ಛತ್ತೀಸಗಢ: ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗಳ ಮೃತದೇಹವನ್ನು ತಂದೆಯೊಬ್ಬ ಸುಮಾರು 10 ಕಿಲೋ ಮೀಟರ್ ವರೆಗೂ ಹೆಗಲ ಮೇಲೆ ಹೊತ್ತುಕೊಂಡೇ ನಡೆದಿರುವುದು ವರದಿಯಾಗಿದೆ.
ಛತ್ತೀಸಗಢದ ಸರಗುಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಂಬದಾಲಾ ಹಳ್ಳಿಯ ಈಶ್ವರ್ ದಾಸ್ ಎನ್ನುವ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದ ತನ್ನ 7 ವರ್ಷದ ಮಗಳು ಸುರೇಖಾಳನ್ನು ಸರಗುಜಾ ಜಿಲ್ಲೆಯ ಲಖನ್ಪುರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು.
ಡಾ. ವಿನೋದ್ ಭಾರ್ಗವ್ ಮಾತನಾಡಿ, ಹುಡುಗಿಯ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾಗಿತ್ತು. ಆಕೆಯ ಪೋಷಕರ ಪ್ರಕಾರ ಅವಳು ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಅಗತ್ಯ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತಾದರೂ, ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಇದರಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವಳು(ಮಾ.25ರಂದು) ಬೆಳಿಗ್ಗೆ 7:30ರ ಸುಮಾರಿಗೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದರು.
ಆದರೆ, ಚಿಕಿತ್ಸೆ ಫಲಿಸದೇ ಸುರೇಖಾ ಕಳೆದ ನೆನ್ನೆ(ಮಾ.25) ಬೆಳಿಗ್ಗೆ ಮೃತಪಟ್ಟಿದ್ದರು. ಶವ ಸಾಗಿಸುವ ವಾಹನ ಬರದೇ ಇರುವುದರಿಂದಾಗಿ ಈಶ್ವರ್ ದಾಸ್ ಮಗಳ ಶವವನ್ನು ಹೊತ್ತುಕೊಂಡೇ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಈಶ್ವರ್ ದಾಸ್ ತನ್ನ ಭುಜದ ಮೇಲೆ ಮಗಳ ಶವವನ್ನು ಹೊತ್ತುಕೊಂಡು ನಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಜಿಲ್ಲಾ ಕೇಂದ್ರವಾದ ಅಂಬಿಕಾಪುರದಲ್ಲಿದ್ದ ಛತ್ತೀಸ್ಗಢದ ಆರೋಗ್ಯ ಸಚಿವ ಟಿ ಎಸ್ ಸಿಂಗ್ ಡಿಯೋ ಆದೇಶ ನೀಡಿದ್ದಾರೆ.
ಟಿ ಎಸ್ ಸಿಂಗ್ ಡಿಯೋ ಅಂಬಿಕಾಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಸಹ, “ಕರ್ತವ್ಯದಲ್ಲಿ ಸಿಬ್ಬಂದಿಗಳು ನೇಮಕಗೊಂಡಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಾಗದವರನ್ನು ತೆಗೆದುಹಾಕಬೇಕು ಎಂದು ಹೇಳಿದ್ದೇನೆ. ಕರ್ತವ್ಯದಲ್ಲಿದ್ದ ಆರೋಗ್ಯ ಸಿಬ್ಬಂದಿ ವಾಹನಕ್ಕಾಗಿ ಕಾಯುವಂತೆ ಕುಟುಂಬವನ್ನು ಮನವೊಲಿಸಬೇಕು. ಅಂತಹ ಘಟನೆಗಳು ನಡೆಯದಂತೆ ಅವರು ಖಚಿತಪಡಿಸಿಕೊಳ್ಳಬೇಕು” ಎಂದು ಸಚಿವರು ಹೇಳಿದರು.
ಇನ್ನೊಂದೆಡೆ ಶವ ಸಾಗಣೆ ವಾಹನ ಒದಗಿಸುತ್ತೇವೆ ಎಂದರೂ, ನಮ್ಮ ಮಾತು ಕೇಳದೇ ವ್ಯಕ್ತಿ ಈ ರೀತಿ ಮಾಡಿದ್ದಾರೆ ಎಂದು ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.