ಚಿತ್ರದುರ್ಗ: ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಹೇಳಿಕೆ ವಿಚಾರ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಅವರ ಕ್ಷಮೆನೂ ಬೇಕಿಲ್ಲ, ಚರ್ಚೆ ಮಾಡುವ ಅಗತ್ಯವೂ ಇಲ್ಲ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಿರಗುಂದ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಶತಮಾನಗಳಿಂದ ಸ್ಥಾಪಿತವಾಗಿದ್ದ ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಿದ್ದಾರೆ. ಶಾಲೆ, ಕಾಲೇಜು ದಾಖಲೆನಲ್ಲಿ ಹಿಂದೂ ಅಂತ ಇದೆ, ಅಷ್ಟೊಂದು ಇದ್ದು ಕೂಡಾ ಜನರ ನಂಬಿಕೆಗೆ ಘಾಸಿ ಮಾಡಿದ್ದಾರೆ. ಇದೆಲ್ಲವನ್ನೂ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ನೆನ್ನೆ(ನವೆಂಬರ್ 08) ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಅರೆ ಬರೆ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೇ ಮಾತನಾಡಿದ್ದಾರೆ. ಅಲ್ಪಸಂಖ್ಯಾತ ಮತ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಅವರ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ. ಕ್ಷೋಭೆ ಭರಿತ ಹೇಳಿಕೆ ಎಂಬುವುದು ದೇಶ ದ್ರೋಹದ ಕೆಲಸ ಎಂದಿದ್ದರು.
ಈ ಬಗ್ಗೆ ಕಾಂಗ್ರೆಸ್ ಪಕ್ಷದವರನ್ನು ಪ್ರಶ್ನಿಸಿದ ಬಸವರಾಜ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಮಾತಿಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೌನ ಯಾಕೆ..? ನಿಮ್ಮ ಮೌನ ಸತೀಶ್ ಜಾರಕಿಹೊಳಿ ಮಾತಿಗೆ ಸಮ್ಮತಿನಾ..? ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯ ಬಗ್ಗೆ ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಹುಳಿ ಹಿಂಡುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪ ಮಾತ್ರದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸುತ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾ ಬದ್ಧವಾದ ಹೇಳಿಕೆ. ಹಿಂದೂಗಳ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದಿದ್ದರು.
ಕಾಂಗ್ರೆಸ್ ಪಕ್ಷವು ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ವಿವರಣೆ ಕೊಡಲು ಕೇಳಿಕೊಂಡಿದೆ. ಹಿಂದೂ ಪದದ ಕುರಿತು ಸತೀಶ್ ಜಾರಕಿಹೊಳಿ ಯಾವ ಪದಕೋಶದಲ್ಲಿ ನೋಡಿ ಹೇಳಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
ಆಡಳಿತಾಧಿಕಾರಿ ನೇಮಕ ವಿಚಾರ
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕದ ವಿಚಾರ ಮಾತನಾಡಿ, ಕಂದಾಯ ಇಲಾಖೆಯಿಂದ ವರದಿ ಕೇಳಿದ್ದೇವೆ ವರದಿ ಬಂದ ಬಳಿಕ ನೋಡೋಣಾ, ಮುರುಘಾ ಮಠದ ಬಗ್ಗೆ ಒಂದು ಅರ್ಜಿ ಬಂದಿತ್ತು, ಆಡಳಿತಾಧಿಕಾರಿ ನೇಮಿಸಿ ಎಂದು, ಹೀಗಾಗಿ ನೇಮಕ ಪೂರ್ವದಲ್ಲಿ ಅಧಿಕೃತವಾಗಿ ವರದಿ ಬೇಕಿದೆ. ಹೀಗಾಗಿ ನ್ಯಾಯ ಸಮ್ಮತವಾದ ಪ್ರಕ್ರಿಯೆ ಮಾಡುತ್ತಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ನಾನು ವ್ಯಾಖ್ಯಾನ ಮಾಡಲ್ಲ ಎಂದರು.