ಚಿತ್ರನಟ ಚೇತನ್ ವಿರುದ್ಧ ಬ್ರಾಹ್ಮಣ ಮಂಡಳಿಯಿಂದ ದೂರು

 ಸಚ್ಚದಾನಂದ ಮೂರ್ತಿಯಿಂದ ಸರಕಾರಿ ಲಾಂಛನ ದುರ್ಭಳಿಕೆ, ಸಾಮಾಜಿಕ ಕಾರ್ಯಕರ್ತೆಯಿಂದ ದೂರು

ಬೆಂಗಳೂರು: ಕನ್ನಡದ ನಟ ಚೇತನ್​​ ಸಿನಿಮಾಯೇತರ ಸಾಮಾಜಿಕ ವಿಷಯಗಳ ಕುರಿತು ನೇರ, ನಿಷ್ಠುರವಾಗಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರು ಬಳಸಿರುವ ಒಂದು ಪದ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. “ಬ್ರಾಹ್ಮಣ್ಯ” ಎಂಬ ಪದ ಬಳಕೆ ಅವರ ವಿರುದ್ದ ದೂರು ದಾಖಲಿಸುವಂತೆ ಮಾಡಿದೆ.

ಹೌದು! ‘ಬ್ರಾಹ್ಮಣ್ಯ’ ಎಂದು ಚೇತನ್ ರವರು ಬಳಸಿದ ಪದಕ್ಕೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು. ತಮ್ಮ ಸಮುದಾಯವನ್ನು ಮಾನಸಿಕವಾಗಿ ನೋಯಿಸಿದ್ದಾರೆ ಎಂದು ಆರೋಪಿಸಿ, ಬ್ರಾಹ್ಮಣ ಸಮುದಾಯದ ಮುಖಂಡ ಸಚ್ಚಿದಾನಂದ ಮೂರ್ತಿ ಅವರು ಇಂದು ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಚೇತನ್ ಟ್ವೀಟ್ ನಲ್ಲಿ ಏನಿತ್ತು?: ‘ಬ್ರಾಹ್ಮಣ್ಯವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸುತ್ತದೆ… ನಾವು ಬ್ರಾಹ್ಮಣ್ಯವನ್ನು ಬೇರುಸಹಿತ ಕಿತ್ತುಹಾಕಬೇಕು’ – ಅಂಬೇಡ್ಕರ್

‘ಎಲ್ಲರೂ ಸರಿಸಮಾನರಾಗಿ ಜನಿಸಿದರೆ, ಬ್ರಾಹ್ಮಣರು ಮಾತ್ರ ಅತ್ಯುನ್ನತರು ಮತ್ತು ಉಳಿದವರೆಲ್ಲರೂ ಕೆಳಹಂತದವರು ಮತ್ತು ಅಸ್ಪ್ರಶ್ಯರು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಇದೊಂದು ದೊಡ್ಡ ವಂಚನೆ ’- ಪೆರಿಯಾರ್

#Brahminism #Ambedkar #Periyar ಈ ರೀತಿಯ ಟ್ಯಾಗ್ ಲೈನ್ ಹಾಕಿ, ಡಾ. ಬಿ.ಆರ್ ಅಂಬೇಡ್ಕರ್ ಹಾಗೂ  ಪೆರಿಯಾರ್ ರವರ ಹೇಳಿಕೆಗಳನ್ನು ಕೋಟ್ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಉಪೇಂದ್ರ ಹೇಳಿಕೆ ಖಂಡಿಸಿದ್ದ ಚೇತನ್ : ಚಿತ್ರನಟ

 ಉಪೇಂದ್ರ ವಿರುದ್ಧವೂ ಚೇತನ್ ಸಿಡಿದೆದಿದ್ದರು. ಜಾತಿ ಬಗ್ಗೆ ಮಾತನಾಡಿದ್ರೆ ಜೀವಂತ ಇರುತ್ತೆ. ಜಾತಿ ಬಗ್ಗೆ ಮಾತನಾಡದೆ ಇದ್ದರೆ ಇರೋದಿಲ್ಲ ಹಾಗಾಗಿ ಬಡತನಕ್ಕೆ ಜಾತಿ ಲೇಪನ ಹಚ್ಚಬೇಡಿ ಎಂದು ಉಪೇಂದ್ರ ವಿಡಿಯೋ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚೇತನ್, ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿತ್ತರಂಗದವರು ಸೇವೆ ಮಾಡುತ್ತಿರುವುದು ಸಂತೋಷದ ವಿಷಯ. ಒಬ್ಬ ಸೆಲೆಬ್ರಿಟಿಯ ವೈಚಾರಿಕತೆಯ ಕೊರತೆಯ ಮಾತುಗಳನ್ನು ಕೇಳಿ ಆಶ್ಚರ್ಯವಾಗಿದೆ.

“ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ರೆ ಜೀವಂತವಾಗಿ ಉಳಿಯುತ್ತೆ, ಮಾತನಾಡದಿದ್ರೆ ಹೊರಟು ಹೋಗುತ್ತೆ. ಇದು ಎಷ್ಟು ಹಾಸ್ಯಾಸ್ಪದವಾಗಿದೆ. ಹಾಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ಹಾಗೆ ಉಳಿಯುತ್ತೆ, ಮಾತನಾಡದಿದ್ರೆ ಅದು ಹೋಗುತ್ತೆ, ಸ್ತ್ರಿ ಭ್ರೂಣ ಹತ್ಯೆ ಬಗ್ಗೆ ಮಾತನಾಡದಿದ್ರೆ ಅದು ಹೋಗುತ್ತೆ, ಕೊರೊನಾ ಬಗ್ಗೆಯೂ ಹಾಗೆ ತಜ್ಞರು ಎಲ್ಲರೂ ಮಾತನಾಡುತ್ತಿದ್ದಾರೆ. ಬಹುಷ ಮಾತನಾಡದಿದ್ರೆ ಹೊರಟು ಹೋಗುತ್ತಾ?
ಕೊರೊನಾ ಬಗ್ಗೆ ಮಾತನಾಡದಿದ್ರೆ ಹೋರಟು ಹೋಗುತ್ತಾ ಎಂದು ಚೇತನ್ ಪ್ರಶ್ನೆಗಳ ಸುರಿಮಳೆ ಗೈದಿದ್ದರು.

ಬಡತನಕ್ಕೆ ಜಾತಿ ಲೇಪನ ಹಚ್ಚಬೇಡಿ ಎನ್ನುತ್ತಾರೆ. ಆದರೆ ಚರಂಡಿ ಸ್ವಚ್ಛ ಮಾಡುವರು ಯಾರು, ಪೌರ ಕಾರ್ಮಿಕರು ಯಾರು, ಕೂಲಿ ಮಾಡುವವರು ಯಾರು..ಅವರೆಲ್ಲ ಜನಿವಾರ ಹಾಕಿಕೊಂಡವರಾ ಇಲ್ಲ. ಪರಿಶಿಷ್ಟ ಜಾತಿ ಪಂಗಡದವರು, ಶೂದ್ರ, ಅತಿ ಶೂದ್ರರು. ಜಾತಿ ಮತ್ತು ಬಡತನಕ್ಕೂ ಎಷ್ಟು ಸಂಬಂಧವಿದೆ ಎಂದು ಕಾಣುವುದಿಲ್ಲ ಎಂದರೆ ಕುರುಡುತನ ಎಷ್ಟಿದೆ. ಬನ್ನಿ ಮೂಲೆ ಮೂಲೆ ಹೋಗಿ ಕರ್ನಾಟಕದ ಹೇಗಿದೆ ಎಂದು ತೋರಿಸುತ್ತೇನೆ. ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು.’ ಎಂದು ಗುಡುಗಿದ್ದರು.

ಸಚ್ಚಿದಾನಂದ ವಿರುದ್ಧ ದೂರು : ನಟ ಚೇತನ್ ಅವರ ವಿರುದ್ದ ಬ್ರಾಹ್ಮಣರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್ ಎಸ್ ಸಚ್ಚಿದಾನಂದ ಮೂರ್ತಿ ಎಂಬವರು ಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಯ ಹೆಸರು ಮತ್ತು ಸರ್ಕಾರಿ ಮುದ್ರೆ/ಲಾಂಛನವನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಅಪರಾಧ ಮಾಡಿದ್ದಾರೆ ಇವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಕಾವ್ಯ ಅಚ್ಯುತ್ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಬ್ರಾಹ್ಮಣ ಅಭಿವೃದ್ದಿ ಮಂಡಳಿಯು ಬ್ರಾಹ್ಮಣರ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಮೀಸಲಾಗಿರುವ ಸರ್ಕಾರಿ ಸಂಸ್ಥೆಯಾಗಿದೆ. ಬಡ, ಹಿಂದುಳಿದ ಬ್ರಾಹ್ಮಣರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಜಾರಿ ಮಾಡುವುದಷ್ಟೇ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಕೆಲಸವಾಗಿರುತ್ತದೆ. ಬಡ, ಹಿಂದುಳಿದ ಬ್ರಾಹ್ಮಣರ ಅಭಿವೃದ್ದಿಯ ನಿಟ್ಟಿನಲ್ಲಿ ಕೆಲಸ ಮಾಡದ ಮಂಡಳಿ ಅಧ್ಯಕ್ಷರು, ಸರ್ಕಾರಿ ದಾಖಲೆ/ಮುದ್ರೆ/ ಲಾಂಛನ ಮತ್ತು ಕರ್ನಾಟಕ ಸರ್ಕಾರ ಎಂಬ ಹೆಸರನ್ನು ದುರುಪಯೋಗಪಡಿಸಿಕೊಂಡು ನಟ ಚೇತನ್ ವಿರುದ್ದ ದೂರು ನೀಡುವ ಮೂಲಕ ಕ್ರಿಮಿನಲ್ ಅಪರಾಧ ಮಾಡಿದ್ದಾರೆ.

ಆದ್ದರಿಂದ ಬಸವ ಅನುಯಾಯಿ ಆಗಿರುವ ಶರಣ ಚೇತನ್ ಅಹಿಂಸಾ ವಿರುದ್ದ ಸರ್ಕಾರಿ ದಾಖಲೆಯನ್ನು ದುರುಪಯೋಗಪಡಿಸಿಕೊಂಡು ಬ್ರಾಹ್ಮಣರನ್ನು ಎತ್ತಿಕಟ್ಟುವ, ಸಮುದಾಯಗಳ ಮಧ್ಯೆ ಅಶಾಂತಿ‌ ಸೃಷ್ಟಿಸುವ ಮತ್ತು ಸರ್ಕಾರಿ ಲಾಂಛನ ದುರುಪಯೋಗ ಪಡಿಸಿಕೊಂಡಿರುವ ಹೆಚ್ ಎಸ್ ಸಚ್ಚಿದಾನಂದ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ತಿಳಿಸಿದ್ದಾರೆ.

ಚೇತನ್ ಸ್ಪಷ್ಟನೆ : ನಾನು ಬ್ರಾಹ್ಮಣರ ಮನಸಿಗೆ ನೋವಾಗುವಂತಹ ಮಾತುಗಳನ್ನು ಆಡಿಲ್ಲ. ಬ್ರಾಹ್ಮಣ್ಯ ಮತ್ತು ಬ್ರಾಹ್ಮಣ ಪದಗಳಿಗೆ ಸಾಕಷ್ಟು ವ್ಯತ್ಯಾಸ ಇದೆ. ನಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧ, ಅಕಸ್ಮಾತ್ತಾಗಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರ ವಿರುದ್ಧ ಅಲ್ಲ ಎಂದು ಚಿತ್ರನಟ ಚೇತನ್ ಸ್ಪಷ್ಟ ಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *