ಚಲನಚಿತ್ರ ಕಾಯ್ದೆಗೆ ಪ್ರತಿಗಾಮಿ ತಿದ್ದುಪಡಿಗಳು: ಹಿಂತೆಗೆದುಕೊಳ್ಳಲು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ನವದೆಹಲಿ : ಮೋದಿ ಸರಕಾರ ಚಲನಚಿತ್ರ(ಸಿನೆಮಟೊಗ್ರಫಿ) ಕಾಯ್ದೆಗೆ ತರಬೇಕೆಂದಿರುವ ತಿದ್ದುಪಡಿಗಳು ಚಲನಚಿತ್ರ ನಿರ್ಮಾತೃಗಳ ಸೃಜನಾತ್ಮಕ ಪ್ರತಿಭೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನಿಕ ಹಕ್ಕಿನ ಮೇಲೆ ನಡೆಸಿರುವ ಸರ್ವತೋಮುಖ ಹಲ್ಲೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ ಬ್ಯುರೊ ಖಂಡಿಸಿದೆ.

ಕೇಂದ್ರ ಸರಕಾರ ಈ ಕಾಯ್ದೆಯ ವಿಭಾಗ 58(1) (ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವಲ್ಲಿ ಮಾರ್ಗದರ್ಶನದ ಸೂತ್ರಗಳು) ಇದರ ಉಲ್ಲಂಘನೆಗಾಗಿ “ಪರಿಷ್ಕಾರಕ ಅಧಿಕಾರ”ಗಳನ್ನು ಪಡೆಯುವ ಒಂದು ಉಪಬಂಧವನ್ನು ಸೇರಿಸ ಬಯಸುತ್ತಿದೆ. ಇದು ಅದಾಗಲೇ ಪ್ರಮಾಣ ಪತ್ರ ಪಡೆದಿರುವ ಚಲನಚಿತ್ರಗಳ ಪ್ರದರ್ಶನವನ್ನು ನಿಲ್ಲಿಸುವುದಲ್ಲದೆ ಬೇರೇನೂ ಅಲ್ಲ ಎಂದು ಅದು ಅಭಿಪ್ರಾಯ ಪಟ್ಟಿದೆ. ಇತ್ತೀಚೆಗೆ, ಹಿಂದುತ್ವ ಪಡೆಗಳು ಮತ್ತು ಜಾತಿವಾದಿ ಗುಂಪುಗಳ ನೇತೃತ್ವದ ಬಲಪಂಥೀಯ ಶಕ್ತಿಗಳು ತಮಗೆ ಇಷ್ಟವಾಗದ ಚಲನಚಿತ್ರಗಳನ್ನು ಜನಜಂಗುಳಿಯ ಮೂಲಕ ಸೆನ್ಸಾರ್ ಮಾಡುವ ಘಟನೆಗಳನ್ನು ಕಾಣುತ್ತಿದ್ದೇವೆ. ಈಗ ಸರಕಾರವೇ ತನ್ನ ಸಿದ್ಧಾಂತಗಳನ್ನು ವಿಮರ್ಶಿಸುವ ಚಿತ್ರಗಳನ್ನು ನಿಲ್ಲಿಸುವ ಅಧಿಕಾರವನ್ನು ಪಡೆಯ ಬಯಸುತ್ತಿದೆ. ಈ ಮೊದಲೇ ಚಲನಚಿತ್ರ ಸೆನ್ಸಾರ್ ಮಂಡಳಿಯ ಸ್ವಾಯತ್ತ ಅಧಿಕಾರಗಳನ್ನು ಮಾಹಿತಿ ಮತ್ತು ಪ್ರಸಾರ ಮಂತ್ರಾಲಯ ವಿವಿಧ ರೀತಿಗಳಲ್ಲಿ ಬುಡಮೆಲು ಮಾಡುತ್ತಿದೆ. ಅದು ಎಪ್ರಿಲ್ ತಿಂಗಳಲ್ಲಿ ಸೆನ್ಸಾರ್ ಮಂಡಳಿ ಸೂಚಿಸುವ ಕಡಿತಗಳ ವಿರುದ್ಧ ಮೇಲ್ಮನವಿಗೆ ಇದ್ದ ವ್ಯವಸ್ಥೆಯನ್ನು ನಿರಂಕುಶ ರೀತಿಯಲ್ಲಿ ವಿಸರ್ಜಿಸಿದೆ.

ಇದನ್ನು ಓದಿ: ಚಲನಚಿತ್ರ ಬಿಡುಗಡೆ ನಂತರವೂ ಸೆನ್ಸಾರ್‌ ಮಾಡುವ ಅಧಿಕಾರ: ಕಾಯ್ದೆ ತಿದ್ದುಪಡಿಗೆ ಕೇಂದ್ರ ನಿರ್ಧಾರ

ಇವು ಚಲನಚಿತ್ರ ಪ್ರತಿಭೆ ಮತ್ತು ಸ್ವಾತಂತ್ರ್ಯದ ಕತ್ತು ಹಿಸುಕುವ ಘೋರ ತಿದ್ದುಪಡಿಗಳು, ಇವನ್ನು ತಾನು ಬಲವಾಗಿ ವಿರೋಧಿಸುವುದಾಗಿ ಹೇಳಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಖ್ಯಾತ ಚಲನಚಿತ್ರ ನಿರ್ಮಾತೃಗಳು ಆಗ್ರಹಿಸಿರುವಂತೆ ಚಲನಚಿತ್ರ ಮೇಲ್ಮನವಿ ನ್ಯಾಯಮಂಡಳಿಯನ್ನು ಮತ್ತೆ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ ಹಾಗೂ ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಈ ಹಲ್ಲೆಯ ವಿರುದ್ಧ ಚಲನಚಿತ್ರ ಉದ್ಯಮದಲ್ಲಿ ಧೈರ್ಯದಿಂದ ದನಿ ಎತ್ತಿರುವವರಿಗೆ ಬೆಂಬಲವನ್ನು ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *