ಛತ್ತೀಸ್‌ಗಢ | ಹಸ್‌ದೇವ್‌ ಅರಣ್ಯದಲ್ಲಿ ಗಣಿಗಾರಿಕೆಗೆ ವಿರೋಧ; 30 ಕಾಂಗ್ರೆಸ್ ಶಾಸಕರ ಅಮಾನತು

ರಾಯ್‌ಪುರ್: ಅರಣ್ಯ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಣಿಗಾರಿಕೆ ವಿಚಾರವಾಗಿ ಚರ್ಚೆ ನಡೆಸುವಂತೆ ಒತ್ತಾಯಿಸಿ ಛತ್ತೀಸ್‌ಗಢ ವಿಧಾನಸಭೆಯ ಸದನದ ಬಾವಿಗಿಳಿದ 30 ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಬುಧವಾರ ಅಮಾನತು ಮಾಡಿದ್ದಾರೆ. ಅದಾಗ್ಯೂ ಈ ಅಮಾನತು ನಂತರ ಹಿಂಪಡೆಯಲಾಯಿತು ಎಂದು ವರದಿಯಾಗಿದೆ. ಕಲ್ಲಿದ್ದಲು ಗಣಿಗಾರಿಕೆ ಮಾಡಲು ಬೇಕಾಗಿ ರಾಜ್ಯದ ದಟ್ಟವಾದ ಹಸ್‌ದೇವ್‌ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುವ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದರು. ಕಾಂಗ್ರೆಸ್ ಶಾಸಕರು ಚರ್ಚೆಗೆ ಆಗ್ರಹಿಸಿ ಸದನದ ಬಾವಿಗಿಳಿದಾಗ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟಾಗಿದೆ.

15,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರದ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮರಗಳನ್ನು ಕಡಿಯುವುದರಿಂದ ಜೀವವೈವಿಧ್ಯದಿಂದ ಕೂಡಿರುವ ಸಮೃದ್ಧವಾದ ಹಸ್‌ದೇವ್‌ ಅರಣ್ಯ ಪ್ರದೇಶದಲ್ಲಿ ವಾಸಿಸುವ ಸಸ್ಯ, ಪ್ರಾಣಿ ಮತ್ತು ಬುಡಕಟ್ಟು ಜನಾಂಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಇದನ್ನೂ ಓದಿ:‘ಮೀಸಲಾತಿಗೆ ವಿರುದ್ಧ ಇದ್ದರು’ | ನೆಹರೂ ವಿರುದ್ಧ ಮತ್ತೆ ದಾಳಿ ಮಾಡಿದ ಪ್ರಧಾನಿ ಮೋದಿ

ಹಸ್‌ದೇವ್‌ ಅರಣ್ಯ ಪ್ರದೇಶದಲ್ಲಿನ ಎಲ್ಲಾ ಕಲ್ಲಿದ್ದಲು ಬ್ಲಾಕ್‌ಗಳನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿ 2022 ರ ಜುಲೈ 26ರಂದು ರಾಜ್ಯದ ವಿಧಾನಸಭೆಯು ಈಗಾಗಲೇ ಖಾಸಗಿ ಸದಸ್ಯರ ನಿರ್ಣಯವನ್ನು ಅಂಗೀಕರಿಸಿದೆ ಎಂದು ಕಾಂಗ್ರೆಸ್ ನೆನಪಿಸಿದೆ. ಅದಾಗ್ಯೂ, ಮರ ಕಡಿಯಲು ಆದೇಶ ನೀಡುವಲ್ಲಿ ಬಿಜೆಪಿಗೆ ಇಷ್ಟೊಂದು ಆತುರ ಏಕೆ ಇದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಲ್ಲದೆ, ಈ ಕುರಿತು ಕೇಂದ್ರಕ್ಕೆ ಪತ್ರವನ್ನೂ ಕಳುಹಿಸಲಾಗಿದ್ದು, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದ ಕಾಂಗ್ರೆಸ್ ಸೂಚನೆಯನ್ನು ಸ್ಪೀಕರ್ ರಮಣ್ ಸಿಂಗ್ ಅವರು ತಿರಸ್ಕರಿಸಿದ್ದರು. ಇದರ ನಂತರ ಸದನದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಸ್ಪೀಕರ್ ಅವರು ಈಗಾಗಲೇ ನೋಟಿಸ್ ಅನ್ನು ನಿರಾಕರಿಸಿದ್ದಾರೆ, ಹೀಗಾಗಿ ವಿಪಕ್ಷಗಳ ಬೇಡಿಕೆ “ಅನ್ಯಾಯ”ದಿಂದ ಕೂಡಿದೆ ಎಂದು ಶಾಸಕಾಂಗ ವ್ಯವಹಾರಗಳ ಸಚಿವ ಬ್ರಿಜ್‌ಮೋಹನ್ ಅಗರವಾಲ್  ಬಣ್ಣಿಸಿದ್ದಾರೆ.

ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ, ಛತ್ತೀಸ್‌ಗಢದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಕಳೆದ ವರ್ಷ ಡಿಸೆಂಬರ್ 11 ರಂದು ಹಸ್‌ದೇವ್‌ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಯೋಜನೆಗಾಗಿ 91.3 ಹೆಕ್ಟೇರ್‌ನಲ್ಲಿರುವ 15,307 ಮರಗಳನ್ನು ಮರಗಳನ್ನು ಕಡಿಯಲು ಆದೇಶ ಹೊರಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಚರಣದಾಸ್ ಮಹಂತ್ ಹೇಳಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡ | ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ

ಹಸ್‌ದೇವ್‌ಪ್ರದೇಶದಲ್ಲಿ ಗಣಿಗಾರಿಕೆ ರದ್ದುಪಡಿಸುವ ಖಾಸಗಿ ಸದಸ್ಯರ ನಿರ್ಣಯವನ್ನು ವಿಧಾನಸಭೆ ಈಗಾಗಲೇ ಅಂಗೀಕರಿಸಿದ ನಂತರ ಅರಣ್ಯ ಇಲಾಖೆಯಿಂದ ಇಂತಹ ಆದೇಶವನ್ನು ಹೇಗೆ ಹೊರಡಿಸಲು ಸಾಧ್ಯ ಎಂದು ಚರಣದಾಸ್ ಮಹಂತ್ ಅವರು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಮರ ಕಡಿಯುವುದರ ವಿರುದ್ಧ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದರೂ, ಅದನ್ನು ಕಡಿಯಲು ಅನುಮತಿ ನೀಡಲು ಒತ್ತಾಯಿಸಿದ ಅದೃಶ್ಯ ಶಕ್ತಿ ಯಾವುದು?” ಎಂದು ಪ್ರಶ್ನಿಸಿದ್ದಾರೆ. ಹಸ್‌ದೇವ್‌ದಲ್ಲಿ ಇಂತಹ ಹಸ್ತಕ್ಷೇಪಗಳು ಬುಡಕಟ್ಟು ಜನಾಂಗದವರ ಮೇಲೆ ಮತ್ತು ಬಂಗೋ ಅಣೆಕಟ್ಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಇದರಿಂದ ಅನೇಕ ಜಿಲ್ಲೆಗಳ ನೀರಾವರಿಗೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಹಸ್‌ದೇವ್‌ ಅರಣ್ಯದ ಮರಗಳನ್ನು ಕಡಿದು ಕಲ್ಲಿದ್ದಲು ಗಣಿಗಾರಿಕೆಗೆ ದಾರಿ ಮಾಡಿಕೊಡುವುದು ಈ ಪ್ರದೇಶದಲ್ಲಿ ಮಾನವ ಮತ್ತು ಆನೆಯ ಸಂಘರ್ಷವನ್ನು ಹೆಚ್ಚಿಸುತ್ತದೆ ಎಂದು ಕಾಂಗ್ರೆಸ್ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಶಾಸಕ ಅನಿಲ ಭೇದ್ಯಾ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಹಸ್ಡಿಯಾವನ್ನು ಉಳಿಸಲು ಮತ್ತು ಆದಿವಾಸಿಗಳನ್ನು ರಕ್ಷಿಸಲು ಪ್ರಯತ್ನಿಸಬೇಕು. ಬುಡಕಟ್ಟು ಜನಾಂಗದವರಾಗಿರುವ ಮುಖ್ಯಮಂತ್ರಿ ಭೇದ್ಯಾ ಅವರು ಬುಡಕಟ್ಟು ಜನಾಂಗದವರ ಕಲ್ಯಾಣವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *