ಬೆಂಗಳೂರು: ಚಾಣಕ್ಯ ವಿವಿ ವಿಧೇಯಕವನ್ನು ನಿನ್ನೆ ಅಂಗೀಕರಿಸಿದ್ದಾರೆ. ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ಅಂಗೀಕಾರ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಚಾಣಕ್ಯ ವಿವಿಯನ್ನು ನಡೆಸುತ್ತಿರುವುದು ಸೆಸ್ ಸಂಸ್ಥೆ. ಸೆಸ್ ಸಂಸ್ಥೆ ನಡೆಸುತ್ತಿರುವವರು ಆರ್‌ಎಸ್‌ಎಸ್ ನವರು ಎಂದು ಆರೋಪಿಸಿದರು.
ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ 50 ಕೋಟಿ ರೂಪಾಯಿಗೆ 116 ಎಕರೆ ಭೂಮಿಯನ್ನ ನೀಡಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ರೂಪಾಯಿ ಪರಿಹಾರ ನೀಡಿದೆ. ರೈತರಿಂದ ಸ್ವಾಧೀನಪಡಿಸಿಕೊಂಡು ಭೂಮಿ ಅಭಿವೃದ್ಧಿಪಡಿಸಿದ್ದಾರೆ. ಈ ಭೂಮಿ 300ರಿಂದ 400 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಸರ್ಕಾರ ಈಗ ಈ ಸಂಸ್ಥೆಗೆ ಭೂಮಿಯನ್ನು ನೀಡಿದೆ. ಆರ್ಎಸ್ಎಸ್ನವರಿಗೆ ಬಳುವಳಿಯಾಗಿ ಭೂಮಿಯನ್ನ ನೀಡಿದೆ. ಸೆಸ್ ಸಂಸ್ಥೆಗೆ ಸರ್ಕಾರ ಭೂಮಿ ನೀಡಿರುವುದು ದೊಡ್ಡ ಹಗರಣ ಎಂದು ಸಿದ್ದರಾಮಯ್ಯ ಹೇಳಿದರು.
ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಶನ್ ಆಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ ಸೇರಿದ್ದು. ಈ ಸಂಸ್ಥೆಯಲ್ಲಿ ಇರುವವರು ಆರೆಸ್ಸೆಸ್‌ನವರು. ಟ್ರಸ್ಟಿಗಳ ಪೈಕಿ ಯಾರು ಕೂಡಾ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಈ ಸಂಸ್ಥೆಗೆ ಬಿಜೆಪಿ ಸರ್ಕಾರ ಕ್ಯಾಬಿನೆಟ್ ನಿರ್ಣಯದ ಮೂಲಕ ಕೆಐಎಡಿಬಿಗೆ ಸೇರಿದ, ದೇವನಹಳ್ಳಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಜಮೀನು ನೀಡಿದೆ. ಈ ಜಮೀನನ್ನು 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಪರಿಹಾರಕ್ಕಿಂತ ಮಾರಾಟ ಸಂದರ್ಭದಲ್ಲಿ ನಾಲ್ಕೈದು ಪಟ್ಟು ಬೆಲೆ ಹೆಚ್ಚಾಗಬೇಕು. ಇಂತಹ ಜಮೀನನ್ನು ಆರೆಸ್ಸೆಸ್‌ನವರಿಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ನಿಯಮಾವಳಿಗಳ ಪ್ರಕಾರ ನಡೆಸಿಕೊಳ್ಳಲಿ. ಜಮೀನು ಕೊಡುವಾಗ ಮಾರುಕಟ್ಟೆ ಮೌಲ್ಯದ ಪ್ರಕಾರ ನೀಡಬೇಕು. ಇದು ಮನುವಾದಿಗಳ ಯುನಿವರ್ಸಿಟಿ ಆಗುತ್ತದೆ. ಚಾಣಕ್ಯ ಮನುವಾದಿ ಕುಟುಂಬಕ್ಕೆ ಸೇರಿದವರು. ಇಂತವರ ಹೆಸರಿನಲ್ಲಿ ಅವರು ಎಂತಹ ಶಿಕ್ಷಣ ಸಂಸ್ಥೆ ತೆಗೆಯಬಹುದು? ಎಂದು ಪ್ರಶ್ನಿಸಿದರು.
ಈ ವಿವಿ ಮೂಲಕ ಚಾತುವರ್ಣ ಶ್ರೇಣೀಕೃತ ವ್ಯವಸ್ಥೆ ಪುನರ್ ಸ್ಥಾಪಿಸಲು ಹೊರಟಿದ್ದಾರೆ ಎಂದ ಸಿದ್ದರಾಮಯ್ಯ ಅವರು ಸ್ಪೀಕರ್ ಕೂಡಾ ಇದಕ್ಕೆ ಮಹತ್ವ ಕೊಟ್ಟಿದ್ದಾರೆ. ಅವರು ಪಕ್ಷಾತೀತವಾಗಿ ಇರಬೇಕು. ಆದರೆ ಅವರು ನಡೆದುಕೊಂಡ ರೀತಿ ಪಕ್ಷತೀತವಾಗಿರಲಿಲ್ಲ. ಇದೊಂದು ಲೂಟಿಯಾಗಿದೆ ಹಾಗೂ ಸ್ವಜನಪಕ್ಷಪಾತವಾಗಿದೆ. ಬಿಲ್ ಭೂಮಿ ಹಂಚಿಕೆ ಆದೇಶ ರದ್ದು ಮಾಡಬೇಕು, ಖಾಸಗಿ ವಿವಿ ಮಾಡಲು ಅವಕಾಶ ಕೊಡಬಾರದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ನಾನು ಕೂಡ ವಿದ್ಯಾಸಂಸ್ಥೆ ನಡೆಸುತ್ತೇನೆ. ಈಗಾಗಲೇ ಇರುವ ವಿದ್ಯಾಸಂಸ್ಥೆಗಳ ವಿಸ್ತರಣೆಗಾಗಿ ಜಮೀನು ನೀಡುವುದು ಬೇರೆ. ಆದರೆ ಇಲ್ಲಿ ಸಂಸ್ಥೆಯೇ ಇಲ್ಲದವರೆಗೆ ಜಮೀನು ನೀಡಲಾಗಿದೆ ಎಂದು ಆರೋಪಿಸಿದರು.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿ ನೀಡಲು ನಾವು ಒಪ್ಪುವುದಿಲ್ಲ. ವಾಣಿಜ್ಯ ಉದ್ದೇಶಿತ ಜಾಗವನ್ನು ವಿವಿಗೆ ನೀಡುವುದು ಸರಿಯಲ್ಲ. ಕಲುಬುರಗಿ, ವಿಜಯಪುರ ಕಡೆ ಭೂಮಿ ಬೇಕಿದ್ದರೆ ಕೊಡಲಿ. ದೇವನಹಳ್ಳಿ ಬಳಿಯಿರುವ ಜಾಗ ನೀಡುವುದಕ್ಕೆ ನಮ್ಮ ವಿರೋಧವಿದೆ. ಈ ಜಾಗ ಹೆಚ್ಚು ಬೆಲೆಬಾಳುತ್ತೆ, ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಅಂತಹ ಜಾಗವನ್ನು ನೀಡುವುದಕ್ಕೆ ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದರು.
ಕೈಗಾರಿಕಾ ಉದ್ದೇಶದಿಂದ ವಶಪಡಿಸಿಕೊಂಡ ಜಮೀನನ್ನು ಇವರಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಆರೆಸ್ಸೆಸ್‌ಗೆ ಹಿಂಬಾಗಿಲಿನಿಂದ ಏಕೆ ಜಮೀನು ಕೊಡುತ್ತೀರಿ. ಕೊಡೋ ಹಾಗಿದ್ದರೆ ನೇರವಾಗಿಯೇ ಕೊಡಿ. ಇದು ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪ ಮಾಡಿದರು.