ಚಿತಾಗಾರಗಳು ಹೌಸ್‌ಫುಲ್ ಶವಗಳು ಹೊರಟಿವೆ ಮೆರವಣಿಗೆಯಲ್ಲಿ!

ನಿತ್ಯಾನಂದಸ್ವಾಮಿ

ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಚಿತ್ರಮಂದಿರಗಳು ಹೌಸ್‌ಪುಲ್ ಆಗಿ ಬಂದ್ ಆಗುತ್ತಿರುವಂತೆ ಚಿತಾಗಾರಗಳು ಹೌಸ್‌ಫುಲ್ ಎಂದು ಫಲಕ ಹಾಕಿ ಕೊಂಡಿದ್ದವಂತೆ! ಇದು ನಡೆದದ್ದು ಚಾಮರಾಜಪೇಟೆಯ ಟಿ.ಆರ್.ಮಿಲ್ ಸಮೀಪದ ಸ್ಮಶಾನದಲ್ಲಿ! ಇಲ್ಲಿ ನಿತ್ಯ 20 ಶವಗಳ ಅಂತ್ಯಕ್ರಿಯೆ ಮಾಡಲಾಗುತಿತ್ತು. ಅಂದು ಮಧ್ಯಾಹ್ನದ ವೇಳೆಗೆ 19 ಶವಗಳ ದಹನಕ್ಕೆ ಬುಕ್ಕಿಂಗ್ ಆಗಿದ್ದರಿಂದ ಗೇಟಿಗೆ ಹೌಸ್ ಪುಲ್ ಫಲಕ ಹಾಕಲಾಗಿತ್ತು. ಎಷ್ಟು ವಿಚಿತ್ರವಾದ ವಿದ್ಯಮಾನ! ಇಲ್ಲಿಯ ಬಯಲು ಚಿತಾಗಾರದಲ್ಲಿ ದಿನದ 3 ಪಾಳಿಗಳಲ್ಲಿ ಸುಮಾರು 78 ಕೋವಿಡ್ ಶವಗಳ ದಹನ ಮಾಡಲಾಗುತಿತ್ತು.

ಇಲ್ಲಿಯವರೆಗೆ ಸಿನಿಮಾ ಮಂದಿರಗಳ ಹೊರಗೆ ಕಾಣುತ್ತಿದ್ದ ಹೌಸ್‌ಫುಲ್ ಫಲಕ ಈಗ ಸ್ಮಶಾನಗಳ ಗೇಟ್‌ನಲ್ಲಿಯೂ ಕಾಣುವ ಪರಿಸ್ಥಿತಿ ಒದಗಿ ಬಂದಿದೆ. ಈ ಚಿತಾಗಾರದಲ್ಲಿನ ಬಯಲು ಚಿತಾಗಾರಗಳಲ್ಲಿ 58 ಶವಗಳ ದಹನ ಮಾಡಲು ಅವಕಾಶವಿದೆ. ಆದರೂ ಶವಗಳನ್ನು ಹೊತ್ತು ತರುವ ಅಂಬುಲೆನ್ಸ್‌ಗಳ ಸರತಿ ಸಾಲು ಕರಗುತ್ತಿಲ್ಲ. ಇಲ್ಲಿ ಕೋವಿಡ್‌ಗೆ ಒಳಗಾಗಿ ಸಾಯುತ್ತಿರುವವರಿಗಾಗಿ ಬಯಲು ಚಿತಾಗಾರ ನಿರ್ಮಿಸಲಾಗಿದ್ದು ಅಲ್ಲಿ ಶವಗಳನ್ನು ಸುಡುವ ಒಲೆಗಳನ್ನು ಹಾಕಲಾಗಿದೆ. ಪ್ರತಿನಿತ್ಯ ಕೋವಿಡ್ ಶವಗಳು ಬರುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲು ಬಂದವರಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ. ಅಂಬುಲೆನ್ಸ್ ಚಾಲಕರು ಅಥವಾ ಮೃತರ ಕುಟುಂಬ ಸದಸ್ಯರು ಟೋಕನ್ ಪಡೆದು ತಮ್ಮ ಪಾಳಿಗಾಗಿ ಕಾಯುವರು. ಶವಗಳ ಸಂಖ್ಯೆ ಲೆಕ್ಕವಿಲ್ಲದಷ್ಟು ಹೆಚ್ಚಾಗುತ್ತಿದ್ದು ಚಿತಾಗಾರ ಹೌಸ್‌ಪುಲ್ ಆಗಿದೆ ಎಂದು ಗೇಟಿನಲ್ಲಿ ಫಲಕ ತೂಗುಹಾಕಬೇಕಾದ ಪರಿಸ್ಥಿತಿ ಬಂದಿದೆ. ಎಂತಹ ಕ್ರೂರ ವ್ಯವಸ್ಥೆ! ವ್ಯವಸ್ಥೆಯ ಅವ್ಯವಸ್ಥೆ!

ಇದನ್ನು ಓದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಖಾಸಗೀಕರಣ

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಾಯುತ್ತಿರುವ ಕೋವಿಡ್ ಸೊಂಕಿತರ ಪರಿಸ್ಥಿತಿ ಇಷ್ಟೊಂದು ಆಘಾತಕಾರಿಯಾಗಿದ್ದರೆ ದೇಶದ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಇನ್ನೊಂದು ರೀತಿಯಲ್ಲಿ ಅನಾವರಣೆಗೊಳ್ಳುತ್ತಿದೆ. ದೆಹಲಿಯಲ್ಲಿ ಪೊಲೀಸರು ರಾಜ್ಯ ಸರ್ಕಾರದ ಮಾತು ಕೇಳುವುದಿಲ್ಲ. ಅಲ್ಲಿ ಪ್ರಧಾನಿ ಮೋದಿರವರ ಆದೇಶ ಮಾತ್ರ ಜಾರಿಯಲ್ಲಿರುತ್ತದೆ. ಮೋದಿ ಪೊಲೀಸರು ದೆಹಲಿಯಲ್ಲಿ ಕಠಿಣವಾದ ಲಾಕ್‌ಡೌನ್ ಜಾರಿಗೆ ತಂದಿದ್ದಾರೆ. ಅಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗಳನ್ನು, ಮೆರವಣಿಗೆಗಳನ್ನು ನಿಷೇಧಿಸಿದ್ದಾರೆ. ಇಂತಹ ಪ್ರತಿಬಂಧಗಳ ಮೂಲಕ ಜನರ ಸಂವಿಧಾನಾತ್ಮಕ ಹಕ್ಕುಗಳನ್ನು ತಡೆಹಿಡಿಯಲಾಗುತ್ತಿದೆ. ದೇಶದಲ್ಲಿ ಮೋದಿ ನೇತೃತ್ವದಲ್ಲಿ ತುರ್ತುಪರಿಸ್ಥಿತಿಯೊಂದನ್ನು ಹೇರಲಾಗಿದೆ.

ಆದರೆ ಅಲ್ಲಿ ಕೋವಿಡ್ ಶವಗಳು ಮೋದಿ ಆದೇಶಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿವೆ. ಇಲ್ಲಿ ಮಾನವ ಶವಗಳು, ಚಿತಾಗಾರದ ಹೊರಗಡೆ ಸರತಿ ಸಾಲುಗಳಲ್ಲಿ ನಿಲ್ಲುತ್ತವೆ. ಜನ ತಮಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಲು ಅಂಗಡಿಗಳ ಎದುರು ಸಾಲಾಗಿ ನಿಲ್ಲುವುದನ್ನು ನಾವು ನೋಡುತ್ತಿರುತ್ತೇವೆ. ಚಿತಾಗಾರಗಳ ಮುಂದೆ ಅಂತ್ಯಸಂಸ್ಕಾರಕ್ಕಾಗಿ ಶವಗಳನ್ನು ಸರತಿಯಲ್ಲಿ ಇರಿಸಿದ್ದು ಯಾರೂ ಇಲ್ಲಿಯವರೆಗೆ ಕಂಡರಿಯಲಿಕ್ಕಿಲ್ಲ. ಇದು ಸಹ ಕೋವಿಡ್ ಕರಾಳತೆಯ ಒಂದು ಚಿತ್ರವಾಗಿದೆ.

ಇದನ್ನು ಓದಿ: ದೇಶದಲ್ಲಿ ಕೋವಿಡ್‌ಗಿಂತ ಭೀಕರ ಮತ್ತು ಗಂಭೀರ ಪರಿಸ್ಥಿತಿ

ಈ ವಿದ್ಯಮಾನದ ಹಿಂದೆ ಅನೇಕ ಹೃದಯ ವಿದ್ರಾವಕ ಸಂಗತಿಗಳಿವೆ. ಕುಷ್ಠಗಿಯಲ್ಲಿ ವೃದ್ಧೆಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿದ್ದಳು. ಯಾರೊ ಅವಳ ಮೃತದೇಹವನ್ನು ಗಮನಿಸಿರಲಿಲ್ಲ. ಎರಡನೇ ದಿನ ಆ ಮಹಿಳೆಯ ಶವವನ್ನು ಬಿಡಾಡಿ ನಾಯಿಗಳು ಎಳೆದಾಡಿ ಶವದ ಕೆಲವು ಭಾಗಗಳನ್ನು ತಿಂದುಹಾಕಿದ್ದವು.

ಕೋವಿಡ್ ದಾಳಿ ಮುಂದುವರೆದಿದೆ. ಈಗಾಗಲೇ ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ. ಈ ಸಂಖ್ಯೆ ಹೆಚ್ಚಾಗುವ ಲಕ್ಷಣಗಳೇ ಕಾಣುತ್ತಿವೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮಾತ್ರ ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಬಡವರಿಗೆ ಜೀವ ರಕ್ಷಕ ಔಷಧಿಗಳ ಉಚಿತ ಪೂರೈಕೆಯ ವ್ಯವಸ್ಥೆ ಇಲ್ಲ. ಆಮ್ಲಜನಕದ ಪೂರೈಕೆ ಇಲ್ಲದೆ ಅಸಹಾಯಕರು ಅಸಂಖ್ಯ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಜನರ ಜೀವ ರಕ್ಷಣೆಯ ಜವಾಬ್ದಾರಿಯನ್ನು ಒಪ್ಪಿಕೊಳ್ಳದ ಅನಿಷ್ಟ ಸರ್ಕಾರಗಳನ್ನು ನಾವು ಸಹಿಸಿಕೊಂಡಿದ್ದೇವೆ. ಇನ್ನೆಷ್ಟು ಜನರ ಪ್ರಾಣ ಹೋಗಬೇಕು ಈ ಸರ್ಕಾರಗಳು ಎಚ್ಚರಗೊಳ್ಳಲು? ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟುಗಳು ತಮ್ಮ ಆತಂಕ ವ್ಯಕ್ತಪಡಿಸಿವೆ. ಆದರೆ ಜನ ಸೇವೆಗಾಗಿ ಪ್ರಮಾಣಮಾಡಿ ಅಧಿಕಾರದ ಗದ್ದುಗೆಯನ್ನು ಅಲಂಕರಿಸಿದವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿಲ್ಲ. ಬದುಕಿನ ಹಕ್ಕಿಗಾಗಿ ಎಲ್ಲಾ ಕಾನೂನು-ಅಡೆತಡೆಗಳನ್ನೂ ಮೀರಿ ಹೋರಾಟ ನಡೆಸುವುದೊಂದೇ ಉಳಿದಿರುವ ದಾರಿ.

Donate Janashakthi Media

Leave a Reply

Your email address will not be published. Required fields are marked *