ಚಂಡೀಘಡ: 2022 ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ಗೆ ಮುಖಭಂಗ ಅನುಭವಿಸಿದೆ. ಈ ನಡುವೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಚರಣಜಿತ್ ಚಿಂಗ್ ಚನ್ನಿ ಎರಡು ಕಡೆ ಸೋಲನ್ನು ಅನುಭವಿಸಿದ್ದಾರೆ.
ಚಮಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚನ್ನಿ 62,148 ಮತ ಪಡೆದಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಎಎಪಿ ಅಭ್ಯರ್ಥಿ ಸುಮಾರು 69,981 ಮತ ಪಡೆಯುವ ಮೂಲಕ 7 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮತ್ತೊಂದೆಡೆ ಭದೌರ್‌ನಿಂದ ಸ್ಪರ್ಧಿಸಿದ್ದ ಚನ್ನಿ 26,294 ಪಡೆದಿದ್ದು, 40 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಎಎಪಿಯ ಲಾಭ್ ಸಿಂಗ್ ಉಗೋಕೆ 63,514 ಮತ ಪಡೆದುಕೊಂಡಿದ್ದಾರೆ. ಭದೌರ್ ವಿಧಾನಸಭಾ ಕ್ಷೇತ್ರದ ಲಾಭ್ ಸಿಂಗ್ ಉಗೋಕೆ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾನೆ.
ಲಾಭ್ ಸಿಂಗ್ ಉಗೋಕೆ ತಾಯಿ ಸರ್ಕಾರಿ ಶಾಲೆಯಲ್ಲಿ ಸಫಾಯಿ ಕರ್ಮಾಚಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈತನ ತಂದೆ ಕೂಲಿ ಕಾರ್ಮಿಕ. ಸಾಮಾನ್ಯ ವ್ಯಕ್ತಿಯಾಗಿದ್ದಾರೆ.
ಒಬ್ಬ ಜನಸಾಮಾನ್ಯ ವ್ಯಕ್ತಿ ಹೇಗೆ ಬದಲಾವಣೆ ತರಬಹುದು ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂಬುದಾಗಿ ತಿಳಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೌರ್ ಮತ್ತು ಲಾಭ್ ಸಿಂಗ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅದೇ ರೀತಿ, ಕಾಂಗ್ರೆಸ್ ನಾಯಕ ನವಜ್ಯೋತ್ ಸಿಂಗ್ ಸಿಧುವನ್ನು ಸೋಲಿಸಿದ್ದು ಸಾಮಾನ್ಯ ಸ್ವಯಂಸೇವಕಿ ಜೀವನ್ ಜ್ಯೋತ್ ಕೌರ್ ಎಂಬಾಕೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಪ್ರಚಂಡ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗಕ್ಕೊಳಗಾಗಿದೆ.