ಎನ್‌ಎಸ್‌ಇ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ನವದೆಹಲಿ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ) ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಭಾನುವಾರ ತಡರಾತ್ರಿ  ಸಿಬಿಐ (ಕೇಂದ್ರೀಯ ತನಿಖಾ ದಳ) ಬಂಧಿಸಿದೆ. 2013ರಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಚಿತ್ರಾ ರಾಮಕೃಷ್ಣ 2014ರಿಂದ 2016ರವರೆಗೆ ಎನ್​ಎಸ್​ಇಯ ಅನೇಕ ಗೌಪ್ಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸೆಬಿ ಹೇಳಿತ್ತು.

ಚಿತ್ರಾ ರಾಮಕೃಷ್ಣರನ್ನು ದೆಹಲಿಯಲ್ಲಿ ಬಂಧಿಸಿ ನಂತರ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು ಸಿಬಿಐ ಕೇಂದ್ರ ಕಚೇರಿಯ ಲಾಕಪಿನಲ್ಲಿ ಇರಿಸಲಾಗಿದೆ.

2013ರಿಂದ 2016ರವರೆಗೆ ಎನ್​ಎಸ್​ಇ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ಚಿತ್ರಾ ರಾಮಕೃಷ್ಣ ಹಿಮಾಲಯದಲ್ಲಿರುವ ಒಬ್ಬ ಯೋಗಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎನ್​ಎಸ್​ಇಗೆ ಸಂಬಂಧಿಸಿದ ಹಲವು ಗೌಪ್ಯ ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಆದರೆ ಆ ಯೋಗಿ ಯಾರು, ಅವರ ಮುಖ ಹೇಗಿದೆ ಎಂಬುದು ಸ್ವತಃ ಚಿತ್ರಾರಿಗೂ ಗೊತ್ತಿರಲಿಲ್ಲ.

ಈ ಪ್ರಕರಣ ಬೆಳಕಿಗೆ ಬಂದಿದ್ದು 2022ರ ಫೆಬ್ರವರಿಯಲ್ಲಿ. ಮಾರುಕಟ್ಟೆ ನಿಯಂತ್ರಕವಾದ ಸೆಕ್ಯೂರಿಟಿಸ್​ ಆ್ಯಂಡ್ ಎಕ್ಸ್​ಚೇಂಜ್​ ಬೋರ್ಡ್​ ಆಫ್​ ಇಂಡಿಯಾ (ಸೆಬಿ) ತನಿಖೆಯಿಂದ ಬಯಲುಗೊಂಡಿದೆ. ಅತಿದೊಡ್ಡ ಷೇರು ವಿನಿಮಯ ಕೇಂದ್ರವಾದ ಎನ್​ಎಸ್​ಇಯಲ್ಲಿ 2010ರಿಂದ 2015ರ ಅವಧಿಯಲ್ಲಿ  ಹಲವು ಅಕ್ರಮ, ಅನ್ಯಾಯಗಳು ನಡೆದಿವೆ ಎಂದು ತಿಳಿದು ಬಂದಿದೆ.

ಚಿತ್ರಾ ರಾಮಕೃಷ್ಣ ಅವರ ಇ-ಮೇಲ್​ ಮೂಲಕ ಸಂವಹನ ನಡೆಸುತ್ತಿದ್ದುದಕ್ಕೆ ದಾಖಲೆಗಳ ಪುರಾವೆ ಇದೆ ಎಂದೂ ಸೆಬಿ ಹೇಳಿತ್ತು. ಅದರ ಬೆನ್ನಲ್ಲೇ ಅವರ ಮುಂಬೈ ಮನೆ ಮೇಲೆ ಆದಾಯ ತೆರಿಗೆ ದಾಳಿಯೂ ಆಗಿತ್ತು.

ಚಿತ್ರಾ ರಾಮಕೃಷ್ಣ ವಿರುದ್ಧ ಸಿಬಿಐ ತನಿಖೆ ಕೈಗೊಂಡಿದ್ದು, ಅವರ ಆಡಳಿತ ಅವಧಿಯಲ್ಲಿ ನಡೆದ ಕೋ ಲೊಕೇಶನ್​ ಎಂಬ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಿದೆ. ಎನ್‌ಎಸ್‌ಇಯ ಹೈ-ಸ್ಪೀಡ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅಥವಾ ಆಲ್ಗೋ ಟ್ರೇಡಿಂಗ್ ಮತ್ತು ಕೋ-ಲೊಕೇಶನ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿ, ಕೆಲವು ದಲ್ಲಾಳಿಗಳು ಅನ್ಯಾಯದ ಮಾರ್ಗದಲ್ಲಿ ಬೇರೆಯವರೊಂದಿಗೆ ಹೆಚ್ಚಿನ ಲಾಭವನ್ನು ಗಳಿಸಿದ ಕೋ-ಲೊಕೇಶನ್ ಹಗರಣದ ತನಿಖೆಯನ್ನು ಸಿಬಿಐ 2017ರಲ್ಲೇ ಕೈಗೆತ್ತಿಕೊಂಡಿತ್ತು. 2018ರಲ್ಲಿ ಎಫ್​ಐಆರ್ ದಾಖಲು ಮಾಡಲಾಗಿತ್ತು. ಅಲ್ಲದೆ, ಚಿತ್ರಾ ರಾಮಕೃಷ್ಣ ವಿರುದ್ಧ ಲುಕೌಟ್ ನೋಟಿಸ್​ ಕೂಡ ಜಾರಿ ಮಾಡಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸ್ಟಾಕ್ ಬ್ರೋಕರ್ ಸಂಜಯ್ ಗುಪ್ತಾ “ಎನ್‌ಎಸ್‌ಇಯ ಸಹ-ಸ್ಥಳ ಸೌಲಭ್ಯಕ್ಕೆ ಪ್ರವೇಶ” ಹೊಂದಿದ್ದಾರೆ ಎಂದು ಆರೋಪಿಸಿದರು. ಇದು ಗುಪ್ತಾ ಅವರ ಸಂಸ್ಥೆಯಾದ ಓಪಿಜಿ ಸೆಕ್ಯುರಿಟಿ ಲಿಮಿಟೆಡ್‌ಗೆ ಮಾರುಕಟ್ಟೆ ಡೇಟಾವನ್ನು ಬೇರೆಯವರಿಗಿಂತ ಮೊದಲು ಪ್ರವೇಶಿಸಲು ಅನುವು ಮಾಡಿಕೊಡುತ್ತಿತ್ತು ಎಂದಿದ್ದಾರೆ.

ಚಿತ್ರಾ ರಾಮಕೃಷ್ಣ ಬಂಧನಕ್ಕೂ ಮುನ್ನ ಸತತ ಮೂರು ದಿನಗಳ ಕಾಲ ಚಿತ್ರಾ ರಾಮಕೃಷ್ಣ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ನಿವಾಸದಲ್ಲಿ ಕೂಡ ಶೋಧ ಕಾರ್ಯ ಮುಂದುವರಿಸಲಾಗಿತ್ತು. ಆ ಸಮಯದಲ್ಲಿ ಅವರು ಸರಿಯಾದ ಉತ್ತರ ನೀಡಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಫೆಬ್ರವರಿ 25ರಂದು ಮಾಜಿ ಸಿಇಒ ಆನಂದ್‌ ಸುಬ್ರಹ್ಮಣಿ ಅವ​ರನ್ನು ಸಿಬಿಐ ಚೆನ್ನೈನಲ್ಲಿ ಬಂಧಿಸಿತ್ತು. ಬಳಿಕ ನ್ಯಾಯಾಲಯ ಸುಬ್ರಮಣಿಯನ್ ಅವರನ್ನು ಮಾರ್ಚ್ 6 ರವರೆಗೆ ಸಿಬಿಐ ಕಸ್ಟಡಿಗೆ ನೀಡಿತ್ತು. ಏಪ್ರಿಲ್ 2013 ರಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ  ಸೇರಿದ ಸುಬ್ರಮಣಿಯನ್ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು.

ಆ ಅಪರಿಚಿತ ಯೋಗಿ ಆದೇಶದ ಮೇರೆಗೇ ಆನಂದ್​ ಸುಬ್ರಹ್ಮಣಿ ಅವರನ್ನು ಚಿತ್ರಾ ಎನ್​ಎಸ್​ಇಗೆ ನೇಮಕ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಆ ಯೋಗಿ ಬೇರೆ ಯಾರೂ ಅಲ್ಲ, ಆನಂದ್​ ಸುಬ್ರಹ್ಮಣಿಯನ್​ ಅವರೇ ಯೋಗಿಯಂತೆ ನಟಿಸಿದ್ದರು ಎಂಬುದು ಸಿಬಿಐಗೆ ಅನುಮಾನ ಮೂಡಿದೆ.

ಷೇರುಪೇಟೆಯ ಯಾವುದೇ ಹೆಚ್ಚಿನ ಅನುಭವ ಇಲ್ಲದೇ ಇದ್ದರೂ ಸುಬ್ರಮಣಿಯನ್‌ ಅವರನ್ನು ಚಿತ್ರಾ ಅವರು ಹಿರಿಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದರು. ಜೊತೆಗೆ ಅವರಿಗೆ ಹಲವು ಬಾರಿ ಪದೋನ್ನತಿ ನೀಡಲಾಗಿತ್ತು. ವಿನಾಕಾರಣ ವೇತನ ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಸುಬ್ರಮಣಿಯನ್‌ ಉನ್ನತ ಹುದ್ದೆ ವಹಿಸಿಕೊಂಡ ಅವಧಿಯಲ್ಲಿ ಎನ್‌ಎಸ್‌ಇದಲ್ಲಿ ಹಲವು ವಂಚನೆಗಳು ನಡೆದಿದ್ದವು.

Donate Janashakthi Media

Leave a Reply

Your email address will not be published. Required fields are marked *