ಕಾರ್ಮಿಕ ವಿರೋಧಿ, ರೈತ ವಿರೋಧಿ, ಫೆಡರಲ್ ವಿರೋಧಿ ಬಜೆಟ್ ಅನ್ನು ಖಂಡಿಸಿದ CITU, AIKS, AIAWU

ಕೇರಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2026ರಂದು ಮಂಡಿಸಿದ ಕೇಂದ್ರ ಬಜೆಟ್‌ 2026–27 ಅನ್ನು ಭಾರತೀಯ ಕಾರ್ಮಿಕ ಸಂಘಟನೆಗಳ ಕೇಂದ್ರ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹಾಗೂ ಅಖಿಲ ಭಾರತ ಕೃಷಿ ಕಾರ್ಮಿಕರ ಯೂನಿಯನ್‌ (ಎಐಎಡಬ್ಲ್ಯುಯು) ತೀವ್ರವಾಗಿ ಖಂಡಿಸಿವೆ. ಈ ಬಜೆಟ್‌ ದಿಕ್ಕು ತಪ್ಪಿದದ್ದು, ಕಾರ್ಪೊರೇಟ್ ಪರ ಮತ್ತು ಕಾರ್ಮಿಕ ವಿರೋಧಿಯಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಬಜೆಟ್‌ ವಿರುದ್ಧ ತಕ್ಷಣ ಪ್ರತಿಭಟನೆ ನಡೆಸಲು ಕರೆ ನೀಡಿರುವ ಸಂಘಟನೆಗಳು, ಫೆಬ್ರವರಿ 12, 2026ರಂದು ನಡೆಯುವ ರಾಷ್ಟ್ರವ್ಯಾಪಿ ಸಾಮಾನ್ಯ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಅರ್ಥವಿಲ್ಲದ, ಕಾರ್ಪೊರೇಟ್ ಪರ ಬಜೆಟ್ -ಸಿಐಟಿಯು

ಸಿಟು ಪ್ರಕಾರ, ಜಾಗತಿಕ ಭೌಗೋಳಿಕ–ರಾಜಕೀಯ ಬದಲಾವಣೆಗಳಿಂದ ಹೂಡಿಕೆ, ಪೂರೈಕೆ ಸರಪಳಿ ಹಾಗೂ ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ಸವಾಲು ಎದುರಾಗಿರುವುದನ್ನು ಆರ್ಥಿಕ ಸಮೀಕ್ಷೆ 2025–26 ಒಪ್ಪಿಕೊಂಡಿದ್ದರೂ, ಬಜೆಟ್‌ ಆ ಸವಾಲುಗಳಿಗೆ ಉತ್ತರ ನೀಡಿಲ್ಲ. ಬದಲಾಗಿ ಕಾರ್ಮಿಕ ವಿರೋಧಿ ಕಾನೂನುಗಳ ಜಾರಿಯ ಮೂಲಕ ಹಾಗೂ ಗುಣಮಟ್ಟ ನಿಯಂತ್ರಣ ನಿಯಮಗಳ ಸಡಿಲಿಕೆಯಿಂದ ಬಂಡವಾಳಶಾಹಿ ಸಂಕಷ್ಟದ ಭಾರವನ್ನು ಕಾರ್ಮಿಕರು ಮತ್ತು ಸಾಮಾನ್ಯ ಜನರ ಮೇಲೇ ಹಾಕಲಾಗಿದೆ ಎಂದು ಆರೋಪಿಸಿದೆ.

4.3% ಹಣಕಾಸು ಕೊರತೆ ಗುರಿ ಹಾಗೂ ಸಾಲ–ಜಿಡಿಪಿ ಅನುಪಾತವನ್ನು 55.6%ಕ್ಕೆ ಇಳಿಸುವ ಗುರಿಯೇ ಸರ್ಕಾರದ ಆದ್ಯತೆಯಾಗಿದೆ; ಹಸಿವು, ನಿರುದ್ಯೋಗಕ್ಕೆ ಯಾವುದೇ ಮಹತ್ವ ನೀಡಿಲ್ಲ ಎಂದು ಸಿಟು ಟೀಕಿಸಿದೆ. ಲಾಭದಾಯಕ ಕಾರ್ಪೊರೇಟ್‌ಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಜಿಎಸ್‌ಟಿ ಮತ್ತು ವೈಯಕ್ತಿಕ ಆದಾಯ ತೆರಿಗೆಯ ಮೂಲಕ ₹28.7 ಲಕ್ಷ ಕೋಟಿ ಭಾರವನ್ನು ಜನರ ಮೇಲೆ ಹಾಕಲಾಗಿದೆ. ಇದೇ ಮೊದಲ ಬಾರಿಗೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ (₹14.66 ಲಕ್ಷ ಕೋಟಿ) ಕಾರ್ಪೊರೇಟ್ ತೆರಿಗೆಯನ್ನು (₹12.31 ಲಕ್ಷ ಕೋಟಿ) ಮೀರಿದೆ.

ಇದನ್ನೂ ಓದಿ: ಮಂಡ್ಯ| ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಬಿಲಿಯನೇರ್‌ಗಳಿಗೆ ನೇರ ಲಾಭವಾಗುವಂತೆ ಮಿನಿಮಂ ಆಲ್ಟರ್ನೇಟ್ ಟ್ಯಾಕ್ಸ್‌ 15%ರಿಂದ 14%ಕ್ಕೆ ಇಳಿಕೆ, ಕಾರ್ಪೊರೇಟ್ ಸೇಫ್‌ ಹಾರ್ಬರ್ ವಿಸ್ತರಣೆ, ವಿದೇಶಿ ಹೂಡಿಕೆದಾರರಿಗೆ ತೆರಿಗೆ ರಜೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಆರೋಪಿಸಿದೆ.

ರೈಲ್ವೆಯಲ್ಲಿ ಸಾಮಾನ್ಯ ಪ್ರಯಾಣಿಕರಿಗಿಂತ ವೇಗದ ಕಾರಿಡಾರ್‌ಗಳಿಗೆ ಆದ್ಯತೆ ನೀಡಲಾಗಿದ್ದು, ಹಿರಿಯ ನಾಗರಿಕರ ರಿಯಾಯಿತಿ ಮರುಸ್ಥಾಪನೆ ಮಾಡಿಲ್ಲ. ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ನೆರವು ಹೆಚ್ಚಿದರೆ, ಎಐ ಮಿಷನ್‌ ಅನುದಾನ ಅರ್ಧಕ್ಕೆ ಇಳಿಸಲಾಗಿದೆ. ಅಪರೂಪದ ಖನಿಜ ಕಾರಿಡಾರ್‌ಗಳ ಮೂಲಕ ಆದಿವಾಸಿಗಳ ವಿಸ್ಥಾಪನೆ ಹಾಗೂ ಪ್ರಕೃತಿ ಸಂಪನ್ಮೂಲಗಳ ಕಾರ್ಪೊರೇಟ್‌ಗಳಿಗೆ ಹಸ್ತಾಂತರ ನಡೆಯಲಿದೆ ಎಂದು ಸಿಟು ಎಚ್ಚರಿಸಿದೆ.

ರೈತ ವಿರೋಧಿ, ಕಾರ್ಮಿಕ ವಿರೋಧಿ, ಫೆಡರಲ್‌ ವಿರೋಧಿ – ಎಐಕೆಎಸ್

ಎಐಕೆಎಸ್ ಪ್ರಕಾರ, ಕೃಷಿ ದೇಶದ ಮುಖ್ಯ ಜೀವನೋಪಾಯ ಕ್ಷೇತ್ರವಾಗಿದ್ದರೂ ಬಜೆಟ್‌ನಲ್ಲಿ ಅದಕ್ಕೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಹಣಕಾಸು ಸಚಿವೆ ಭಾಷಣದಲ್ಲಿ ಸಣ್ಣ ಮತ್ತು ಅಂಚಿನ ರೈತರ ಉಲ್ಲೇಖ ಕೇವಲ ಒಂದೇ ಬಾರಿ ಬಂದಿದೆ; ಗ್ರಾಮೀಣ ಕಾರ್ಮಿಕರ ಬಗ್ಗೆ ಮಾತೇ ಇಲ್ಲ.

ಆರ್ಥಿಕ ಸಮೀಕ್ಷೆ 2025–26 ಕೃಷಿ ಬೆಳವಣಿಗೆಯಲ್ಲಿ ಕುಸಿತವಿದೆ ಎಂದು ಹೇಳಿದ್ದರೂ, ಉತ್ಪಾದನೆ ಹೆಚ್ಚಿಸಲು ಅಥವಾ ರೈತರ ಆದಾಯ ಭದ್ರತೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ. ಕೃಷಿ ಸಚಿವಾಲಯದ ಅನುದಾನ ನಾಮಮಾತ್ರ ಹೆಚ್ಚಳವಾಗಿದ್ದು, ದುಬಾರಿ ಬೆಲೆ ಹಿನ್ನೆಲೆಯಲ್ಲಿ ವಾಸ್ತವಿಕ ಹೆಚ್ಚಳವೇ ಇಲ್ಲ.

ರಸಗೊಬ್ಬರ ಮತ್ತು ಆಹಾರ ಸಹಾಯಧನ ಕಡಿತಗೊಂಡಿದ್ದು, ಎಂಎನ್‌ಆರ್‌ಇಜಿಎಸ್‌ ಕುರಿತು ಬಜೆಟ್‌ ಭಾಷಣದಲ್ಲಿ ಉಲ್ಲೇಖವೇ ಇಲ್ಲ. ಹೊಸ ವಿ.ಬಿ–ಗ್ರಾಮ್‌ಜಿ ಯೋಜನೆಯ ಭಾರವನ್ನು ರಾಜ್ಯಗಳ ಮೇಲೆ ಹಾಕಲಾಗಿದೆ. ಇದರಿಂದ ಗ್ರಾಮೀಣ ಉದ್ಯೋಗದ ದಿನಗಳು ಕಡಿಮೆಯಾಗುವ ಆತಂಕವಿದೆ ಎಂದು ಎಐಕೆಎಸ್ ಎಚ್ಚರಿಸಿದೆ.

ಫೆಬ್ರವರಿ 3ರಿಂದ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಬಜೆಟ್‌ ಪ್ರತಿಗಳನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಐಕೆಎಸ್ ಘೋಷಿಸಿದೆ.

ಕೃಷಿ ಕಾರ್ಮಿಕರಿಗೆ ದ್ರೋಹ – ಎಐಎಡಬ್ಲ್ಯುಯು

ಎಐಎಡಬ್ಲ್ಯುಯು ಪ್ರಕಾರ, ಈ ಬಜೆಟ್‌ ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡವರನ್ನು ಮತ್ತೊಮ್ಮೆ ವಂಚಿಸಿದೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳ ಅನುದಾನ ದುಬಾರಿ ಬೆಲೆ ಎದುರಿಸಲು ಸಾಕಾಗಿಲ್ಲ. ಪ್ರಮುಖ ಕೃಷಿ ಯೋಜನೆಗಳಿಗೆ ಕಡಿತ ಮಾಡಲಾಗಿದೆ.

ಗ್ರಾಮೀಣ ಅಭಿವೃದ್ಧಿ ವೆಚ್ಚ ತೀರಾ ಕಡಿಮೆ ಇದ್ದು, ಪಿಂಚಣಿ ಯೋಜನೆಗಳಿಗೆ ಅನುದಾನ ಕಡಿತಗೊಂಡಿದೆ. ಜಲ ಜೀವನ್‌ ಮಿಷನ್‌, ಶಿಕ್ಷಣ, ಆರೋಗ್ಯ ಹಾಗೂ ಎಸ್‌ಸಿ–ಎಸ್‌ಟಿ ಕಲ್ಯಾಣ ಯೋಜನೆಗಳಿಗೆ ನೀಡಿರುವ ಹಣ ಅತಿ ಅಲ್ಪವಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಆದಾಯ ಅಸಮಾನತೆ, ನಿರುದ್ಯೋಗ, ದಾರಿದ್ರ್ಯ, ಕೃಷಿ ಸಂಕಷ್ಟ ಹಾಗೂ ಜಾಗತಿಕ ಆರ್ಥಿಕ ಅಸ್ಥಿರತೆ ಕುರಿತ ಆರ್ಥಿಕ ಸಮೀಕ್ಷೆಯ ಎಚ್ಚರಿಕೆಗಳನ್ನು ಬಜೆಟ್‌ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಎಐಎಡಬ್ಲ್ಯುಯು ಹೇಳಿದೆ.

ಇದನ್ನೂ ನೋಡಿ: ಗಾಂಧೀಜಿಯವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *