ಚುನಾವಣಾ ಘೋಷಣೆಯ ಮುನ್ಸೂಚನೆಗಳು

ಎಸ್.ವೈ. ಗುರುಶಾಂತ್

ಕರ್ನಾಟಕಕ್ಕೆ ಚುನಾವಣಾ ಆಯೋಗದ ಆಯುಕ್ತರು ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದ್ದ ಮೂರು ದಿನಗಳಲ್ಲಿ (ಮಾರ್ಚ್ 9 ರಿಂದ 11) ಕರ್ನಾಟಕ ಸರ್ಕಾರ, ವಿವಿಧ ರಾಜಕೀಯ ಪಕ್ಷಗಳು, ಅಧಿಕಾರಿಗಳು, ಮುಂತಾದವರೊಂದಿಗೆ ನಿರಂತರ ಸಮಾಲೋಚನೆಗಳನ್ನು ನಡೆಸಿದ್ದಾರೆ ಮತ್ತು ಚುನಾವಣಾಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ ನಡೆಯಬೇಕಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ನಡೆಸುವುದಕ್ಕೆ ಪೂರ್ವ ಪೂರ್ವಭಾವಿ ಸಿದ್ಧತೆಗಳ ಅವಲೋಕನ. ಎಂದಿನಂತೆ ನಡೆದ ತಾಲೀಮು. ಈಗ ನಡೆದಿರುವ ಸಭೆಯ ನಂತರದ ಸೂಚನೆಯಂತೆ ಇನ್ನು ಕೆಲವು ದಿನಗಳಲ್ಲಿ ಚುನಾವಣೆಯ ಒಟ್ಟು ಸಂಭವನೀಯ ವೇಳಾಪಟ್ಟಿ ಪ್ರಕಟಗೊಳ್ಳಬಹುದು.

ಈಗ ನಿಗದಿಯಾಗಿರುವಂತೆ ಚುನಾವಣಾ ಪೂರ್ವ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೇ ಮಾರ್ಚ್ 25ರಂದು ಕರ್ನಾಟಕಕ್ಕೆ ಭೇಟಿ ನೀಡಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮಾರ್ಚ್ 27 ರಂದು ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಅಧಿಕೃತವಾಗಿ ಜಾರಿಗೊಳಿಸಲಿದೆ ಎನ್ನುವ ಮುನ್ಸೂಚನೆಗಳಿವೆ. ಮೇ 12ರಂದು ಮತದಾನ ನಡೆಯುವ, 15 ರಂದು ಎಣಿಕೆ ಮಾಡುವ ಸೂಚನೆಗಳೂ ಇದೆ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಒಂದು ದಿನದಲ್ಲಿ ಚುನಾವಣೆ ನಡೆಯುವಂತೆ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದವು.

ಇದನ್ನು ಓದಿ: ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ನ್ಯಾಯಸಮ್ಮತ ಚುನಾವಣೆಗೆ ಸಜ್ಜಾಗಿ : ರಾಜೀವ್‍ಕುಮಾರ್ ಸೂಚನೆ

ಏಪ್ರಿಲ್ 17ರಂದು ಚುನಾವಣಾ ನೋಟಿಫಿಕೇಶನ್, 24ಕ್ಕೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ನಿಗದಿಯಾಗುವ ಸಂಭವನೀಯ ಸೂಚನೆಗಳು ಇವೆ. ಚುನಾವಣಾ ಬಹಿರಂಗ ಪ್ರಚಾರಕ್ಕೆ ಬಹಳ ಎಂದರೆ 14 ಅಥವಾ 15 ದಿನಗಳು ಲಭ್ಯವಾಗಬಹುದು. ಅಂದರೆ ರಾಜ್ಯದಲ್ಲಿ ಈಗ ನಡೆದಿರುವ ಚುನಾವಣೆಯ ಪೂರ್ವಭಾವಿ ಸಿದ್ಧತೆಗಳ ಭರಾಟೆ, ಕೊಡುಗೆಗಳು ಕೊನೆಗೊಳ್ಳುತ್ತಾ ಚುನಾವಣೆಯ ನೀತಿ ಸಂಹಿತೆ ವ್ಯಾಪ್ತಿಯ ಒಳಗಡೆಯ ಚಟುವಟಿಕೆಗಳು ಬಿರುಸುಗೊಳ್ಳಲಿವೆ.

ಇನ್ನೇನಿದ್ದರೂ ರಾಜ್ಯದಲ್ಲಿ ಚುನಾವಣೆಯ ಜ್ವರ.

*****

ಮೋ-ಶಾ ಗಳ ಠಿಕಾಣಿ

ಚುನಾವಣೆಯ ಸಿದ್ಧತೆಯ ಕಾರ್ಯಗಳಲ್ಲಿ ಪ್ರಚಾರದಲ್ಲಿ ಭರದಿಂದ ತೊಡಗಿರುವ ವಿವಿಧ ರಾಜಕೀಯ ಪಕ್ಷಗಳ ಚಟುವಟಿಕೆಗಳು ಈ ವಾರ ಮತ್ತಷ್ಟು ಹೆಚ್ಚಾಗಿವೆ. ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿರುವುದಂತೂ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣೆಯ ಸಿದ್ಧತೆಯ ಮತ್ತು ಯಾವುದೇ ಸಂದರ್ಭದಲ್ಲಿ ಅದರ ವೇಳಾಪಟ್ಟಿಯ ಪ್ರಕಟಣೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳು ರಾಜ್ಯದ ನಾಯಕರುಗಳ ಪ್ರವಾಸ, ಪ್ರಚಾರ ಕಾರ್ಯದಲ್ಲಿದ್ದರೆ, ಬಿಜೆಪಿ ಪಕ್ಷ ಮಾತ್ರ ಸಂಪೂರ್ಣವಾಗಿ ಅಖಿಲ ಭಾರತ ನಾಯಕರನ್ನೇ ಅವಲಂಬಿಸಿದೆ. ಅದರಲ್ಲೂ ಮುಖ್ಯವಾಗಿ ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಅಮಿತ್ ಶಾ ರವರು ಬಹುತೇಕ ಎಲ್ಲ ಪ್ರಾದೇಶಿಕ ಪ್ರಮುಖ ಕೇಂದ್ರಗಳಲ್ಲೂ ಮತ್ತು ಹಲವಾರು ಜಿಲ್ಲೆಗಳಲ್ಲಿಯೂ ಸರ್ಕಾರಿ ಅಧಿಕೃತ ಕಾರ್ಯಕ್ರಮದ ಮೂಲಕವೇ ಬಹುತೇಕ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಮಾರ್ಚ್ 25 ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಹುತೇಕ ಅಂತಿಮ ಇರಬೇಕು.

ಇದನ್ನು ಓದಿ: ಬೆಂಗಳೂರು-ಮೈಸೂರು ರಸ್ತೆ ಉದ್ಘಾಟನೆ; ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಯ ಕಾರ್ಯಕ್ರಮವೇ?

ರಾಜ್ಯದಲ್ಲಿ ಗೆಲ್ಲುವ ಅನುಮಾನ ಇರುವ ಕಡೆ ಅಥವಾ ಸೋಲುವ ಸಾಧ್ಯತೆಗಳು ನಿಚ್ಚಳವಾಗಿರುವ ಕಡೆಗಳಲ್ಲಿ ತನ್ನನ್ನು ಆಹ್ವಾನಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವುದಾಗಿ ವರದಿಯಾಗಿದೆ. ಸೋಲನ್ನು ಗೆಲುವಾಗಿ ಪರಿವರ್ತಿಸುವ ಅಂತಹ ಮಂತ್ರ ಮಾನದಂಡ ಅವರಲ್ಲಿ ಏನಿದೆ ಎನ್ನುವುದು ಕುತೂಹಲಕಾರಿ ಅಂಶ! ಆದರೆ ಚುನಾವಣೆಯ ಕಾರ್ಯತಂತ್ರ, ಕಾರ್ಯವಿಧಾನಗಳಲ್ಲಿ ಮತ್ತು ಅದಕ್ಕಾಗಿ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಬಳಕೆಯಲ್ಲಿ ಬಿಜೆಪಿ ಪಕ್ಷವನ್ನು ಸರಿಗಟ್ಟುವುದು ಒಂದು ರೀತಿಯಲ್ಲಿ ಅಸಾಧ್ಯವೇ. ಅದು ಪ್ರಥಮವಾಗಿ ಕಾರ್ಪೊರೇಟ್ ಕಂಪನಿಗಳ ಅತಿ ಹೆಚ್ಚು ಹೂಡಿಕೆಯನ್ನು ಪಡೆಯುವ ರಾಜಕೀಯ ಪಕ್ಷ. ಅತ್ಯಂತ ಸುಸಂಘಟಿತ ಸಂಘಟನಾ ಜಾಲ ಮತ್ತು ಸೈದ್ಧಾಂತಿಕ ಬದ್ಧತೆ ಸ್ಪಷ್ಟತೆ ಇರುವ ಕಮ್ಯೂನಿಸ್ಟ್ ಪಕ್ಷಗಳು ಮಾತ್ರ ಬಲವಾಗಿರುವಲ್ಲಿ ಬಿಜೆಪಿಯ ಸಿದ್ಧತೆ ಮತ್ತು ಆಕ್ರಮಣಕಾರಿ ಪ್ರಚಾರವನ್ನು ಅದರ ಸಂಘಟನಾ ಕಾರ್ಯಗಳನ್ನು ಎದುರಿಸಬಲ್ಲರು.

ಇದನ್ನು ಓದಿ: ಭಾರತೀಯರಿಗೆ; ಜೀವನವೇ ಜಾತಿ, ಜಾತಿಯೇ ಜೀವನ

ಕಾಂಗ್ರೆಸ್, ಜೆಡಿಎಸ್ ನಂತಹ ಬೇರೆ ಪಕ್ಷಗಳಿಗೆ ಅದು ತುಂಬಾ ಕಷ್ಟ ಸಾಧ್ಯ ಎಂದು ಚುನಾವಣಾ ತಜ್ಞರೊಬ್ಬರು ಇತ್ತೀಚಿಗೆ ಹೇಳಿದರು. ಬಿಜೆಪಿ ರಾಜಕೀಯ ಪ್ತಭಾನದ ಜೊತೆಗೆ ಸಂಘ ಪರಿವಾರದ ಸುಸಂಘಟಿತ ಜಾಲವೇ ಇದೆ. ಮೇಲಾಗಿ ಅಪಾರ ಪ್ರಮಾಣದ ಹಣಕಾಸು ಮತ್ತು ಮಾನವ ಇತ್ಯಾದಿ ಸಂಪನ್ಮೂಲಗಳ ವ್ಯವಸ್ಥೆ ಇದೆ ಎನ್ನುವುದು ಆ ಮಾತಿಗೆ ಒಂದು ಮೂಲ ಆಧಾರ ಅಂಶ. ಎಲ್ಲಾ ಹಂತಗಳ ಸರಕಾರಿ ಆಡಳಿತ ಯಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಅದು ಬಳಸುತ್ತಿದೆ. ವಿಶೇಷವಾಗಿ, ಅತ್ಯಂತ ಆಧುನಿಕ ತಂತ್ರಜ್ಞಾನವನ್ನು ಮತ್ತು ನಿರ್ದಿಷ್ಟ ನಿಖರ ಮಾಹಿತಿಗಳನ್ನು ಸಂಗ್ರಹಿಸುತ್ತಾ, ತಳಮಟ್ಟದಲ್ಲಿಯೂ ಬೀದಿ ಬೀದಿಗಳ ಹಂತದಲ್ಲಿಯೂ ರೂಪಿಸಿದ ತಂತ್ರಕ್ಕೆಅನುಗುಣವಾಗಿ ಕಾರ್ಯ ನಡೆಸುತ್ತಿರುವುದು ಬಿಜೆಪಿಯೇ ಎಂಬುದು ಒಂದು ಒಳ ಅವಲೋಕನ. ಕರ್ನಾಟಕದ ಜನ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತಿದ್ದಾರೆ ಎನ್ಮುವುದು ಸ್ಪಷ್ಟ. ಆದರೆ ಅದನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸುವುದು, ಚುನಾವಣಾ ರಾಜಕೀಯ ತಂತ್ರ ಹೆಣೆಯುವುದು, ಅದನ್ನು ಕಟಿ ಬದ್ಧವಾಗಿ ಕಾರ್ಯಗತಗೊಳಿಸುವುದು ಒಂದು ಬಹುದೊಡ್ಡ ಸವಾಲು ಎಂಬುದು ನನ್ನೊಂದಿಗೆ ಮಾತನಾಡಿದ ಅವರ ಅಭಿಮತ. ಅವರ ಈ ಅಭಿಪ್ರಾಯವನ್ನು ಅಷ್ಟು ಸುಲಭದಲ್ಲಿ ತಳ್ಳಿ ಹಾಕುವಂತೆ ಇಲ್ಲ. ಯಾಕೆಂದರೆ ಭಾರತದ ಹಲವಾರು ರಾಜ್ಯಗಳ ಚುನಾವಣಾ ಪೂರ್ವ ಹಾಗೂ ನಂತರದಲ್ಲಿ ಸ್ಥಳಮಟ್ಟದ ಕಾರ್ಯ ವಿಶ್ಲೇಷಣೆ ಮತ್ತು ರಾಜಕೀಯ ತಂತ್ರಗಳನ್ನು ರೂಪಿಸುವುದರಲ್ಲಿ ಪಾಲ್ಗೊಂಡ ಅನುಭವ ಇರುವವರು.

* * *

ಅಡಕತ್ತರಿಯಲ್ಲಿ ಯಡ್ಯೂರಪ್ಪ!

ಕರ್ನಾಟಕದಲ್ಲಿ ಬಿಜೆಪಿಯು ಸಹ ಚುನಾವಣಾ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಈ ಚುನಾವಣೆ ಯಾರ ನಾಯಕತ್ವದಲ್ಲಿ ನಡೆಯಬೇಕು ಮತ್ತು ನಡೆಯಲಿದೆ ಎನ್ನುವುದರ ಸುತ್ತ ಅನೇಕ ಕುತೂಹಲ ಚರ್ಚೆಗಳು ನಡೆದಿದ್ದವು. ಚುನಾವಣೆಯ ಪ್ರಚಾರ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವಹಿಸಬಹುದು ಎನ್ನುವ ಮಾತುಗಳು ಇದ್ದವು. ಆ ಮೂಲಕ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಮತ್ತು ಪ್ರಾಮುಖ್ಯತೆಯನ್ನು ಹಂತ ಹಂತವಾಗಿ ಕಳೆಯಲಾಗುತ್ತಿದೆ ಎನ್ನುವ ಭಾವನೆಗಳು ಸ್ವತಃ ಯಡಿಯೂರಪ್ಪನವರಲ್ಲಿ ಮನೆ ಮಾಡಿಕೊಂಡಿರುವುದನ್ನು ಎಲ್ಲರೂ ಕಂಡಿದ್ದಾರೆ.

ಇದನ್ನು ಓದಿ: ಬಜೆಟ್‌ ಅಧಿವೇಶನದಲ್ಲಿ ರಾಜಕೀಯ ಭಾಷಣ: ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್‌ ಶಾಸಕರ ಆಕ್ರೋಶ

ಯಡಿಯೂರಪ್ಪನವರನ್ನು ಬಿಟ್ಟು ಚುನಾವಣೆ ನಡೆಸಲು ಬಿಜೆಪಿ ಹೋದಲ್ಲಿ ಅದು ತಿರುಗುಬಾಣವಾಗಲಿದೆ ಎನ್ನುವ ಅಂಶವನ್ನು ಬಿಜೆಪಿ ನಾಯಕತ್ವ ಗಮನಿಸದೇ ಇಲ್ಲ. ಹಾಗಾಗಿ ಲಿಂಗಾಯತರನ್ನು ಹಿಡಿದಿಟ್ಟುಕೊಳ್ಳಲು ಯಡಿಯೂರಪ್ಪನವರಿಗೆ ಮುಖ್ಯಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆಗಳನ್ನು ಹರಿಯ ಬಿಡಲಾಗಿತ್ತು. ರಾಜ್ಯದಲ್ಲಿನ ವಿಜಯ ಸಂಕಲ್ಪ ಯಾತ್ರೆಯ ಸಭೆಗಳಿಗೆ ಬಿಎಸ್ ವೈ ಅವರನ್ನು ಕರೆದೊಯ್ಯಲಾಗಿತ್ತು. ಆದರೆ ಇದೀಗ ಪ್ರಕಟಗೊಂಡಿರುವ ಚುನಾವಣಾ ಪ್ರಚಾರ ಸಮಿತಿಯ ನೇತೃತ್ವವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ವಹಿಸಲಿದ್ದಾರೆ. ಈ ಸಮಿತಿಗೆ ಯಡಿಯೂರಪ್ಪನವರು ಒಬ್ಬ ಸದಸ್ಯರು. ಅಂದರೆ ಬಿಜೆಪಿಯ ಹೈಕಮಾಂಡ್ ಮತ್ತು ಸಂಘ ಪರಿವಾರದ ತಿರ್ಮಾನ ಬಿ ಎಸ್ ಯಡಿಯೂರಪ್ಪನವರಿಗೆ ಖಂಡಿತಕ್ಕೂ ಒಂದು ಶಾಕ್! ಆದರೆ ಅವರ ಮಗ ಬಿ.ವೈ.ವಿಜಯೇಂದ್ರರವರನ್ನು ಸದಸ್ಯರನ್ನಾಗಿ ಮಾಡಿರುವುದು ಪ್ರಾಶಸ್ತ್ಯ ನೀಡಿದಂತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದೇನಿದ್ದರೂ ಖಂಡಿತಕ್ಕೂ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡಲು ಸಿದ್ಧವಿಲ್ಲ ಎನ್ನುವುದು ಸ್ಪಷ್ಟ.

ಇದನ್ನು ಓದಿ: ಬಿಜೆಪಿ ಮನೆ ತುಂಬೆಲ್ಲ ಹಗರಣ

ಇದು ಅವರಿಗೆ ಮುಜುಗರವನ್ನು ತರಬಹುದು. ಇಂಥ ಇರುಸು ಮುರಿಸಿನ ಸ್ಥಿತಿಯಲ್ಲಿ ಯಡಿಯೂರಪ್ಪನವರು ಚುನಾವಣಾ ಸಂದರ್ಭದಲ್ಲಿ ಬೇರೆ ಪಕ್ಷಗಳೊಂದಿಗೆ ನಂಟು ಬೆಳೆಸಿಕೊಳ್ಳುವ ಒಂದು ಪ್ರಮುಖ ರಾಜಕೀಯ ತಂತ್ರಾತ್ಮಕ ಆಟ ಆಡಬಹುದು ಎನ್ನುವ ಅನುಮಾನವಂತೂ ಹೈಕಮಾಂಡಿಗೆ ಇದ್ದೇ ಇದೆ. ಯಡಿಯೂರಪ್ಪನವರು ಮನಃಪೂರ್ವಕವಾಗಿ ಚುನಾವಣೆಯ ಪ್ರಚಾರ ಮತ್ತು ಸಿದ್ಧತೆಯ ಕಾರ್ಯಗಳಲ್ಲಿ ತೊಡಗದೆ ಹೋಗಬಹುದು ಎನ್ನುವ ಅನುಮಾನವೂ ಇದೆ. ಹೀಗಾಗಿ ಅವರನ್ನು ಒಲಿಸಿಕೊಳ್ಳುತ್ತಿರುವಂತೆ, ಹೊಗಳುತ್ತಲೂ ಇರುವಂತೆ ತೋರುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವುದು ಕಾಣುತ್ತದೆ. ಆದರೆ ಅದೇ ಹೊತ್ತಿನಲ್ಲಿ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರ ಮೇಲೆ ಬೆದರಿಕೆಯ ಒತ್ತಡವನ್ನು ಸೃಷ್ಟಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿಯ ಹಿಂದೆ ಯಡಿಯೂರಪ್ಪನವರನ್ನು ಬೆದರಿಸುವ ಒಂದು ಉದ್ದೇಶವು ಇದೆ ಎನ್ನಲಾಗಿದೆ. ಮಾಡಾಳ್ ಮೇಲಿನ ರೈಡ್ ಮೂಲಕ ಯಡಿಯೂರಪ್ಪನವರಿಗೆ ಕೊಟ್ಟಿರುವ ಒಂದು ಎಚ್ಚರಿಕೆಯ ಸಂದೇಶ ಎನ್ನಲಾಗುತ್ತಿದೆ. ಬಿಜೆಪಿ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಅಬ್ಬರದ ಪ್ರಚಾರ, ಅಪಾರ ಹಣ ಸಂಪನ್ಮೂಲಗಳ ವಿನಿಯೋಗ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಯಂತ್ರದ ದುರ್ಬಳಕೆ, ಕೆಳಹಂತಗಳಲ್ಲಿ ಪ್ರಾದೇಶಿಕವಾಗಿ ಹಾಗೂ ಸ್ಥಳೀಯವಾದ ರಾಜಕೀಯ ತಂತ್ರಗಾರಿಕೆ ಬಳಿಕವೂ ಬಹುಮತವನ್ನು ಪಡೆದೇ ಪಡೆಯುತ್ತೇವೆ ಎನ್ನುವ ವಿಶ್ವಾಸ ಬಿಜೆಪಿ ನಾಯಕರಲ್ಲಿ ಕಾಣುವುದಿಲ್ಲ. ಹೀಗಾಗಿಯೇ ಎಲ್ಲಾ ರೀತಿಯ ವರಸೆ, ಒತ್ತಡ, ಬೆದರಿಕೆ ತಂತ್ರ, ಕುತಂತ್ರಗಳಿಗೆ ಎಳಸಿದಂತೆ ಕಾಣುತ್ತದೆ.

***

ಮಿಷನ್ 150 ರ ತಂತ್ರ ಜಾರಿಯಲ್ಲಿ

ಉತ್ತರ ಕರ್ನಾಟಕದಲ್ಲಿ ತಮ್ಮ ಬಲ ಕುಗ್ಗುವ ಅಂದಾಜು ಇರುವ ಬಿಜೆಪಿಯು ಮತ ವಿಭಜನೆಗೆ ಜನಾರ್ದನ ರೆಡ್ಡಿಯವರನ್ನು ಬಳಸುತ್ತಿದೆಯೇ ಎನ್ನುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.

ಇದನ್ನು ಓದಿ: ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ-ಮಂಡ್ಯ ಜನತೆಗೆ ಬಗೆಯುತ್ತಿರುವ ದ್ರೋಹ: ಸಿಪಿಐ(ಎಂ)

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಹೈಕಮಾಂಡ್ ನೀಡುತ್ತಿರುವ ಗಮನ ತುಂಬಾ ಹೆಚ್ಚಿದೆ. ಈ ವಾರದಲ್ಲಿ ಪಕ್ಷೇತರ ಸಂಸದರಾಗಿದ್ದ ಸುಮಲತಾ ಅಂಬರೀಶ್ ರವರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ತಾಂತ್ರಿಕವಾಗಿ, ಅವರು ಬಿಜೆಪಿ ಪಕ್ಷದ ಸದಸ್ಯರಲ್ಲದೆ ಇದ್ದರೂ ಬಿಜೆಪಿ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲಿಸುವುದಾಗಿಯೂ, ಈ ಚುನಾವಣೆಯಲ್ಲಿ ಸಂಪೂರ್ಣವಾಗಿ ಬಿಜೆಪಿಯ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸಿದ್ದಾರೆ. ನಿಜಾರ್ಥದಲ್ಲಿ ಬಿಜೆಪಿಯನ್ನು ಸೇರಿದ್ದಾರೆ. ಆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ರವರು ತಮ್ಮ ಇಡೀ ಟೀಕಾ ಪ್ರಹಾರವನ್ನು ಜೆಡಿಎಸ್ ವಿರುದ್ಧವೇ ನಡೆಸಿದರು. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಮತ್ತು ಅಂಬರೀಶ್ ನಿಧನದ ನಂತರದ ಅನುಕಂಪದ ಆಧಾರದಲ್ಲಿ ಕಾಂಗ್ರೆಸ್ಸಿನ ಕೆಲವು ಶಾಸಕರು, ಅವರ ಬೆಂಬಲಿಗರು ಸುಮಲತಾ ರವರನ್ನು ಬೆಂಬಲಿಸಿದ್ದರು ಎನ್ನುವ ಒಂದು ಕಾರಣವೂ ಕಾಂಗ್ರೆಸ್ಸನ್ನು ಟೀಕಿಸದೆ ಉಳಿಸಿರಲು ಒಂದು ಕಾರಣ ಎನ್ನಲಾಗುತ್ತಿದೆ.

ಹಾಗೆ ಬೆಂಬಲಿಸಿದವರು ಈಗಲೂ ಮುಂದೆ ತಮ್ಮನ ಬೆಂಬಲಿಸಬೇಕು ಎನ್ನುವುದು ಮತ್ತು ಈ ಚುನಾವಣೆಯಲ್ಲಿ ಒಂದಿಷ್ಟು ಜನ ಬಿಜೆಪಿಗೆ ಬೆಂಬಲಿಸಬಹುದು ಎನ್ನುವುದು ಒಂದು ಲೆಕ್ಕಾಚಾರ ಇರಬಹುದು. ಅಂತೂ, ಬಿಜೆಪಿ ಮಂಡ್ಯ, ಹಾಸನ, ಮೈಸೂರು ಈ ಭಾಗಗಳಲ್ಲಿ ತನ್ನ ಆಕ್ರಮಣಕಾರಿ ಧಾಳಿಯನ್ನು ಮುಂದುವರಿಸಿದೆ. ಹೀಗಿದ್ದಾಗ್ಯೂ ಬಿಜೆಪಿಗೆ ಅಷ್ಟು ಸುಲಭದಲ್ಲಿ ಆ ಭಾಗದಲ್ಲಿ ನೆಲೆ ಊರುವುದು ಕಷ್ಟ ಎನ್ನಲಾಗುತ್ತಿದೆ. ಬಿಜೆಪಿಗೆ ಮಂಡ್ಯ ಒಳಗೊಂಡು ದಕ್ಷಿಣ ಕರ್ನಾಟಕದಲ್ಲಿ ತೀವ್ರ ಪ್ರತಿರೋಧ ಇರುವುದು ವಾಸ್ತವ.

ಇವೆಲ್ಲವುಗಳ ಹೊರತಾಗಿಯೂ ಈ ಭಾಗದಲ್ಲಿ ಬಿಜೆಪಿ ಸಂಘ ಪರಿವಾರಗಳ ಕೋಮುವಾದಿ ವಿಷ ವಿಸ್ತರಣೆಯ ಅಪಾಯ ಹೆಚ್ಚಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *