ಚೆನ್ನೈ: ಜುಲೈ 28 ರಿಂದ ಆರಂಭವಾಗಲಿರುವ 44ನೇ ಚೆಸ್ ಒಲಿಂಪಿಯಾಡ್ ಪಂದ್ಯ ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ನಡೆಯಲಿದೆ. ಇದರೊಂದಿಗೆ ಚೆನ್ನೈ ನಗರವೂ ಸಿಂಗಾರಗೊಂಡಿದೆ. ಚೆನ್ನೈನಲ್ಲಿರುವ ಬ್ರಿಟಿಷರ ಕಾಲದ ನೇಪಿಯರ್ ಸೇತುವೆಯನ್ನು ಚದುರಂಗದ ಫಲಕದಂತೆ ರಂಗುಗೊಳಿಸಲಾಗಿದೆ.
ತಮಿಳುನಾಡು ಸರ್ಕಾರದ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ಚದುರಂಗದ ಫಲಕದಂತೆ ಸಿಂಗರಿಸಿರುವ ನೇಪಿಯರ್ ಸೇತುವೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Chennai Nappier bridge at night
For Chennai chess Olympiad pic.twitter.com/NXR88ri4oS
— Mokka Memes (@MokkaMemes_) July 17, 2022
ಭಾರತದ ಚದುರಂಗದಾಟದ ಅಗ್ರಮಾನ್ಯ ನಗರವೆನಿಸಿಕೊಂಡಿರುವ ಚೆನ್ನೈನಲ್ಲಿ ‘ಗ್ರ್ಯಾಂಡ್ ಚೆಸ್ ಒಲಂಪಿಯಾಡ್ 2022’ ಅನ್ನು ಆಯೋಜಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ, ಚದುರಂಗದ ಫಲಕದಲ್ಲಿರುವ ಕಪ್ಪು ಮತ್ತು ಬಿಳಿ ಚೌಕಗಳ ಮಾದರಿಯಲ್ಲಿ ಸೇತುವೆಗೆ ಬಣ್ಣ ಬಳಿದಿರುವುದರ ವಿಡಿಯೋವನ್ನು ತೋರಿಸಿದ್ದಾರೆ. ಸೇತುವೆಯ ಮೇಲೆ ವಾಹನಗಳು ಚಲಿಸುತ್ತಿದ್ದರೆ ಒಂದು ಆಕರ್ಷಕವಾದ ವಿಭಿನ್ನ ಶೈಲಿಯಲ್ಲಿ ಇರುವುದನ್ನು ಕಾಣಬಹುದಾಗಿದೆ.
44ನೇ ಚೆಸ್ ಒಲಿಂಪಿಯಾಡ್‌ನ ಪ್ರಚಾರಕ್ಕೆ ತಮಿಳು ಸಿನಿಮಾ ತಾರೆಯರು, ನಿರ್ದೇಶಕರು, ನಿರ್ಮಾಪಕರು ಕೂಡ ಕೈ ಜೋಡಿಸಿದ್ದಾರೆ. ಎರಡು ದಿನದ ಹಿಂದೆ, ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಚೆಸ್ ಒಲಿಂಪಿಯಾಡ್ ಪ್ರಚಾರಕ್ಕಾಗಿ ‘ನಮ್ಮ ಊರು (ನಮ್ಮ ನಗರ) ಚೆನ್ನೈಗೆ ಸ್ವಾಗತ’ ಎಂಬ 39 ಸೆಕೆಂಡುಗಳ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಈ ಟೀಸರ್‌ನ್ನು ನಿರ್ದೇಶಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ವಿಶ್ವದ ಅತಿದೊಡ್ಡ ಚೆಸ್ ಪಂದ್ಯಾವಳಿಯ 44 ನೇ ಆವೃತ್ತಿಯು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು, ರಷ್ಯಾದಲ್ಲಿ 44ನೇ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಉಕ್ರೇನ್ ಮೇಲಿನ ಆಕ್ರಮಣದಿಂದಾಗಿ ಅದನ್ನು ಭಾರತಕ್ಕೆ ಸ್ಥಳಾಂತರಿಸಲಾಗಿತ್ತು.