ಬೆಂಗಳೂರು: ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿ ನಡೆಯಬೇಕಿದ್ದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ ಹಾಗೂ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಗಳ ಚುನಾವಣೆಯನ್ನು ಮುಂದೂಡಲಾಗಿದೆ. ಚುನಾವಣೆಗಳನ್ನು 6 ತಿಂಗಳ ಕಾಲ ಮುಂದೂಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರಿಗೆ, ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸುವುದು ಬಾಕಿ ಇದ್ದಲ್ಲಿ, ಚುನಾವಣೆಯನ್ನು ಕೂಡಲೇ ಮುಂದೂಡುವಂತೆ ನಿರ್ದೇಶನ ನೀಡಲಾಗಿದೆ.
ಸಚಿವ ಸಂಪುಟ ನಿರ್ಣಯದ ಹಿನ್ನಲೆಯಲ್ಲಿ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳು ಹಾಗೂ ಮಹಾನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ ಹಾಗೂ ಸದರಿ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಚುನಾವಣೆಗಳನ್ನು ಮುಂದೂಡಲಾಗಿದೆ. ದಿನಾಂಕ 26-04-2021ರಿಂದ ಮುಂದಿನ 6 ತಿಂಗಳ ಅವಧಿಗೆ ಮುಂದೂಡುವ ಬಗ್ಗೆ ಸಚಿವ ಸಂಪುಟವು ತೀರ್ಮಾನಿಸಿದ್ದು, ಅದರಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಾರ, ಪಂಚಾಯತ್ ಚುನಾವಣೆಗೆ 3.5 ಕೋಟಿ ಅರ್ಹ ಮತದಾರರಿದ್ದಾರೆ. ಬಿಬಿಎಂಪಿ ಆಡಿತಾಧಿಕಾರಿ ನೇಮಕವಾಗಿ ತಿಂಗಳುಗಳ ನಂತರ, ಸರ್ಕಾರವು ಇನ್ನೂ ಡಿಲಿಮಿಟೇಶನ್ ಕೆಲಸವನ್ನು ಪೂರ್ಣಗೊಳಿಸದ ಕಾರಣ ಕೌನ್ಸಿಲ್ ಚುನಾವಣೆಗಳು ಕೂಡ ನಡೆಯುವುದಿಲ್ಲ, ಮೇ ಮತ್ತು ಜೂನ್ ತಿಂಗಳಿನಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿತ್ತು.