ಮಥುರಾ: ಉತ್ತರ ಪ್ರದೇಶ ರಾಜ್ಯದ ಮಥುರಾದ ರೈಲು ನಿಲ್ದಾಣದಲ್ಲಿ ಕಳೆದ ವಾರ ಕಾಣೆಯಾಗಿದ್ದ ಮಗುವೊಂದರ ಪ್ರಕರಣಕ್ಕೆ ಮಹತ್ವದ ತಿರುವು ಪಡೆದುಕೊಂಡಿದ್ದು, ಪೊಲೀಸರು ಮಾನವ ಕಳ್ಳಸಾಗಣೆಯ ದೊಡ್ಡ ಜಾಲವೊಂದನ್ನು ಭೇದಿಸಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕಿ ವಿನಿತಾ ಅಗರವಾಲ್ ಸೇರಿದಂತೆ ಒಟ್ಟು ಎಂದು ಮಂದಿಯನ್ನು ಬಂಧಿಸಲಾಗಿದೆ.
ಆಗಸ್ಟ್ 24ರಂದು ರಾತ್ರಿ ಮಥುರಾ ರೈಲು ನಿಲ್ದಾಣದ ಪ್ರಾಂಗಣದಲ್ಲಿ ತಾಯಿಯೊಂದಿಗೆ ಎರಡು ವರ್ಷದ ಮಗುವೊಂದು ಮಲಗಿತ್ತು. ಮದ್ಯರಾತ್ರಿ ವ್ಯಕ್ತಿಯೋರ್ವ ಆಗಮಿಸಿ ಮಗುವನ್ನು ಎತ್ತಿಕೊಂಡು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಗುವನ್ನು ಪತ್ತೆ ಹಚ್ಚಲು ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ ರೈಲ್ವೆ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಮುಸ್ತಾಕ್ ತೀವ್ರ ಶೋಧ ನಡೆಸಲು ಸೂಚಿಸಿದರು.
ಮಗು ಎತ್ತಿಕೊಂಡು ಹೋದವನನ್ನು ದೀಪ್ ಕುಮಾರ್ ಎಂದು ಗುರುತಿಸಲಾಗಿ, ಆತನ ಮೊಬೈಲ್ ಕರೆಗಳನ್ನು ತನಿಖೆಗೆ ಒಳಪಡಿಸಿ, ಆತನ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಗು ಫಿರೋಜಾಬಾದ್ ಬಿಜೆಪಿ ನಾಯಕಿ ವಿನಿತಾ ಮನೆಯಲ್ಲಿ ಇರುವುದು ಗೊತ್ತಾಯಿತು. ನಗರಸಭೆ ಕಾರ್ಪೋರೆಟರ್ ಆಗಿರುವ ವಿನಿತಾ ಹಾಗೂ ಆಕೆಯ ಪತಿ ಕೃಷ್ಣ ಮುರಾರಿ ಅಗರವಾಲ್ ನನ್ನು ಬಂಧಿಸಿದ ಪೊಲೀಸ್ ತಂಡ ವಿಚಾರನೆಗೊಳಪಡಿಸಿದಾಗ ಮಾನವ ಕಳ್ಳಸಾಗಣೆ ಜಾಲ ಬಯಲಿಗೆ ಬಂದಿದೆ.
ಮಥುರಾ ರೈಲು ನಿಲ್ದಾಣದಲ್ಲಿ ಕಾಣೆಯಾದ ಮಗುವನ್ನು ವೈದ್ಯ ದಂಪತಿ ಬಳಿ ದೀಪ್ ಕುಮಾರ್ ₹1.80 ರೂಪಾಯಿ ಪಡೆದಿದ್ದ. ಆತನಿಂದ ₹80 ಸಾವಿರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಾಲದ ಸದಸ್ಯರು ಎನ್ನಲಾದ ಹತ್ರಾಸ್ ಸರ್ಕಾರಿ ಆಸ್ಪತ್ರೆಯ ಸೂಲಗಿತ್ತಿ ಪೂನಮ್, ಸಿಬ್ಬಂದಿಗಳಾದ ವಿಮಲೇಶ್, ಮಂಜಿತ್ ಎನ್ನುವರನ್ನು ಕೂಡ ಬಂಧಿಸಲಾಗಿದೆ.
ಈ ಮೂಲಕ ರೈಲ್ವೆ ಪೊಲೀಸರು ಫಿರೋಜಾಬಾದ್, ಮಥುರಾ, ಆಗ್ರಾ ಸುತ್ತಮುತ್ತ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಣೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.