ಚೀನಾದಲ್ಲಿ ಮತ್ತೆ ಕೋವಿಡ್​ ಪ್ರಕರಣಗಳು ಹೆಚ್ಚಳ: ಒಂದೇ ದಿನ 39 ಸಾವಿರ ಸೋಂಕಿತರು ಪತ್ತೆ

ಬೀಜಿಂಗ್: ಚೀನಾ ದೇಶದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ರೀತಿಯಲ್ಲಿ ಏರಿಕೆ ಕಂಡುಬರುತ್ತಿದೆ. ನವೆಂಬರ್‌ 26ರಂದು ಒಂದೇ ದಿನ 39,791 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 3,709 ಮಂದಿಗೆ ರೋಗಲಕ್ಷಣಗಳು ಕಂಡುಬಂದಿದ್ದು, 36,082 ಜನರಿಗೆ ರೋಗಲಕ್ಷಣಗಳು ಇಲ್ಲಿದಿರುವುದರಿಂದ ಆರೋಗ್ಯದ ಪರಿಣಾಮ ಗಂಭೀರವಾಗಿಲ್ಲ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ನವೆಂಬರ್ 25ರಂದು ವರದಿಯಾದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಬರೋಬ್ಬರಿ 35,183 ಆಗಿತ್ತು. ಕಳೆದ 24 ಗಂಟೆಯಲ್ಲಿ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಈ ಅವಧಿಯಲ್ಲಿ ಹೊರಗಿನಿಂದ ಬಂದ ಸೋಂಕಿತರನ್ನು ಹೊರತುಪಡಿಸಿ, ಚೀನಾ 39,506 ಹೊಸ ಸ್ಥಳೀಯ ಪ್ರಕರಣಗಳನ್ನು ವರದಿ ಮಾಡಿದೆ. ಇದರಲ್ಲಿ 3,648 ಮಂದಿಗೆ ರೋಗದ ಲಕ್ಷಣಗಳಿದ್ದು, 35,858 ಮಂದಿ ಲಕ್ಷಣರಹಿತರಾಗಿದ್ದಾರೆ.

ವಾಣಿಜ್ಯ ನಗರ ಶಾಂಘೈನಲ್ಲಿ ತಪಾಸಣೆ ಇನ್ನಷ್ಟು ಚುರುಕುಗೊಳಿಸಲಾಗಿದೆ. 48 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಕ್ರಮವಹಿಸಲಾಗಿದೆ. ಬೀಜಿಂಗ್‌ನ ಪ್ರಮುಖ ಪ್ರವಾಸಿ ತಾಣ ಚಾವೊಯಾಂಗ್ ಅನ್ನು ಮುಚ್ಚಲಾಗಿದೆ.

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಮತ್ತೆ ಲಾಕ್​ಡೌನ್​ ಹೇರುವುದು, ಸಾಮೂಹಿಕ ಕೋವಿಡ್-19 ಪರೀಕ್ಷೆ, ಪ್ರಯಾಣ ನಿರ್ಬಂಧಗಳು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ.

ಲಾಕ್‌ಡೌನ್‌ ಕ್ರಮಕ್ಕೆ ಆಕ್ಷೇಪ

ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಏರುತ್ತಿದ್ದಂತೆಯೇ, ಸರ್ಕಾರ ಲಾಕ್‌ಡೌನ್‌ ಕ್ರಮಕ್ಕೆ ಮುಂದಾಯಿತು. ಈ ನಡುವೆ ಜನರ ಪ್ರತಿಭಟನೆಗಳನ್ನು ನಡೆಸಿ ಲಾಕ್‌ಡೌನ್‌ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಚೀನಾದ ಷಿನ್‌ಜಿಯಾಂಗ್ ವಲಯದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ‘ಲಾಕ್‌ಡೌನ್‌ ಅಂತ್ಯಗೊಳಿಸಿ’ ಎಂಬ ಘೋಷಣೆ ಕೂಗುತ್ತಾ ಪ್ರತಿಭಟಿಸಿದ್ದಾರೆ.

ಭಾರತದ ಕೋವಿಡ್​ ವರದಿ

ಭಾರತ ದೇಶದಲ್ಲಿ ಕಳೆದ 24 ಗಂಟೆಯಲ್ಲಿ 343 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,46,71,562 ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ ದೇಶದಲ್ಲಿ 5,263 ಸಕ್ರಿಯ ಸೋಂಕಿತರು ಇದ್ದಾರೆ. ನೆನ್ನೆಯ ವರದಿಯಂತೆ ಕೊರೊನಾ ಪ್ರಕರಣದಿಂದ ಕೇರಳದಲ್ಲಿ ಮೂವರು ಮತ್ತು ಮಹಾರಾಷ್ಟ್ರದಲ್ಲಿ ಒಬ್ಬರು ಬಲಿಯಾಗಿದ್ದಾರೆ.

ದೇಶದಲ್ಲಿ ಕೋವಿಡ್‌ ಸೋಂಕು ಹರಡುವಿಕೆ ಪ್ರಮಾಣ ಶೇ 0.01 ರಷ್ಟಿದ್ದು, ಚೇತರಿಕೆ ದರ ಶೇ 98.80 ರಷ್ಟಿದೆ. ಸಾವಿನ ಪ್ರಮಾಣವು ಶೇ 1.19 ಇದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,35,687 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *