ಕಲಬುರ್ಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಐದು ಗ್ಯಾರೆಂಟಿ ಯೋಜನೆಗಳ ಪೈಕಿ ಪ್ರತಿಯೊಂದು ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಬಹುನಿರೀಕ್ಷಿತ ಗೃಹ ಜ್ಯೋತಿ ಯೋಜನೆಗೆ ಇಂದು (ಆಗಸ್ಟ್ -5) ಶನಿವಾರ ಇಲ್ಲಿನ ನೂತನ ವಿದ್ಯಾಲಯ ಎನ್‌ವಿ ಮೈದಾನದಲ್ಲಿ,ಇಂಧನ ಇಲಾಖೆ ಹಾಗೂ ಜೆಸ್ಕಾಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹ ಜ್ಯೋತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಇದನ್ನೂ ಓದಿ:ಆಗಸ್ಟ್ 5ಕ್ಕೆ ಗೃಹ ಜ್ಯೋತಿಗೆ ಸಿಎಂ ಚಾಲನೆ : ಇಂದಿನಿಂದ ಫಲಾನುಭವಿಗಳಿಗೆ ಶೂನ್ಯ ಬಿಲ್- ಸಚಿವ ಕೆ.ಜೆ ಜಾರ್ಜ್
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರೆಂಟಿಗಳ ಪೈಕಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆ ಉದ್ಘಾಟನೆಗಾಗಿ ವೇದಿಕೆಯ ಮೇಲೆ ನಿರ್ಮಿಸಲಾದ ಮಾದರಿ ಮನೆಯ ವಿದ್ಯುತ್ ದೀಪ ಬೆಳಗಿಸುವ ಮೂಲಕ ಚಾಲನೆ ಕೊಟ್ಟರು.
ಗೃಹಜ್ಯೋತಿ ಯೋಜನೆಯಡಿ ನೋಂದಾಯಿತ 1.41 ಕೋಟಿ ಮನೆಗಳಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಯ ಶೂನ್ಯ ದರದ ವಿದ್ಯುತ್ ಬಿಲ್ ನೀಡಲಾಗುತ್ತಿದೆ. ಜುಲೈ 25ರ ವೇಳೆಗೆ ಜೆಸ್ಕಾಂನಲ್ಲಿ 20.21 ಲಕ್ಷ, ಬೆಸ್ಕಾಂನಲ್ಲಿ 54.99 ಲಕ್ಷ, ಚೆಸ್ಕಾಂನಲ್ಲಿ 20.49 ಲಕ್ಷ, ಹೆಸ್ಕಾಂನಲ್ಲಿ 30.66ಲಕ್ಷ,ಮೆಸ್ಕಾಂನಲ್ಲಿ 14,53 ಲಕ್ಷ ಮತ್ತು ಎಚ್ಆರ್ಇಸಿಎಸ್ನಲ್ಲಿ 76,562 ಮನೆಗಳು ಯೋಜನೆಯಡಿ ನೋಂದಣಿಯಾಗಿವೆ. ಆಗಸ್ಟ್ ತಿಂಗಳಲ್ಲಿ ನೋಂದಾಯಿಸಿದವರಿಗೂ ಮುಂದಿನ ತಿಂಗಳಿಂದ ಗೃಹ ಜ್ಯೋತಿಯ ಸೌಲಭ್ಯ ಲಭಿಸಲಿದೆ ಎಂದರು.
ರಾಜ್ಯಸಭೆಯ ವಿರೋಧಪಕ್ಷದ ನಾಯಕರು ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆ.ಜೆ.ಜಾರ್ಜ್, ವೈದಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಪೌರಾಡಳಿತ ಸಚಿವ ರಹೀಂ ಖಾನ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಸೇರಿ ಹಲವರು ಸಾಥ್‌ನೀಡಿದರು.