ಕಾಲೇಜುಗಳಲ್ಲಿನ ರ‍್ಯಾಗಿಂಗ್ ಹಾವಳಿ ತಪ್ಪಿಸುವಂತೆ ವಿದ್ಯಾರ್ಥಿಗಳ ಆಗ್ರಹ

ಮಂಗಳೂರು ಫೆ 16 : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿಗಳಲ್ಲಿ ರ‍್ಯಾಗಿಂಗ್ ಪ್ರಕರಣ ದಾಖಲಾಗಿದ್ದು ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳ ಬಂಧನವಾಗಿದೆ. ಈ ರ‍್ಯಾಗಿಂಗ್  ಪ್ರಕರಣವು ಜಿಲ್ಲಾಡಳಿತ ಹಾಗೂ ರ‍್ಯಾಗಿಂಗ್ ನಡೆಸುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆಯಾದರೂ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ಹೊರ ರಾಜ್ಯ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ನಗರದ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಾರೆ. ಈ ವಿದ್ಯಾರ್ಥಿಗಳು ತಮ್ಮ ಹೆತ್ತವರಿಂದ ದೂರವಿದ್ದು ನಗರದಲ್ಲೇ ಹಾಸ್ಟೇಲುಗಳಲ್ಲಿ ನೆಲೆಸಿ ವಿದ್ಯಾರ್ಜನೆ ಮಾಡುತ್ತಾರೆ. ರ‍್ಯಾಗಿಂಗ್ ಪ್ರಕರಣವು ಇಂತಹ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಜಿ‌ಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ರ‍್ಯಾಗಿಂಗ್ ಮುಕ್ತ ಸಮಿತಿ ಇದೆಯಾದರೂ ಕೇವಲ ಹೆಸರಿಗೆ ಮಾತ್ರ ಇರುವಂತಾಗಿದೆ. ಇನ್ನೂ ಕೆಲವು ಶಾಲಾ-ಕಾಲೇಜುಗಳಲ್ಲಿ ರ‍್ಯಾಗಿಂಗ್ ಮುಕ್ತ ಸಮಿತಿಯನ್ನು ರಚಿಸಿಲ್ಲ. ವಿದ್ಯಾಸಂಸ್ಥೆಗಳಲ್ಲಿ ರ‍್ಯಾಗಿಂಗ್ ಮೊದಲಾದ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳು ನಡೆಯದಂತೆ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಬೇಕಾಗಿದೆ. ಯಾವುದೇ ವಿದ್ಯಾರ್ಥಿಗಳು ಕಿರುಕುಳವನ್ನು ಎದುರಿಸುತ್ತಿದ್ದರೆ ಆತಂಕಕ್ಕೆ ಒಳಪಡದೆ, ತಮ್ಮ ವಿದ್ಯಾಸಂಸ್ಥೆಯ ಸಂಬಂಧ ಪಟ್ಟ ಸಮಿತಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ದೈರ್ಯ ತುಂಬುವಂಥಹ ಕಾರ್ಯವನ್ನು ಸಮಿತಿಯು ನಿರ್ವಹಿಸಬೇಕು. ವಿದ್ಯಾರ್ಥಿಗಳ ನಡುವೆ ಭಯಮುಕ್ತ ವಾತಾವರಣ ಸೃಷ್ಟಿಸುವಲ್ಲಿ ವಿದ್ಯಾಸಂಸ್ಥೆಯು ಬದ್ಧರಾಗಿರಬೇಕು  ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್ ಆಗ್ರಹಿಸಿದ್ದಾರೆ.

ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಹಾಗೂ ಹಾಸ್ಟೇಲ್ ಗಳಲ್ಲಿ ರ‍್ಯಾಗಿಂಗ್ ತಡೆ ಸಮಿತಿಯು ರಚಿಸಿ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಶಾಲಾ-ಕಾಲೇಜುಗಳಲ್ಲಿ ಈ ಸಮಿತಿ ರಚಿಸಲಾಗಿದೆಯೇ ಹಾಗೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಬೇಕು. ಹಾಗೆಯೇ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಪೊಲೀಸ್‌ ಇಲಾಖೆಯು ರ‍್ಯಾಗಿಂಗ್ ಮುಕ್ತ ಅಭಿಯಾನವನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ವಿದ್ಯಾರ್ಥಿ ಸಿನಾನ್ ಬೆಂಗ್ರೆ ಮನವಿ ಮಾಡಿದ್ದಾರೆ.

ಅಪರ ಜಿಲ್ಲಾಧಿಕಾರಿ, ರೂಪಾ ಜೆ. ಎಂ. ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ  ಎಸ್.ಎಫ್.ಐ ನ ನಿಯೋಗದಿಂದ ಮನವಿ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ  ಎಸ್.ಎಫ್.ಐ ಮುಖಂಡರಾದ ಶಮಾಝ್ ಕೆ. ಸಿ. ರೋಡ್, ತಿಲಕ್ ಕುತ್ತಾರ್, ವಿನೀತ್ ದೇವಾಡಿಗ, ಸಲೋನಿ ಬೋಳಾರ್, ಸಫ್ವಾನ್ ಸೇರಿದಂತೆ ಅನೇಕರಿದ್ದರು.

Donate Janashakthi Media

Leave a Reply

Your email address will not be published. Required fields are marked *