ನವದೆಹಲಿ: ನಾಲ್ಕು ದಿನಗಳ ಹಿಂದೆ ಝೀ ಎಂಟರ್‌ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಲ್ಲಿ ಪ್ರಸಾರಗೊಂಡ ಕಾರ್ಯಕ್ರಮವೊಂದರಲ್ಲಿ ಇಬ್ಬರು ಮಕ್ಕಳು ನೋಟು ಅಮಾನ್ಯೀಕರಣದ ಮೇಲೆ ವಿಡಂಬನೆ ನಡೆಸುವ ಪ್ರದರ್ಶನ ನೀಡಿದ್ದರು. ಅದರಲ್ಲಿ ಪ್ರಧಾನಿ ಮೋದಿ ಮತ್ತು ಅವರ ಉಡುಪಿನ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವರಣೆ ನೀಡುವಂತೆ ಸಂಸ್ಥೆಯನ್ನು ಕೋರಿದೆ ಎನ್ನಲಾಗಿದೆ.
ಜೀ ತಮಿಳಿನಲ್ಲಿ ಪ್ರಸಾರವಾದ ‘ಜೂನಿಯರ್ ಸೂಪರ್‌ಸ್ಟಾರ್ಸ್ ಸೀಸನ್ 4’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಸಾರವಾದ ಸಂಚಿಕೆಯಲ್ಲಿ ಪ್ರಧಾನಿ ಮೋದಿಯವರನ್ನು ಅಣಕಿಸುವ ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದರು.
ತಮಿಳುನಾಡಿನ ಬಿಜೆಪಿಯ ಐಟಿ ಹಾಗೂ ಸಾಮಾಜಿಕ ಮಾಧ್ಯಮದ ಅಧ್ಯಕ್ಷ ನಿರ್ಮಲ್ ಕುಮಾರ್ ನೀಡಿದ ದೂರಿನ ಅನ್ವಯ, 7 ದಿನಗಳ ಒಳಗಾಗಿ ಮೀಡಿಯಾ ಸಂಸ್ಥೆ ಘಟನೆ ಸಂಬಂಧಿತವಾಗಿ ಉತ್ತರಿಸಬೇಕೆಂದು ಸಚಿವಾಲಯ ವಿನಂತಿಸಿದೆ. ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿರುವ ಟೀಕೆಗಳನ್ನು ಮಾಡಲಾಗಿದೆ ಎಂಬುದಾಗಿ ಆರೋಪಿಸಿರುವ ನಿರ್ಮಲ್ ಕುಮಾರ್ ಕಾರ್ಯಕ್ರಮವನ್ನು ಪ್ರಸಾರ ಮಾಡದಂತೆ ಚಾನಲ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜೂನಿಯರ್ ಸೂಪರ್ ಸ್ಟಾರ್ ಅನ್ನು ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಕೂಡ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮವು ‘ಇಮ್ಸೈ ಅರಸನ್ 23 ಆಮ್ ಪುಲಿಕೇಶಿ ಹೆಸರಿನ ರಾಜಕೀಯ ವಿಡಂಬನಾತ್ಮಕ ಚಲನಚಿತ್ರದ ಥೀಮ್ ಒಂದನ್ನು ಮಕ್ಕಳು ಆಯ್ದುಕೊಂಡಿದ್ದು ರಾಜ ಹಾಗೂ ಮಂತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿಂಧಿಯಾ ದೇಶದ ಆಡಳಿತಗಾರನನ್ನು ಗೇಲಿ ಮಾಡುವ ಅಂಶ ನಾಟಕದಲ್ಲಿದೆ. ಬ್ರಿಟಿಷರ ನಿಯಂತ್ರಣದಲ್ಲಿರುವ ರಾಜ (ವಡಿವೇಲು) ವ್ಯರ್ಥ ಹಾಗೂ ಮೂರ್ಖನಾಗಿದ್ದು ರಾಜ್ಯದಲ್ಲಿ ಬಡತನ, ಬರಗಾಲ ಇದ್ದಾಗಲೂ ದುಂದುವೆಚ್ಚದಲ್ಲಿ ಬದುಕುತ್ತಾನೆ.
ಇದೇ ಅಂಶವನ್ನು ಮಕ್ಕಳು ಪ್ರಧಾನಿ ನರೇಂದ್ರ ಮೋದಿಗೆ ಹೋಲಿಸಿದ್ದು ಕಾರ್ಯಕ್ರಮದ ಉದ್ದಕ್ಕೂ ಮಕ್ಕಳು ಪ್ರಧಾನಿ ಮೋದಿಯ ವಿರುದ್ಧ ಅವಹೇಳನಕಾರಿ ಕಮೆಂಟ್‌ಗಳನ್ನು ನಡೆಸುತ್ತಿದ್ದರು. ನೋಟು ಅಮಾನ್ಯೀಕರಣದ ಕುರಿತಾಗಿಯೂ ಬಹಳಷ್ಟು ವಿಡಂಬನೆಗಳನ್ನು ಮಕ್ಕಳು ಮಾಡಿದ್ದು ಬೇರೆ ಬೇರೆ ದೇಶಗಳಿಗೆ ಮೋದಿಯವರ ರಾಜತಾಂತ್ರಿಕ ಪ್ರಯಾಣ ಅದಕ್ಕೆ ತಗಲುತ್ತಿದ್ದ ಖರ್ಚು ವೆಚ್ಚಗಳು, ಅವರು ಧರಿಸುತ್ತಿದ್ದ ಉಡುಪುಗಳು, ಬಂಡವಾಳ ಹಿಂತೆಗೆದುಕೊಳ್ಳುವಿಕೆ ಹೀಗೆ ಪ್ರಧಾನಿ ಮೋದಿಯವರನ್ನು ಉದ್ದೇಶವಾಗಿರಿಸಿಕೊಂಡ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.
ಝೀ ಎಂಟರ್‌ಟೈನ್‌ಮೆಂಟ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿಯಾಗಿರುವ ಸಿಜು ಪ್ರಭಾಕರನ್ ಕಾರ್ಯಕ್ರಮದ ಕುರಿತಾಗಿರುವ ಎಲ್ಲಾ ವಿಷಯಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದಾರೆ ಎಂದು ನಿರ್ಮಲ್ ಹೇಳಿದ್ದು ಅದಾಗ್ಯೂ ಘಟನೆಗೆ ಸಂಬಂಧಿತವಾಗಿ ವಿವರಣೆಯನ್ನು ನೀಡಬೇಕು ಎಂಬುದಾಗಿ ಹೇಳಿದ್ದಾರೆ. ಪ್ರಭಾಕರನ್ ಅವರನ್ನು ಸಂಪರ್ಕಿಸಿದಾಗ ಕಾರ್ಪೋರೇಟ್ ಕಮ್ಯುನಿಕೇಶನ್ ತಂಡವು ಸಮಸ್ಯೆಯನ್ನು ನಿವಾರಿಸುವ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.