ದೇವನಹಳ್ಳಿ :ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂಸ್ವಾಧೀನ ವಿರೋಧಿಸಿ ಇಂದು ರೈತರು, ಕಾರ್ಮಿಕರು ಇಂದು ಬೃಹತ್ ಸಮಾವೇಶ ನಡೆಸಿದರು. ಇಲ್ಲಿಂದ ನೇರವಾಗಿ ಮುಖ್ಯಮಂತ್ರಿ ಮನೆಗೆ ಕಾಲ್ನಡಿಗೆ ಜಾತಾ ಹೊರಡಲು ಮುಂದಾಗಿದ್ದರು. ಈ ವೇಳೆ ಪೋಲಿಸರು ರೈತರನ್ನು ರಸ್ತೆಯ ಮಾರ್ಗದಲ್ಲಿಯೆ ತಡೆದಿದ್ದಾರೆ. ಈ ವೇಳೆ ರೈತರ ಮೇಲೆ ಪೋಲಿಸರು ದಬ್ಬಾಳಿಕೆ ನಡೆಸಿದ್ದಾರೆ. ಪ್ರತಿಭಟನೆಕಾರರನ್ನು ಬಲವಂತವಾಗಿ ಬಂಧಿಸಲಾಗಿದೆ.
ಬಲವಂತದ ಭೂಸ್ವಾಧೀನ ವಿರೋಧಿಸಿ, ಭೂಮಿಯ ಹಕ್ಕನ್ನು ಉಳಿಸಿಕೊಳ್ಳಲು ದೇವನಹಳ್ಳಿ ಸುತ್ತಲಿನ ಹಳ್ಳಿಗಳ ರೈತರು ನಡೆಸುತ್ತಿರುವ ಹೋರಾಟ 842 ದಿನಗಳಿಗೆ ತಲುಪಿದೆ.
ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಳ್ಳವುದನ್ನು ವಿರೋಧಿಸಿ, ರೈತರು ಹೋರಾಟವನ್ನು ನಡೆಸುತ್ತಿದ್ದಾರೆ.
ಬಿಜೆಪಿ ಸರ್ಕಾರ ಅವಧಿಯಲ್ಲಿ ಕೈಗಾರಿಕ ಸಚಿವರಾಗಿದ್ದ ಮುರಗೇಶ್ ನಿರಾಣಿ ಸೇರಿದಂತೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಆದಿಯಾಗಿ ಹಲವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ, ಚನ್ನರಾಯಪಟ್ಟಣದ ರೈತರ ಹೋರಾಟದ ಸಂಬಂಧ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುತ್ತದೆ. ಜತೆಗೆ ಅವರ ಸಮಯ ಪಡೆದು ರೈತರೊಂದಿಗೆ ಸಭೆ ನಡೆಸಲು ಕೂಡ ಕ್ರಮವಹಿಸಲಾಗುವುದು ಎಂದು ತಿಳಿಸಿದದ್ದರು ಆದರೆ ಯಾವ ಪ್ರಯತ್ನಗಳು ಆಗಿಲ್ಲ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತ ನಾಯಕ ಮಾವಳ್ಳಿ ಶಂಕರ್, ಇಂದುರಾ ಕೃಷ್ಣಪ್ಪ, ರಾಜ್ಯರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಕರ್ನಾಟಕ ಪ್ರಾಂತರೈತ ಸಂಘದ ಟಿ. ಯಶವಂತ, ವೆಂಕಟಾಚಲಯ್ಯ, ನವೀನ್ ಕುಮಾರ್, ಚಂದ್ರತೇಜಸ್ವಿ, ಪ್ರಭ, ಕರ್ನಾಟಕ ಜನಶಕ್ತಿಯ ಸಿರಿಮನೆ ನಾಗರಾಜ್, ಕುಮಾರ್ ಸಮತಲಾ, ಜನವಾದಿ ಮಹಿಳಾ ಸಂಘಟನೆಯ ದೇವಿ, ಪ್ರಾಂತ ಕೃಷಿಕೂಲಿಕಾರ ಸಂಘಟನೆ ಚಂದ್ರಪ್ಪ ಹೊಸ್ಕೆರಾ, ಸೂರ್ಯನಾರಾಯಣ ಸೇರಿದಂತೆ ಅನೇಕರಿದ್ದರು.