ಜೈಪುರ: ಬಾಲ್ಯ ವಿವಾಹದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭವಾಗಿದ್ದು, ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಬಾಲ್ಯ ವಿವಾಹವನ್ನು ಭಾರತದಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂದು ಅಭಿಯಾನ ಆರಂಭವಾಗಿದೆ. ಈ ಅಭಿಯಾನವನ್ನು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಕೈಗೆತ್ತಿಕೊಂಡಿದ್ದಾರೆ.
ರಾಜಸ್ಥಾನದ ವಿರಾಟ್ ನಗರದ ನವರಂಗ್‌ಪುರ ಗ್ರಾಮದಿಂದ ಆರಂಭವಾಗಿರುವ ಈ ಅಭಿಯಾನವನ್ನು ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನ ನೇತೃತ್ವ ವಹಿಸಿದ್ದು ದೇಶದ 26 ರಾಜ್ಯಗಳ 500 ಜಿಲ್ಲೆಗಳ ಸುಮಾರು 10 ಸಾವಿರ ಹಳ್ಳಿಗಳಲ್ಲಿ ಜಾಥಾ ಸಂಚರಿಸಲಿದೆ.
ಈ ವೇಳೆ ಮಾತನಾಡಿದ ಅವರು “ಬಾಲ್ಯ ವಿವಾಹ ಮಾನವ ಹಕ್ಕುಗಳು ಮತ್ತು ಘನತೆಯ ಉಲ್ಲಂಘನೆಯಾಗಿದೆ, ದುರದೃಷ್ಟವಶಾತ್ ಇದು ಇನ್ನೂ ಸಾಮಾಜಿಕವಾಗಿ ಉಳಿದಿರುವದು ದುರದುಷ್ಟಕರ. ಅಭಿಯಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರು ದೀಪಗಳನ್ನು ಬೆಳಗಿಸಿ, ಟಾರ್ಚ್‌ಲೈಟ್ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಾಲ್ಯ ವಿವಾಹ ಪದ್ದತಿ ಕೊನೆಗೊಳಿಸುವಂತೆ ದೇಶದ ಜನರಿಗೆ ಕೈಲಾಶ್ ಸತ್ಯಾರ್ಥಿ ಮನವಿ ಮಾಡಿಕೊಂಡಿದ್ದಾರೆ.
ಕೈಲಾಶ್ ಸತ್ಯಾರ್ಥಿ ಅವರೊಂದಿಗೆ ಇನ್ನೊಬ್ಬ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಲೇಮಾ ಗೊಬೋವಿ ಚಾಲನೆ ನೀಡಿದರು.
ಭಾರತವನ್ನು ಬಾಲ್ಯ ವಿವಾಹ ಮುಕ್ತ ದೇಶವನ್ನಾಗಿ ಮಾಡಬೇಕಾಗಿದೆ. ಈ ಕಿಡಿಯು 70 ಸಾವಿರ ಮಹಿಳೆಯರು ಬದಲಾವಣೆ ಮಾಡುವವರ ಜ್ವಾಲೆ ಹೊತ್ತಿಸಿದೆ. ಲಕ್ಷಾಂತರ ಮಹಿಳೆಯರು ಸಾಮಾಜಿಕ ಪದ್ಧತಿಯಿಂದ ಉಸಿರುಗಟ್ಟಿದ್ದಾರೆ ಎಂದಿದ್ದಾರೆ.
ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸಿರುವ ಸರ್ಕಾರದ ಪ್ರಸ್ತಾವನೆಯನ್ನು ಬೆಂಬಲಿಸುತ್ತೇನೆ. ಗ್ರಾಮ ಮಟ್ಟದಲ್ಲಿಯೂ ಸಹ, ಮಕ್ಕಳ ವಿರುದ್ಧದ ಅಪರಾಧವನ್ನು ಕೊನೆಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನ ಯಶಸ್ವಿ ಆಗಬೇಕಾದರೆ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ ಖಚಿತಪಡಿಸಿಕೊಳ್ಳುವುದು, ಮಕ್ಕಳು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಅವರಿಗೆ 18 ವರ್ಷ ವಯಸ್ಸಿನವರೆಗೆ ಉಚಿತ ಶಿಕ್ಷಣ ನೀಡುವ ಮೂಲಕ ಅವರ ಸಬಲೀಕರಣ ಮತ್ತು ಲೈಂಗಿಕ ಶೋಷಣೆಯ ವಿರುದ್ಧ ಮಕ್ಕಳಿಗೆ ಸುರಕ್ಷತೆ ಒದಗಿಸುವುದಾಗಿದೆ ಎಂದಿದ್ದಾರೆ.