ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಮಹತ್ವದ ಬದಲಾವಣೆ ಖಂಡಿತ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು ವಿರೋಧ ಪಕ್ಷದ ನಾಯಕರಿಗೆ ಕೊಟ್ಟಿರುವ ಹೇಳಿಕೆಯೊ ಅಥವಾ ಪಕ್ಷದಲ್ಲಿನ ವಿರೋಧಿಗಳಿಗೆ ಕೊಟ್ಟಿರುವ ಎಚ್ಚರಿಕೆಯೋ ಎಂಬುದು ನಿಗೂಢವಾಗಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ನಾನು ಒಂದು ಶಬ್ದವನ್ನೂ ಮಾತನಾಡಿಲ್ಲ. ಚುನಾವಣೆ ಮುಗಿದ ಬಳಿಕ ಅವರೇ ಉತ್ತರಲಿ ಕೊಡಲಿ ಎಂದಿದ್ದು ಪಕ್ಷದಲ್ಲಿನ ವಿರೋಧಿಗಳಿಗಾ ಅಥವಾ ವಿರೋಧ ಪಕ್ಷದ ನಾಯಕರಿಗಾ? ಎಂಬುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಶಿರಾ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳುವ ಮೊದಲು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಆ ಮಾತನ್ನಾಡಿದ್ದಾರೆ. ಜೊತೆಗೆ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಕುರಿತೂ ಮಾತನಾಡಿದ್ದಾರೆ. ಉಪ ಚುನಾವಣೆ ಬಳಿಕ ಏನಾಗಲಿದೆ ಎಂಬುದರ ಸಂಪೂರ್ಣ ಮುನ್ಸೂಚನೆಯನ್ನು ಯಡಿಯೂರಪ್ಪ ಅವರು ಕೊಟ್ಟಿದ್ದಾರೆ.
ಜೊತೆಗೆ ನಾನು ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ತೆರಳುವ ಇರಾದೆ ಇರಲಿಲ್ಲ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರು ಎಚ್.ಡಿ, ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿಯಾಗಿ ನಾನು ಪ್ರಚಾರಕ್ಕೆ ಹೋಗಲಿಲ್ಲ ಅಂದರೆ ತಪ್ಪಾಗುತ್ತದೆ. ಅದಕ್ಕೆ ಎರಡೂ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಹೈಕಮಾಂಡ್ ಕದ ತಟ್ಟಿದ್ದ ಯಡಿಯೂರಪ್ಪ
ಕಳೆದ ಮಳೆಗಾಲದ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆಗೆ ಪ್ರಯತ್ನಿಸಿದ್ದ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಕದ ತಟ್ಟಿದ್ದರು. ದೆಹಲಿಗೆ ತೆರಳಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಆದರೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡದಿದ್ದಿದ್ದಕ್ಕೆ ಸಂಪುಟ ವಿಸ್ತರಣೆ ಆಗಿರಲಿಲ್ಲ.
ಚುನಾವಣೆ ಬಳಿಕ ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ ಇವತ್ತು ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ದೆಹಲಿಗೆ ಹೋಗಿ ಬರುತ್ತೇನೆ. ಅಲ್ಲಿಗೆ ಹೋಗಿ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ. ಈ ಹಿಂದೆಯೆ ಸಂಪುಟ ವಿಸ್ತರಣೆ ಆಗಬೇಕಿತ್ತು. ಆದರೆ ಚುನಾವಣೆ ಬಂದಿದ್ದರಿಂದ ಆಗಿರಲಿಲ್ಲ. ಹೀಗಾಗಿ ಉಪ ಚುನಾವಣೆ ಮುಗಿಯುತ್ತಿದ್ದಂತೆಯೆ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ.
ಸಿಎಂ ಬದಲಾವಣೆ ಕುರಿತು ಯಡಿಯೂರಪ್ಪ ಹೇಳಿಕೆ
ಇನ್ನು ಉಪ ಚುನಾವಣೆ ಮುಗಿದ್ಮೇಲೆ ಮುಖ್ಯಮಂತ್ರಿ ಬದಲಾಗ್ತಾರೆ ಎಂಬ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅತ್ಯಂತ ಶಾಂತವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಉಪ ಚುನಾವಣೆ ಮುಗಿದ ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ ಎಂಬ ಕುತೂಹಲಕಾರಿ ಮಾತನ್ನಾಡಿದ್ದಾರೆ. ಚುನಾವಣೆ ಫಲಿತಾಶಂದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ದೊಡ್ಡ ಮುಖಭಂಗ ಆಗುತ್ತದೆ. ಇದುವರೆಗೂ ನಾನು ಒಂದು ಶಬ್ದವನ್ನೂ ಮಾತನಾಡಿಲ್ಲ. ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಇದುವರೆಗೂ ಯಾವುದೇ ಟೀಕೆ ಮಾಡಿಲ್ಲ, ಯಾರ ಹೆಸರು ಹೇಳಿಲ್ಲ. ಚುನಾವಣೆ ಮುಗಿದ್ಮೇಲೆ ಅವರೇ ಉತ್ತರ ಕೊಡಲಿ ಎಂದರು.