ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಸಹಕಾರಿ ಸೊಸೈಟಿಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲು ಸಹಕಾರ ಇಲಾಖೆಗೆ ಅಧಿಕಾರ ನೀಡುವ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ಮಸೂದೆ 2021 ಕ್ಕೆ ಯಾವುದೇ ಚರ್ಚೆ ಇಲ್ಲದೆ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರಗೊಂಡಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸಿ.ಡಿ ವಿಚಾರಕ್ಕೆ ಸಂಬಂಧಿಸಿದಂತೆ ಧರಣಿ ನಡೆಸುತ್ತಿವೇಳೆ ಮಸೂದೆಯ ಬಗ್ಗೆ ಯಾವುದೇ ಚರ್ಚೆ ನಡೆಸದೇ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ಮಸೂದೆ 2021ಅಂಗೀಕಾರಗೊಂಡಿದೆ. ಈ ಮಸೂದೆ ಕುರಿತು ಜೆಡಿಎಸ್ ಸದಸ್ಯರು ಚರ್ಚೆಗೆ ಸಿದ್ಧರಾಗಿದ್ದರೂ ಸಿಡಿ ಗದ್ದಲದಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೇ ಸಭಾತ್ಯಾಗ ಮಾಡಿದ್ದಾರೆ.
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಸೂದೆಯನ್ನು ಮಂಡಿಸಿ ಮಾತನಾಡುತ್ತಾ ರಾಜ್ಯದಲ್ಲಿ 3.71 ಲಕ್ಷ ಸಹಕಾರ ಸೊಸೈಟಿಗಳಿವೆ, ಇದರಲ್ಲಿ 6,807 ಸೊಸೈಟಿಗಳನ್ನು ಅಲ್ಪಸಂಖ್ಯಾತರ ನಡೆಸುತ್ತಿದ್ದಾರೆ. ಈ ಮಸೂದೆಯಿಂದ ಸೊಸೈಟಿಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಸೊಸೈಟಿಗಳ ಸದಸ್ಯರು ಮತ್ತು ಸಾರ್ವಜನಿಕರ ಹಿತವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ 1960 ರ ಸೆಕ್ಷನ್ 27 ಎ ಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅಲ್ಪಸಂಖ್ಯಾತರಿಗೆ ಸೇರಿದ ಸೊಸೈಟಿಗಳಲ್ಲಿ ವ್ಯಾಜ್ಯದಿಂದ ಅಥವಾ ಬೇರೆ ಕಾರಣಗಳಿಂದ ವಾರ್ಷಿಕ ಮಹಾಸಭೆ ನಡೆಸದಿದ್ದರೆ, ಆಡಳಿತ ಮಂಡಳಿ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾದರೆ ಮತ್ತು ಹೊಸ ಮಂಡಳಿ ರಚಿಸದಿದ್ದರೆ, ರಿಜಿಸ್ಟ್ರಾರ್ ಅವರ ವರದಿ ಮೇರೆಗೆ ಅಂತಹ ಸೊಸೈಟಿಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಬಹುದಾಗಿದೆ ಎಂದು ಸೋಮಶೇಖರ್ ವಿವರಿಸಿದರು. ಈ ಮಸೂದೆಗೆ ಒಪ್ಪಿಗೆ ಸಿಕ್ಕ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಲಾಗುವುದು ಎಂದು ಹೇಳಿದರು.