರ ಕಾರ್ಯಕ್ರಮ ಇದೆ. ಅವರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ಅವರಿಗೆ ಸಹಾಯ ಮಾಡಿ ಅಂತʼ ತಮ್ಮ ತಮ್ಮ ಪಾಲಕರ ಹತ್ತಿರ ಹಣ ತೆಗೆದುಕೊಂಡು ಸಮ್ಮೇಳನಕ್ಕೆ ಸಹಾಯ ಹಸ್ತ ನೀಡಿದ್ದಾರೆ. ಚಿಣ್ಣರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪೋರ ವ್ಯಕ್ತವಾಗಿದೆ.
ಮಕ್ಕಳಿಗೆ ಇನ್ನೂ ಸಮಾಜದ ಅಂಕುಡೊಂಕುಗಳ ಬಗ್ಗೆ ಅರಿವು ಇಲ್ಲದ ಸಮಯದಲ್ಲಿ ತಮ್ಮ ಟೀಚರ್ ಮಾಡುವ ಕೆಲಸ ನೋಡಿ ಸಮಾಜದಲ್ಲಿ ಇಂತಹ ಅಂಗನವಾಡಿ ತಾಯಂದಿರ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಅಂಗನವಾಡಿಯಲ್ಲಿ ಕಲಿಯುವ ಎಳೆ ಮಕ್ಕಳ ಪಾಲನೆ ಪೋಷಣೆ ಮಾಡುವ ತಾಯಂದಿರ ಕಷ್ಟ ಹೇಳತೀರದು. ಇಂತಹ ಸಮಯದಲ್ಲಿ ಅವರು ಮಾಡುವ ಸಾಮಾಜಿಕ ಬದ್ದತೆಯ ಕೆಲಸಕ್ಕೆ ಜೊತೆಯಾದ ಮಕ್ಕಳಿಗೆ ವಿಶೇಷ ಅಭಿನಂದನೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷೆ ಎಚ್ ಪದ್ಮಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಈ ಪ್ರೋತ್ಸಾಹವು ನಾವು ಅಂಗನವಾಡಿ ನೌಕರರಾಗಿ ಕೆಲಸ ಮಾಡಿದಕ್ಕೆ ನಮಗೆ ತುಂಬಾ ಹೆಮ್ಮೆ ಇದೆ. ಈ ಸಂದರ್ಭದಲ್ಲಿ ಇಡೀ ಹರಿಜನವಾಡ ಸುತ್ತಾಡಿದ ಮಕ್ಕಳು ಕಾರ್ಮಿಕರ ಪರ ಧ್ವನಿಯಾಗಿ ನಿಂತರು. ಇದರಿಂದ ಹರ್ಷಗೊಂಡ ಅಂಗನವಾಡಿ ನೌಕರರು ಹುಮ್ಮಸಿನಿಂದ ನಿಧಿ ಸಂಗ್ರಹಕ್ಕೆ ಮುಂದಾದರು.