ಚುನಾವಣಾ ನೀತಿಸಂಹಿತೆ ಉಲ್ಲಂಘನೆ: ಅಶ್ವಥ್ ನಾರಾಯಣ್ ವಿರುದ್ಧ 3 ಖಾಸಗಿ ದೂರು

ಮಂಡ್ಯ: ಉನ್ನತ ಶಿಕ್ಷಣ ಸಚಿವ ಸಿ.ಎಸ್‌. ಅಶ್ವತ್ಥ್‌ ನಾರಾಯಣ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ ಮೂರು ಖಾಸಗಿ ದೂರು ದಾಖಲಾಗಿದೆ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಜಾರಿಯಲ್ಲಿದ್ದು, ಸಚಿವರು ಶಾಲಾ–ಕಾಲೇಜುಗಳಲ್ಲಿ ಪ್ರಚಾರ ಸಭೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದು ಸಾಬೀತಾಗಿದ್ದು, ಕ್ರಮಕೈಗೊಳ್ಳಬೇಕೆಂದು ಎಂದು ಜಿಲ್ಲಾ ಮಟ್ಟದ ಚುನಾವಣಾ ನೀತಿ ಸಂಹಿತೆ ತಂಡದ ಮುಖ್ಯಸ್ಥರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಾಪ್ರಭು ಅವರು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಚುನಾವಣಾ ಆಯೋಗಕ್ಕೆ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸುಂಡಹಳ್ಳಿ ಮಂಜುನಾಥ್‌ ಸಚಿವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಮೇ 17ರಂದು ದೂರು ಸಲ್ಲಿಸಿದ್ದರು. ತನಿಖೆ ಮಾಡಿದ ಅಧಿಕಾರಿಗಳು ಸಚಿವರು ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮೇ 16ರಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಹಿಳಾ ಕಾಲೇಜು, ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು, ಮಾಂಡವ್ಯ ಶಾಲೆಯಲ್ಲಿ ಸಭೆ ನಡೆಸಿ ಪ್ರಚಾರ ನಡೆಸಿದ್ದಾರೆ. ಸಭೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.

ಆಡಳಿತ ಯಂತ್ರವನ್ನು ದುರುಪಯೋಗಿಸಿಕೊಂಡ ಸಚಿವ ಅಶ್ವತ್ಥ್‌ ನಾರಾಯಣ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು, ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಮಂಡ್ಯದ ನ್ಯಾಯಾಲಯಗಳಲ್ಲಿ ಸಚಿವರ ಮೇಲೆ ಚುನಾವಣಾಧಿಕಾರಿಗಳು ಮೂರು ಖಾಸಗಿ ದೂರು ದಾಖಲಿಸಿದ್ದಾರೆ ಎಂದು ಮಂಜುನಾಥ್‌ ತಿಳಿಸಿದ್ದಾರೆ. ಅಲ್ಲದೆ, ಎರಡನೇ ಅಪರ ಸಿವಿಲ್‌ ನ್ಯಾಯಾಲಯ ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ಕೂಡಲೇ ಆದೇಶಿಸಬೇಕೆಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *