ಚೆನ್ನೈ: ತಮಿಳುನಾಡಿನ ಮಹಾಬಲೀಪುರದಲ್ಲಿ ಕಳೆದ ತಿಂಗಳ 28 ರಂದು ಆರಂಭವಾದ 44ನೇ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ 2022 ಕ್ರೀಡಾಕೂಟ ಮುಕ್ತಾಯಗೊಂಡಿದೆ. ಚೆಸ್ ಒಲಿಂಪಿಯಾಡ್‌ನ ಸಮಾರೋಪ ಸಮಾರಂಭ ಚೆನ್ನೈನ ನೆಹರೂ ಕ್ರೀಡಾಂಗಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ, ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
44ನೇ ಚೆಸ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ 186 ದೇಶಗಳ ಆಟಗಾರರು ಭಾಗವಹಿಸಿದ್ದು, ಭಾರತದ ಪರ 30 ಮಂದಿ ಕ್ರೀಡಾಪಟುಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮುಂದಿನ ಚೆಸ್ ಒಲಿಂಪಿಯಾಡ್‌ನ ಆತಿಥೇಯ ಹಂಗೇರಿಗೆ ಫಿಡೆ ಧ್ವಜ ಹಸ್ತಾಂತರಿಸಲಾಯಿತು.
ಭಾರತಕ್ಕೆ ಕಂಚು
ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಂಚಿನ ಪದಕ ಗೆದ್ದುಕೊಂಡಿದೆ.
ವೈಯಕ್ತಿಕ ವಿಭಾಗದಲ್ಲಿ 7 ಪದಕ: ತಂಡ ವಿಭಾಗದಲ್ಲಿ ಕಂಚು ಗೆದ್ದಿರುವ ಭಾರತ ವೈಯಕ್ತಿಕ ವಿಭಾಗದಲ್ಲಿ ಎರಡು ಚಿನ್ನ ಸಹಿತ ಏಳು ಪದಕ ಜಯಿಸಿದೆ. ಡಿ. ಗುಕೇಶ್ ಮತ್ತು ಸರಿನ್ ಅನುಕ್ರಮವಾಗಿ ಅಗ್ರ ಮತ್ತು ಎರಡನೇ ಬೋರ್ಡ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಅರ್ಜುನ್ ಎರಿಗೈಸಿ ಬೆಳ್ಳಿ ಗೆದ್ದರೆ ಆರ್, ಪ್ರಜ್ಞಾನಂದ, ಆರ್. ವೈಶಾಲಿ, ತನಿಯಾ ಸಚ್‌ದೇವ್ ಮತ್ತು ದಿವ್ಯಾ ದೇಶ್‌ಮುಖ್ ಕಂಚು ಗೆದ್ದಿದ್ದಾರೆ.
ಮುಕ್ತ ವಿಭಾಗದಲ್ಲಿ ಭಾರತ ‘ಬಿ’ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡಗಳು ಕಂಚಿನ ಪದಕ ಪಡೆದುಕೊಂಡವು. 11ನೇ ಹಾಗೂ ಕೊನೆಯ ಸುತ್ತಿನಲ್ಲಿ ಭಾರತ ‘ಬಿ’ ತಂಡ 3–1 ಪಾಯಿಂಟ್‌ಗಳಿಂದ ಜರ್ಮನಿ ತಂಡವನ್ನು ಮಣಿಸಿತು. ಒಟ್ಟು 18 ಪಾಯಿಂಟ್ ಕಲೆಹಾಕಿತು. 17 ಪಾಯಿಂಟ್ ಸಂಗ್ರಹಿಸಿದ ಭಾರತ ‘ಎ’ ತಂಡ ನಾಲ್ಕನೇ ಸ್ಥಾನ ಪಡೆಯಿತು. ‘ಸಿ’ ತಂಡ 31ನೇ ಸ್ಥಾನ ಗಳಿಸಿತು.
ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಕೊನೇರು ಹಂಪಿ ನೇತೃತ್ವದ ಭಾರತ ‘ಎ’ ಕೊನೆಯ ಸುತ್ತಿನಲ್ಲಿ 1–3 ರಲ್ಲಿ ಅಮೆರಿಕ ಎದುರು ಪರಾಭವಗೊಂಡಿತು. ಇದರಿಂದ ಚಿನ್ನ ಗೆಲ್ಲುವ ಅವಕಾಶ ಕೈತಪ್ಪಿಹೋಯಿತು.
ಮಹಿಳೆಯರ ತಂಡದಲ್ಲಿ ಕೊನೇರು ಹಂಪಿ ಅಲ್ಲದೆ ಹರಿಕ ದ್ರೋನವಳಿ, ಆರ್.ವೈಶಾಲಿ, ಭಕ್ತಿ ಕುಲಕರ್ಣಿ, ತಾನಿಯಾ ಸಚ್‌ದೇವ್ ಅವರು ಆಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಭಾರತ ‘ಬಿ’ ತಂಡ ಎಂಟನೇ ಹಾಗೂ ‘ಸಿ’ ತಂಡ 17ನೇ ಸ್ಥಾನ ಪಡೆದವು.
ಚೆಸ್ ಒಲಿಂಪಿಯಾಡ್‌ನಲ್ಲಿ ಈ ಬಾರಿ ದಾಖಲೆ ಸಂಖ್ಯೆಯ ತಂಡಗಳು ಪಾಲ್ಗೊಂಡಿದ್ದವು. ಮುಕ್ತ ವಿಭಾಗದಲ್ಲಿ 188 ಹಾಗೂ ಮಹಿಳೆಯರ ವಿಭಾಗದಲ್ಲಿ 162 ತಂಡಗಳು ಇದ್ದವು.
ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಇದು ಎರಡನೇ ಕಂಚಿನ ಪದಕವಾಗಿದೆ. ತಂಡವು 2014 ರ ಪ್ರದರ್ಶನವನ್ನು ಪುನರಾವರ್ತಿಸಿತು. 2014ರಲ್ಲೂ ತಂಡದ ಭಾಗವಾಗಿದ್ದ ಅನುಭವಿ ಬಿ.ಅಧಿಬನ್ ಮತ್ತೊಂದು ಪದಕ ಗೆದ್ದಿದ್ದಾರೆ.