ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ರಾಜ್ಯ ಬಜೆಟ್’ಗೆ ಸಿದ್ಧತೆ ಆರಂಭಿಸಿದ್ದು, ಗುರುವಾರದಿಂದ 5 ದಿನಗಳ ಕಾಲ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ.
ಗುರುವಾರದಂದು 13 ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಸಭೆಗಳನ್ನು ನಡೆಸಲಿದ್ದಾರೆ, ನಂತರ ಶುಕ್ರವಾರ, ಶನಿವಾರ, ಸೋಮವಾರ ಮತ್ತು ಮುಂದಿನ ಗುರುವಾರ ಮತ್ತಷ್ಟು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್ ನಿಗಮ ಲಿಮಿಟೆಡ್ (ಕೆಪಿಸಿಎಲ್) ಕಚೇರಿ ಕಟ್ಟಡದಲ್ಲಿ ಬಜೆಟ್ ಪೂರ್ವ ಸಭೆಗಳು ನಡೆಯಲಿವೆ. 30 ನಿಮಿಷಗಳ ಸಭೆಗಳಲ್ಲಿ, ಸಿಎಂ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳು ಇಲಾಖೆಯ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ| ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ಅಧಿಕಾರಿ ಪ್ರಿಯಾ ದಿಢೀರ್ ದಾಳಿ
ತಮ್ಮ ದಾಖಲೆಯ 16 ನೇ ಬಜೆಟ್ ಅನ್ನು ಮಂಡಿಸಲಿರುವ ಸಿದ್ದರಾಮಯ್ಯ ಅವರು, ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ಸವಾಲನ್ನು ಎದುರಿಸುತ್ತಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಮೂಲಕ ಸರ್ಕಾರ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿದ್ದು, ಹಲವು ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಸಿಗದಿರುವ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಗೃಹ ಸಚಿವ ಜಿ ಪರಮೇಶ್ವರ ಇತ್ತೀಚೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ, ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ತಲಾ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು.
2025-26 ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾರ್ಚ್ 14 ರಂದು ಮಂಡಿಸಲಿದ್ದು, ಇದು ಸಿದ್ದರಾಮಯ್ಯ ಅವರ 16ನೇ. ದಾಖಲೆಯ ಬಜೆಟ್ ಮಂಡನೆಯಾಗಿರಲಿದೆ,
ರಾಜ್ಯದಲ್ಲಿ ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಅತಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸಿದ್ದರಾಮಯ್ಯ ಹೆಸರಿನಲ್ಲಿದೆ. 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ ತಿಂಗಳಲ್ಲಿ ಮಂಡಿಸಿದ್ದರು. ಇದು ಅವರ 15ನೇ ಬಜೆಟ್ ಆಗಿತ್ತು.
ಕರ್ನಾಟಕದ ಮಾಜಿ ರಾಜ್ಯಪಾಲರೂ ಆಗಿರುವ ಗುಜರಾತ್ ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ 18 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯನ್ನು ಮುರಿಯಬೇಕೆಂದರೆ ಸಿದ್ದರಾಮಯ್ಯ ಅವರು ಇನ್ನೂ ಎರಡು ಬಜೆಟ್ ಗಳನ್ನು ಮಂಡಿಸಬೇಕಾಗುತ್ತದೆ.
ಸಿದ್ದರಾಮಯ್ಯ 16ನೇ ಬಜೆಟ್ ಹಲವು ವೈಶಿಷ್ಠ್ಯಗಳನ್ನು ಹೊಂದಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media