ಚಿಕ್ಕಮಗಳೂರು: ಶಿಕ್ಷಣ ಇಲಾಖೆಯ ಯಡವಟ್ಟಿನಿಂದಾಗಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯದೇ ಅಭ್ಯರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದೀಗ ಕಲಬುರಗಿ ಮತ್ತು ಮಂಡ್ಯ ಜಿಲ್ಲೆಯ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆಯ ಎಡವಟ್ಟು ಬಹಿರಂಗವಾಗಿದೆ.
ಇಂದು(ನವೆಂಬರ್ 06) ಚಿಕ್ಕಮಗಳೂರು ನಗರದ ವಿವಿಧ ಕಾಲೇಜುಗಳಲ್ಲಿಯೂ ಟಿಇಟಿ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಗೆಂದು ರಾಜ್ಯದ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಆನ್‍ಲೈನ್ ಎಡವಟ್ಟಿನಿಂದ ಹಲವು ಅಭ್ಯರ್ಥಿಗಳು ಪರೀಕ್ಷೆ ಬರೆಯದೇ ವಂಚಿತರಾದ ಘಟನೆ ನಗರದ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಬಳ್ಳಾರಿ ಮೂಲದ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯಲಾಗದೇ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆನ್‍ಲೈನ್ ಮೂಲಕ ಪರೀಕ್ಷಾ ಕೇಂದ್ರ ಪ್ರವೇಶಾತಿ ತೆಗೆದುಕೊಂಡ ಅಭ್ಯರ್ಥಿಗೆ ಆರಂಭದಲ್ಲಿ ಒಂದು ಕಾಲೇಜು ತೋರಿಸಿದೆ. ಇಂದು ಪರೀಕ್ಷೆ ಬರೆಯಲು ಅಲ್ಲಿಗೆ ಹೋದರೆ ಅಲ್ಲಿನ ರಿಜಿಸ್ಟರ್ ನಂಬರ್ ಇಲ್ಲ. ಮತ್ತೊಮ್ಮೆ ಪ್ರವೇಶಾತಿ ಚೀಟಿಯನ್ನು ಪಡೆದುಕೊಂಡರೆ ಆಗ ಮತ್ತೆ ಬೇರೆ ಕಾಲೇಜು ತೋರಿಸಿದೆ. ಜೊತೆಗೆ ಆತನಿಗೆ ಅಲ್ಲಿ ಸ್ಥಳೀಯವಾಗಿ ಎಲ್ಲಿಯೂ ಪ್ರವೇಶಾತಿ ಪತ್ರ ಮುದ್ರಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾನುವಾರವಾದ ಕಾರಣ ಕಂಪ್ಯೂಟರ್ ಕೇಂದ್ರಗಳು ಬಾಗಿಲು ಹಾಕಿವೆ. ಇದರಿಂದಾಗಿ ಆತ ಎರಡನೇ ಕಾಲೇಜಿನ ಬಳಿಯೂ ಬಂದರೂ ಕೊಠಡಿ ಮೇಲ್ವಿಚಾರಕರು ಪರೀಕ್ಷೆ ಬರೆಯಲು ಬಿಟ್ಟಿಲ್ಲ. ಇದರಿಂದ ಬಳ್ಳಾರಿಯಿಂದ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗದ ಘಟನೆ ನಡೆದಿದೆ.
ಅಧಿಕಾರಿಗಳ ಎಡವಟ್ಟಿನಿಂದಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಸರ್ಕಾರ ಒಂದೇ ರೀತಿಯ ಹಾಲ್ ಟಿಕೆಟ್ ನೀಡಬೇಕು. ಹೀಗೆ ಎರಡೆರಡು ರೀತಿಯ ಪರೀಕ್ಷಾ ಪ್ರವೇಶಾತಿ ಚೀಟಿ ನೀಡಿದರೆ ದೂರದಿಂದ ಬಂದ ವಿದ್ಯಾರ್ಥಿಗಳ ಕಥೆ ಏನು. ನಮಗೆ ಊರು ಕೂಡ ಪರಿಚಯ ಇರುವುದಿಲ್ಲ. ಅಲ್ಲಿ-ಇಲ್ಲಿ ಕೇಳಿಕೊಂಡು ಬಂದಿರುತ್ತೇವೆ. ಸರ್ಕಾರದ ಎಡವಟ್ಟಿನಿಂದ ಈಗ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಇದಕ್ಕೆ ಹೊಣೆ ಯಾರು ಎಂದು ಕಿಡಿಕಾರಿದ್ದಾರೆ.