ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜುಲೈ-19 ಬುಧುವಾರ ನಡೆದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ನೋಂದಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್‌ 16 ರಿಂದ ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ತಿಂಗಳಿಗೆ 2000 ರೂ. ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನೆರವು ವಿತರಣೆಯ ಆರಂಭದ ದಿನಾಂಕವನ್ನು ಘೋಷಿಸಿದರು. ನಾಳೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ. ಚುನಾವಣೆಗೂ ಮುನ್ನ ನಾವು ಕೊಟ್ಟ ಮಾತಿನಂತೆ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುತ್ತೇವೆ. ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಇಂತಹ ಮಾತುಗಳಿಗೆ ಯಾವ ಬೆಲೆಯೂ ಇಲ್ಲ ಎಂದರು.

ಇದನ್ನೂ ಓದಿ:ಜುಲೈ 19 ರಿಂದ ಗೃಹಲಕ್ಷ್ಮೀ ಯೋಜನೆ ಅರ್ಜಿಸಲ್ಲಿಕೆ ಪ್ರಾರಂಭ

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಕೋಟ್ಯಾಂತರ ಕುಟುಂಬಗಳಲ್ಲಿ ಬೆಳಕು  ತರಲಿದೆ. ಮಹಿಳೆಯರ ಕೈಗೆ ಸಿಗುವ ಹಣ ಆರ್ಥಿಕತೆಯಲ್ಲಿ ಚಲನಶೀಲತೆಗೆ ನೆರವಾಗಲಿದೆ ಎಂದರು. ಅನ್ನಭಾಗ್ಯ ಯೋಜನೆಯನ್ನು ಮೈಸೂರಿನಲ್ಲಿ,ಗೃಹಜ್ಯೋತಿ ಯೋಜನೆಯನ್ನು ಬೆಳಗಾವಿಯಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾತನಾಡಿ, ಇದು ಸ್ತ್ರೀಯರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯಕ್ರಮ. ಈ ಯೋಜನೆಯು ರಾಜ್ಯದ ಕೋಟ್ಯಂತರ ಕುಟುಂಬಗಳಲ್ಲಿ ನೆಮ್ಮದಿ ತರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್‌ ಹಾಗೂ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್.‌ ಮುನಿಯಪ್ಪ, ಡಾ. ಹೆಚ್.‌ ಸಿ. ಮಹದೇವಪ್ಪ, ರಹೀಂ ಖಾನ್‌, ಬೈರತಿ ಸುರೇಶ್‌ ಮತ್ತು ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಇಂದಿನಿಂದ ಗೃಹಲಕ್ಷ್ಮಿ ಯೋಜನೆಯ ನೊಂದಣಿ ಪ್ರಕ್ರಿಯೆ ಆರಂಭ: ಸಿಎಂ ಸಿದ್ದರಾಮಯ್ಯ ಚಾಲನೆ

ರೇಷನ್ ಕಾರ್ಡ್​ನಲ್ಲಿ ಮನೆಯ ಯಜಮಾನಿಯಾಗಿರುವವರು ಯೋಜನೆಯ ಫಲಾನುಭವಿಯಾಗಲಿದ್ದಾರೆ. ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಅವರ ಪತಿಯ ಆಧಾರ್ ಕಾರ್ಡ್ ನೀಡಬೇಕು. ಜಿಎಸ್​ಟಿ ಹಾಗೂ ಆದಾಯ ತೆರಿಗೆ ಪಾವತಿದಾರರ ಪತ್ನಿಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಇದೆ. ಸರ್ಕಾರ ನೇಮಕ ಮಾಡಿರುವ ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದು ನೋಂದಣಿ ಮಾಡಲಿದ್ದಾರೆ.

ನೋಂದಾವಣಿ ಹೇಗೆ?

* ರೇಷನ್ ಕಾರ್ಡ್​ನಲ್ಲಿ ಗುರುತಿಸಿರುವ ಮಹಿಳೆ ಮೊಬೈಲ್ ಸಂಖ್ಯೆಗೆನೋಂದಣಿ ದಿನಾಂಕ, ಸಮಯ, ಸ್ಥಳದ ವಿವರ ಎಸ್​ಎಂಎಸ್ ಮೂಲಕ ಕಳುಹಿಸಲಾಗುತ್ತದೆ.
* ನೋಂದಣಿ ಮಾಡಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
* ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಲಿದ್ದಾರೆ.
* ಸಮಸ್ಯೆಗಳಿದ್ದಲ್ಲಿ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್​ಎಂಎಸ್ ಮಾಡಿ ಮಾಹಿತಿ ಪಡೆಯಬಹುದು.
* ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 -7 ಗಂಟೆಯೊಳಗೆ ಭೇಟಿ ನೀಡಿ.
* ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕ್​ಗೆ ನೋಂದಣಿ ಮಾಡಿಸಬಹುದು.
* ನೋಂದಣಿ ಆದಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ.
* ಪ್ರಜಾಪ್ರತಿನಿಧಿಗಳಲ್ಲಿ ನೋಂದಣಿ ಯಾದರೆ ಮಂಜೂರಾತಿ ಪತ್ರ ತಡವಾಗಿ ತಲುಪಲಿದೆ.

 

 

Donate Janashakthi Media

Leave a Reply

Your email address will not be published. Required fields are marked *