ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಕೋಮುವಾದ ಬಿತ್ತಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರರೂಢ ಭಾರತೀಯ ಜನತಾ ಪಕ್ಷವನ್ನು ಜನಪರ ಸಂಘಟನೆಗಳು, ಎಡ ಮತ್ತು ಸಮಾನ ಮನಸ್ಕ ಪಕ್ಷಗಳು, ಸಮಾಜವಾದಿ ಧುರೀಣರು ಪ್ರಗತಿಪರ ಚಿಂತಕರು ಒಗ್ಗೂಡಿ ಸೋಲಿಸಬೇಕು ಮತ್ತು ‘ಜನಪರ ಸರ್ಕಾರ ಒಂದನ್ನು’ ರಾಜ್ಯದಲ್ಲಿ ಸ್ಥಾಪಿಸಬೇಕೆನ್ನುವುದು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಹಾಸನದ ಕೃಷಿಕ್ ಸರ್ವೋದಯ ಫೌಂಡೇಶನ್ ಸಭಾಂಗಣದಲ್ಲಿ ಲೋಹಿಯ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಚಿಂತನ ಮಂಥನ ಗೋಷ್ಟಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ದಿಕ್ಸೂಚಿ ಭಾಷಣ ಮಾಡಿದ್ದು, ರೈತ ಮುಖಂಡ ಬಡಗಲಪುರ ನಾಗೇಂದ್ರ ಆಶಯ ನುಡಿ ಮಂಡಿಸಿದರು. ಎಡಚಿಂತಕ ಭಾರತ ಕಮ್ಯೂನಿಸ್ಟ್ ಪಕ್ಷ-ಸಿಪಿಐ ರಾಜ್ಯ ಮುಖಂಡ ಸಿದ್ದನಗೌಡರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಆರ್ ಪಿ ವೆಂಕಟೇಶಮೂರ್ತಿ ಸ್ವಾಗತಿಸಿದ್ದು, ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದನ್ನು ಓದಿ: ಟಿಕೆಟ್ ಗಾಗಿ ಅಂತರ್ ಯುದ್ದಗಳು
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮೂಲಮೂಲೆಯ ಮತದಾರರನ್ನು ತಲುಪಿ ಜಾಗೃತಿಗೊಳಿಸುವ ಕಾರ್ಯ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಗರಿಕ ಸಮಾಜ ಪ್ರತಿನಿಧಿಸುವ ಹಲವು ಸಂಘಟನೆಗಳು, ವೇದಿಕೆಗಳು ಕಾರ್ಯನಿರತವಾಗಿವೆ. ಇವುಗಳ ನಡುವೆ ಸಮನ್ವಯ, ಪರಸ್ಪರ ಸಹಕಾರ ಏರ್ಪಾಡಾಗಿ ಸಂಘಟಿತ ಪ್ರಯತ್ನ ಜರುಗುವ ನಿಟ್ಟಿನಲ್ಲಿ ಶೀಘ್ರ ಸಭೆ ಕರೆದು ಚರ್ಚೆ ನಡೆಯಬೇಕು ಎಂದು ಚಿಂತನ ಮಂಥನ ಗೋಷ್ಟಿಯಲ್ಲಿ ತೀರ್ಮಾನವಾಗಿದೆ.
ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಹಲವಾರು ದಿನಗಳಿಂದ ಹೋರಾಟ ನಡೆಸುತ್ತಿರುವ ʻಸಂಯುಕ್ತ ಹೋರಾಟ ಕರ್ನಾಟಕʼ ಜೊತೆಗೆ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು) ಮತ್ತು ವಿವಿಧ ದಲಿತ ಸಂಘಟನೆಗಳನ್ನು ಒಗ್ಗೂಡಿಸಿರುವ ವೇದಿಕೆಗಳೂ ಈ ನಿಟ್ಟಿನಲ್ಲಿ ಶೀಘ್ರ ಸಭೆ ಸೇರಿ ಚರ್ಚಿಸಲು ತೀರ್ಮಾನಿಸಲಾಗಿದೆ.
ರಾಜ್ಯದ ಜನರ ನೈಜ ಸಮಸ್ಯೆಗಳು ಮತ್ತು ಆಶೋತ್ತರಗಳಿಗೆ ಸ್ಪಂದಿಸುವ ʻಜನತಾ ಪ್ರಣಾಳಿಕೆʼ ಒಂದನ್ನು ಹೊರತಂದು ಮತದಾರರ ಮುಂದಿಡಬೇಕು. ಭಾಜಪದ ‘ಒಡೆದಾಳುವ ತಂತ್ರಗಾರಿಕೆಗೆ’ ಮತದಾರರು ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತದಾರರು ಬಲಿಯಾಗದ ಹಾಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಬೇಕು. ಜೊತೆಗೆ ಪ್ರತಿಕ್ಷೇತ್ರಗಳಲ್ಲೂ ಯೋಗ್ಯ ಅಭ್ಯರ್ಥಿಗಳೇ ಆಯ್ಕೆಯಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ಹಾಸನ ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಗೋಷ್ಟಿಯ ಮೂಲಕ ಕರೆ ನೀಡಲಾಗಿದೆ.
ಇದನ್ನು ಓದಿ: ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳೋ, ಕಾಲ್ಪನಿಕವೊ?
ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ʻಚಳುವಳಿ ರಾಜಕಾರಣʼ ಸದೃಢವಾಗುವ ನಿಟ್ಟಿನಲ್ಲಿ ಚರ್ಚೆ, ಚಿಂತನ ಮಂಥನ ಮತ್ತು ಪ್ರಕ್ರಿಯೆ ಏರ್ಪಾಡಾಗುವ ನಿಟ್ಟಿನಲ್ಲಿ ಹಾಸನದ ಈ ಸಭೆ ನಾಂದಿಯಾಗಬೇಕು ಎಂದು ಎಲ್ಲಾ ಭಾಷಣಕಾರರ ಆಶಯವಾಗಿದೆ.
ಗೋಷ್ಠಿಯಲ್ಲಿ ಯು ಬಸವರಾಜ್, ರಾಜ್ಯ ಕಾರ್ಯದರ್ಶಿ (ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಶ್ರೀಕಂಠ ಮೂರ್ತಿ (ಹಿರಿಯ ಸಮಾಜವಾದಿ ಚಿಂತಕ), ಮಹಿಮಾ ಪಾಟೀಲ್ (ಜೆಡಿಯು), ಮಲ್ಲಿಗೆ ಸಿರಿಮನೆ (ಜನಶಕ್ತಿ ಸಂಘಟನೆ), ರೂಪ ಹಾಸನ (ಪರಿಸರ ಮತ್ತು ಮಹಿಳಾ ಹಕ್ಕು ಹೋರಾಟಗಾರ್ತಿ), ಎಚ್.ಕೆ. ಸಂದೇಶ್ ಮತ್ತು ಎಸ್.ಎನ್. ಮಲ್ಲಪ್ಪ (ದಲಿತ ಮುಖಂಡರು), ನಾಗೇಶ ಅರಳಕೊಪ್ಪೆ (ವಿಚಾರವಾದಿ), ಮಲ್ನಾಡ್ ಮೆಹಬೂಬ್ (ಪತ್ರಕರ್ತ), ಮುಬಷಿರ್ ಅಹಮದ್ (ಆಜಾದ್ ಟಿಪ್ಪು ಸಂಘರ್ಷ ಸಮಿತಿ), ಸಿಐಟಿಯು ಕಾರ್ಮಿಕ ಸಂಘದ ಮುಖಂಡ ಧರ್ಮೇಶ್ ವಂದನಾರ್ಪಣೆ ಮಾಡಿದ್ದು, ರೈತ ಮುಖಂಡ ಹೆಚ್.ಆರ್. ನವೀನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ