ಬಿಜಾಪುರ: ಚತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರ ಮೇಲಿನ ಹಲವು ದಾಳಿ ಮಾಡಿದ ಪ್ರಮುಖ ಆರೋಪಿಯಾಗಿದ್ದ ನಕ್ಸಲ್ ಕಮಾಂಡರ್ ವನಿತಾ ಮನೆಗೆ ಹಿಂತಿರುಗುವುದಾಗಿ ಹಾಗೂ ಮಗಳ ಜೊತೆ ಬದುಕುವ ಹಂಬಲಕ್ಕಾಗಿ ಪೋಲಿಸರಿಗೆ ಶರಣಾಗಿದ್ದಾರೆ.
ಮಗಳು ಮತ್ತು ಕುಟುಂಬಕ್ಕಾಗಿ ವನಿತಾ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಬಿಜಾಪುರ ಎಸ್‌ಪಿ ಆಂಜನೇಯ ವರ್ಷಣೈ ಅವರು ತಿಳಿಸಿದ್ದಾರೆ. 2003ರಿಂದ ನಿಷೇಧಿತ ಬಂಡುಕೋರ ಸಂಘಟನೆ ಜೊತೆ ಕೆಲಸ ಮಾಡುತ್ತಿದ್ದ ಸೋಮ್ಲಿ ಸೊದಿ ವನಿತಾ(32) 2018ರಿಂದ ನಕ್ಸಲ್ ತಂಡದ ನಗರಂ ಸ್ಥಳೀಯ ಗುಂಪಿನ ಕಮಾಂಡರ್ ಆಗಿದ್ದರು. ಈ ಮುಂಚೆ ವನಿತಾ ಅವರ ಸುಳಿವು ನೀಡಿದರೆ ₹ 5 ಲಕ್ಷ ಬಹುಮಾನ ನೀಡುವುದುದಾಗಿ ಸರ್ಕಾರ ಘೋಷಿಸಿತ್ತು.
ನಕ್ಸಲ್ ಸಂಘಟನೆಯಲ್ಲಿನ ಟೊಳ್ಳು ಮಾವೋವಾದಿ ಸಿದ್ಧಾಂತ, ಅಸಮಾನತೆ ಮತ್ತು ಶೋಷಣೆಯಿಂದ ಬೇಸತ್ತು ಹಾಗೂ ಕುಟುಂಬ ಮತ್ತು ಮಗಳ ಮೇಲಿನ ಮಮತೆಯಿಂದ ಶರಣಾಗಿರುವುದಾಗಿ ವನಿತಾ ಅವರು ಪ್ರತಿಕ್ರಿಯಿಸಿದ್ದಾರೆ. ರಸ್ತೆ ಅಭಿವೃದ್ಧಿ ಯೋಜನೆಗೆ ಭದ್ರತೆ ಒದಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ 2004ರಲ್ಲಿ ಅವಪಲ್ಲಿ-ಇಲ್ಮಿದಿಹ್ ದಾಳಿ ನಡೆಸಿದ ನಕ್ಸಲ್ ತಂಡದಲ್ಲಿ ವನಿತಾ ಭಾಗಿಯಾಗಿದ್ದರು.
2006ರಲ್ಲಿ ಅವಪಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ, 2007ರಲ್ಲಿ ಭದ್ರತಾ ಪಡೆಗಳ ರಾಣಿ ಬೋಡ್ಲಿ ಶಿಬಿರದ ಮೇಲಿನ ದಾಳಿ ಮತ್ತು ಇತರ ಘಟನೆಗಳ ನಂತರ ಐಇಡಿ ಸ್ಫೋಟವನ್ನು ಪ್ರಚೋದಿಸಿದ ಬಂಡುಕೋರ ತಂಡದ ಭಾಗವಾಗಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.
ವನಿತಾ ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ, ನಕ್ಸಲ್ ಸಂಘಟನೆ ತೊರೆದಿದ್ದಕ್ಕೆ ರಾಜ್ಯ ಸರ್ಕಾರವು ವನಿತಾ ಅವರಿಗೆ ಪುನರ್ವಸತಿ ಯೋಜನೆಯಡಿ ₹ 10,000 ಪ್ರೋತ್ಸಾಹ ಧನವನ್ನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.