- ಬಂಧಿತ ಅರುಣ್ ಪಾಟೀಲ ಎಬಿವಿಪಿ ಮುಖಂಡ; ಎಲ್ಲ ಬಂಧಿತರು ನ್ಯಾಯಾಂಗ ಬಂಧನಕ್ಕೆ
- ಸಿಐಡಿ ಅಧಿಕಾರಿಗಳ ವಿಚಾರಣೆ ಅಂತ್ಯ; ಎಬಿವಿಪಿಗೂ ಪಿಎಸ್‌ಐ ಪರೀಕ್ಷೆ ಅಕ್ರಮ ಉರುಳು?
ಬೆಂಗಳೂರು : 545 ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿ ಅಧಿಕಾರಿಗಳು ಬಗೆದಷ್ಟು ಆಳವಾಗತೊಡಗಿದೆ. ಇದರೊಂದಿಗೆ ಎಬಿವಿಪಿ ಮುಖಂಡನೇ ಅಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೆ ಹಲವರನ್ನು ಕಿಂಗ್‌ಪಿನ್ ವ್ಯಕ್ತಿಗೆ ಪರಿಚಯಿಸಿರುವ ಸಾಧ್ಯತೆ ಇದೆ ಎನ್ನುವ ಸತ್ಯ ಕೊನೆಯ ಹಂತದ ವಿಚಾರಣೆಯಲ್ಲಿ ಬಯಲಾಗಿದೆ.
ವಿಚಾರಣೆ ವೇಳೆಯಲ್ಲಿ ಬಂಧಿತ ಅರುಣ್ ಪಾಟೀಲ ತಾನು ತುಂಬಾ ಬಡವ, ಲಕ್ಷಾಂತರ ರೂ. ನೀಡುವುದು ಸಾಧ್ಯವಿರಲಿಲ್ಲ. ನಾನು ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತನಾಗಿರುವ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಸ್ಥರ ಪರಿಚಯವಾಗಿತ್ತು. ನನಗೆ ಉಚಿತವಾಗಿ ಓಎಂಆರ್ ಶೀಟ್ ತಿದ್ದಿ ಅಂಕಗಳನ್ನು ಬರುವಂತೆ ಮಾಡಲಾಗಿದೆ. ಇದರಿಂದಾಗಿ ನಾನು ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಅರುಣ್ ಮಾಹಿತಿ ನೀಡಿದ್ದಾನೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಪಿಎಸ್ಐ ಪರೀಕ್ಷಾ ಅಕ್ರಮ : ತನಿಖೆ ಚುರುಕು,ಪ್ರಮುಖ ಸಾಕ್ಷಿ ಕಾರ್ಬನ್ ಶೀಟ್?!
ಪಿಎಸ್‌ಐ ನೇಮಕಾತಿ ಅಕ್ರಮ ನಡೆದ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ, ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯವರ ಬಳಿ ಅರುಣ್ ಪಾಟೀಲ್ ತಾನು ಪಿಎಸ್‌ಐ ಆಗುವ ಬಗ್ಗೆ ಕೇಳಿಕೊಂಡಿದ್ದ. “ನಿನ್ನಂದ ಅಷ್ಟು ಹಣ ಕೊಡಲು ಸಾಧ್ಯವಿಲ್ಲ, ಹಾಗಾಗಿ ನೀನು ಕೆಲವರನ್ನು ಕರೆದುಕೊಂಡು ಬಾ. ನಿನಗೆ ಓಎಂಆರ್ ಶೀಟ್ ನ್ನು ಉಚಿತವಾಗಿ ನೀಡುತ್ತೇನೆ. ಮೇಲಾಗಿ ನೀನು ನಮ್ಮ ಪಕ್ಷದ ಕಾರ್ಯಕರ್ತ, ವಿದ್ಯಾರ್ಥಿ ಸಂಘಟನೆ(ಎಬಿವಿಪಿ)ಯ ಮುಖಂಡ”, ಎಂದು ಭರವಸೆ ನೀಡಿದ್ದರು. ಅದರಂತೆ ಅರುಣ್ ಹಲವಾರು ಜನರನ್ನು ದಿವ್ಯಾ ಹಾಗರಿಗಿ ಮತ್ತು ಇತರರಿಗೆ ಕೆಲವರನ್ನು ಪರಿಚಯಿಸಿ ಹಣ ಕೊಡಿಸಿದ್ದ. ಹಾಗಾಗಿಯೇ ಇತನಿಗೆ ಉಚಿತವಾಗಿ ಒಏಂಆರ್ ಶೀಟ್ ದೊರೆತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಈ ಹಗರಣದ ಕಿಂಗ್‌ಪಿನ್‌ಗಳಾದ ದಿವ್ಯಾ ಹಾಗರಗಿ ಮತ್ತು ಕಾಶಿನಾಥ್ ನೀಡುತ್ತಿದ್ದ ಸಲಹೆಯಂತೆ ನಾವು ಪರೀಕ್ಷೆ ಬರೆದಿದ್ದೇವೆ ಎಂದು ತನಿಖಾ ವೇಳೆ ಅಭ್ಯರ್ಥಿಗಳು ಬಾಯಿ ಬಿಟ್ಟಿದ್ದಾರೆ. ಒಬ್ಬ ಅಭ್ಯರ್ಥಿಯಿಂದ 40 ರಿಂದ 80 ಲಕ್ಷದ ವರೆಗೆ ಹಣ ಪಡೆಯಲಾಗಿದ್ದು, ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ತಲಾ ನಾಲ್ಕು ಸಾವಿರ ರೂ ಹಣ ನೀಡಿ ವಿದ್ಯಾರ್ಥಿಗಳಿಗೆ ಸಹಕರಿಸುವಂತೆ ಸೂಚನೆಯನ್ನು ನೀಡಲಾಗಿತ್ತು ಎಂಬ ಅಂಶ ತನಿಖೆಯಿಂದ ಹೊರ ಬಿದ್ದಿದೆ.
ದಿವ್ಯಾ ಹಾಗರಗಿ, ಕಾಶಿನಾಥ್ ಹಾಗೂ ಕೊಠಡಿಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದ ಐದು ಜನ ಶಿಕ್ಷಕರನ್ನು ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ರಕ್ಷಣೆ ನೀಡಿದ್ದಾರೆ ಎಂಬ ಮಾಹಿತಿ ಬಿಜೆಪಿ ವಲಯದಿಂದ ಲಭ್ಯವಾಗಿದೆ.