ಮಾರ್ಚ್ 9ರಂದು ಮಾರ್ಕ್ಸ್‌ವಾದಿ ಚಿಂತಕ, ಸಿದ್ಧಾಂತಿ ಮತ್ತು ದುಡಿಮೆಗಾರರ ಒಡನಾಡಿ-ಐಜಾಜ್ ಅಹ್ಮದ್(81 ವರ್ಷ) ಅಮೇರಿಕದಲ್ಲಿ ನಿಧನರಾಗಿದ್ದಾರೆ. ಅವರು ವೀಸಾ ನಿರ್ಬಂಧಗಳ ಕಾರಣದಿಂದಾಗಿ ಮತ್ತು ಅನಾರೋಗ್ಯದ ಕಾರಣದಿಂದಾಗಿ ಭಾರತವನ್ನು ತೊರೆಯಬೇಕಾಯಿತು. ಆದರೂ ಕೊನೆಯ ಉಸಿರಿನ ವರೆಗೂ ಅವರು ಮನೆಗೆ ಮರಳುವ ಬಯಕೆಯನ್ನು ಹೊಂದಿದ್ದರು. ಇದು ಸಾಧ್ಯವಾಗದಿರುವುದು ಒಂದು ದುರಂತ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಹೇಳಿದೆ.
ಅವರು ಸಿಪಿಐ(ಎಂ) ನೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಭಾರತದಾದ್ಯಂತ ಹಲವಾರು ಸೆಮಿನಾರ್‌ಗಳು, ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಸಮಯವನ್ನು ನೀಡಲು ಯಾವಾಗಲೂ ಸಿದ್ಧರಿರುತ್ತಿದ್ದರು.
ಅವರೊಬ್ಬ ಅತ್ಯಂತ ಗೌರವಾನ್ವಿತ ಸಿದ್ಧಾಂತಿಯಾಗಿದ್ದರು. ಮಾರ್ಕ್ಸ್‌ವಾದೀ ಸಿದ್ಧಾಂತದ ಮೇಲೆ ಆಳುವ ವರ್ಗಗಗಳ ದಾಳಿಗಳಿಗೆ ಎದುರಾಗಿ ಸಮರ್ಥ ಉತ್ತರಗಳನ್ನು ನೀಡುವ ಅವರ ಬರವಣಿಗೆಗಳು ಹಲವಾರು ತಲೆಮಾರುಗಳಿಗೂ ಸ್ಫೂರ್ತಿ ನೀಡುವಂತವುಗಳು.
ಅವರ ನಿಧನದಿಂದ ಪ್ರಪಂಚದಾದ್ಯಂತ ಸಮಾಜವಾದವನ್ನು ನಂಬುವವವರಿಗೆ ಮತ್ತು ಅದಕ್ಕಾಗಿ ಹೋರಾಡುವವರಿಗೆ ದೊಡ್ಡ ನಷ್ಟವಾಗಿದೆ ಎಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಸಿಪಿಐ(ಎಂ) ಹೇಳಿದೆ.
ಹಿಂದುತ್ವ ಕೋಮುವಾದ, ಫ್ಯಾಸಿಸಂ, ಜಾತ್ಯತೀತತೆ ಮತ್ತು ಜಾಗತೀಕರಣದ ಜೊತೆಗೆ ಭಾರತೀಯ ಸಂದರ್ಭದಲ್ಲಿ ಮತ್ತು ಜಾಗತಿಕ ಸಂದರ್ಭದಲ್ಲೂ ಎಡಪಂಥದ ಸಾಧ್ಯತೆಗಳನ್ನು ಕುರಿತಾದ ಅವರ ಕೃತಿಗಳು ಸೈದ್ಧಾಂತಿಕ ಹೋರಾಟಗಳಲ್ಲಿ ತಲೆಮಾರುಗಳಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ.